ಶಿವಮೊಗ್ಗ: ಕನ್ನಡ ಭಾಷೆಯ ಬಳಕೆಯ ಬಗ್ಗೆ ಹಿಂಜರಿಕೆ ಸಲ್ಲದು. ನಮ್ಮ ದೈನಂದಿನ ಮಾತುಕತೆಯಲ್ಲಿ ಸಾಧ್ಯವಾದಷ್ಟು ಕನ್ನಡ ಪದಗಳನ್ನು ಬಳಸುವ ಮೂಲಕ ಬದುಕಿನ ಅಭಿವ್ಯಕ್ತಿಯಾಗಿ ರೂಪಗೊಳ್ಳಲಿ ಎಂದು ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಹೇಳಿದರು.
ನಗರದ ಸಿ. ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜವನ್ನು ತಿದ್ದುವ ಕಾರ್ಯದಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಾವು ಆಡುವ ಮಾತು ಮತ್ತು ಸಂವಹನದ ರೀತಿ ಬಹಳ ಮುಖ್ಯ. ಇಂದು ನಮ್ಮ ಪ್ರತಿ ಮಾತಿನಲ್ಲಿಯೂ ಇಂಗ್ಲಿಷ್ ಪದಗಳು ಸಹಜವಾಗಿ ಸೇರಿಕೊಂಡಿವೆ. ಇಂಗ್ಲಿಷ್ ಬಳಕೆ ತಪ್ಪು ಎನ್ನುವುದಕ್ಕಿಂತ, ಅದೇ ಸಂದರ್ಭಗಳಲ್ಲಿ ಕನ್ನಡದ ಪದಗಳನ್ನು ಬಳಸಲು ಪ್ರಯತ್ನಿಸಬಹುದಿತ್ತಲ್ಲ ಎಂಬುದು ಮುಖ್ಯ.
ಮಕ್ಕಳೊಂದಿಗೆ ಸಂವಹನ ನಡೆಸುವಾಗ ಪೋಷಕರು ಇಂಗ್ಲಿಷ್ ಭಾಷೆಯನ್ನೇ ಬಳಸುವ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಇದರಿಂದ ಮಕ್ಕಳು ಯಾವುದೇ ಭಾಷೆಯಲ್ಲಿಯೂ ಸಮರ್ಪಕ ಪರಿಣಿತಿ ಪಡೆಯದ ಸ್ಥಿತಿ ನಿರ್ಮಾಣವಾಗಬಹುದು. ಮಕ್ಕಳಲ್ಲಿ ಮಾತೃಭಾಷೆಯ ಪದಸಂಪತ್ತು ಬೆಳೆಸುವ ಜವಾಬ್ದಾರಿ, ಮನೆಗಳಿಂದಲೇ ಆರಂಭವಾಗಬೇಕು. ಮುದ್ರಣ ಮಾಧ್ಯಮಗಳ ನಿರಂತರ ಓದು, ಹೊಸ ಕನ್ನಡ ಪದಗಳನ್ನು ಕಲಿಯಲು ಪ್ರೇರಣೆ ನೀಡುತ್ತದೆ. ನಮ್ಮ ನೆಲದಲ್ಲಿ ಬದುಕುತ್ತಿರುವ ಅನ್ಯಭಾಷಿಕರೊಂದಿಗೂ ಕನ್ನಡದಲ್ಲಿಯೇ ಮಾತನಾಡುವ ಪ್ರಯತ್ನ ಮಾಡಬೇಕು. ಅದುವೇ ಕನ್ನಡ ರಾಜ್ಯೋತ್ಸವ ಆಚರಣೆಯ ನಿಜವಾದ ಸಾರ್ಥಕತೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಒಂದು ಜನಾಂಗದ ಸಂಸ್ಕೃತಿಯನ್ನು ಗುರುತಿಸುವಾಗ ಭಾಷೆ, ಕಲೆ ಮತ್ತು ಆಹಾರ ಪದ್ಧತಿಗಳು ಪ್ರಮುಖ ಮಾನದಂಡಗಳಾಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಬಳಕೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಕನ್ನಡ ಕಲಿಯದೆಯೂ ಬದುಕು ಸಾಗಿಸಬಹುದು ಎಂಬ ಪರಿಸ್ಥಿತಿ ಇದಕ್ಕೆ ಒಂದು ಕಾರಣವಾಗಿದೆ. ಹಾಗೆಂದು ಇತರ ಭಾಷೆ ಅಥವಾ ಸಂಸ್ಕೃತಿಯನ್ನು ಗೌರವಿಸಬಾರದು ಎಂಬ ಸಂಕುಚಿತ ಮನೋಭಾವ ಇರಬಾರದು. ಎಲ್ಲರನ್ನೂ ಒಳಗೊಳ್ಳುವ ವಿಶಾಲತೆಯ ಜೊತೆಗೆ, ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ.

ಮಾತೃಭಾಷೆಯಲ್ಲಿ ಪ್ರೌಢಿಮೆ ಸಾಧಿಸುವುದರೊಂದಿಗೆ ವ್ಯಾಕರಣಬದ್ಧವಾಗಿ ಕನ್ನಡವನ್ನು ಕಲಿಯಬೇಕು. ನ್ಯಾಯಾಲಯದ ವ್ಯವಹಾರಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುತ್ತಿರುವುದು ಅಭಿನಂದನಾರ್ಹ. ವಕೀಲ ವೃತ್ತಿಯಲ್ಲಿ ಕಕ್ಷಿದಾರರಲ್ಲಿ ಆತ್ಮವಿಶ್ವಾಸ ಮೂಡಿಸಲು ಕನ್ನಡದಲ್ಲಿ ಪರಿಣಾಮಕಾರಿಯಾಗಿ ಸಂವಹನ ನಡೆಸುವ ಪ್ರಯತ್ನ.
ಕನ್ನಡ ಅತ್ಯಂತ ಶ್ರೀಮಂತ ಹಾಗೂ ವೈಜ್ಞಾನಿಕ ಭಾಷೆಯಾಗಿದೆ. ಅನೇಕ ಭಾಷೆಗಳ ಪದಗಳನ್ನು ತನ್ನೊಳಗೆ ಅಳವಡಿಸಿಕೊಂಡು ಕನ್ನಡ ಸಮೃದ್ಧವಾಗಿ ಬೆಳೆದಿದೆ. ಭಾಷೆಯ ಉಚ್ಚಾರಣೆ ಮತ್ತು ಅದರಲ್ಲಿರುವ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಅನಲಾ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕ ಡಾ. ಕಾಂತರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.