ಶಿವಮೊಗ್ಗ,ನ. 13: ಅಪಾರ್ಟ್ಮೆಂಟ್/ಫ್ಲಾಟ್ ನಿರ್ಮಿಸಿ ಕೊಡದ ಕಾರಣಕ್ಕೆ ಒಪ್ಪಂದವನ್ನು ರದ್ದುಪಡಿಸಿ, ದೂರುದಾರರಿಂದ ಪಡೆದ ಮುಂಗಡ ಹಣವನ್ನು ಶೇ. 9ರ ಬಡ್ಡಿ ಹಾಗೂ ಪರಿಹಾರದೊಂದಿಗೆ ಮರುಪಾವತಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಗೆ ಆದೇಶಿಸಿದೆ.
ಸಾಗರ ತಾಲ್ಲೂಕಿನ ಕೆರೋಡಿ ಗ್ರಾಮದ ವಾಸಿಯಾದ ಶ್ರೀಮತಿ ನಮಿತಾ ಕೆ. ಅವರು, ಬೆಂಗಳೂರಿನ ಗುಲಾಮ್ ಮುಸ್ತಾಫಾ ಎಂಟರ್ಪ್ರೈಸಸ್ ಪ್ರೈವೆಟ್ ಲಿಮಿಟೆಡ್ನ ನಿರ್ದೇಶಕರಾದ ಗುಲಾಮ್ ಮುಸ್ತಾಫಾ, ಜಾವೀದ್ ಹುಸೇನ್ ಮತ್ತು ಸುಕೇಶ್ ಜೈನ್ ಅವರ ವಿರುದ್ಧ ದೂರು ದಾಖಲಿಸಿದ್ದರು.
ದೂರುದಾರರ ಪತಿಯ ವಾಸಕ್ಕಾಗಿ ಬೆಂಗಳೂರಿನಲ್ಲಿ ಫ್ಲಾಟ್ ಖರೀದಿಸಲು ಎದುರುದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮುಂಗಡವಾಗಿ ರೂ. 9,20,000/- ಗಳನ್ನು ಪಾವತಿಸಲಾಗಿತ್ತು. ಆದರೆ, ಎದುರುದಾರರು ತಾಂತ್ರಿಕ ಕಾರಣ ನೀಡಿ ಫ್ಲಾಟ್ ನಿರ್ಮಿಸಿಕೊಡದೆ ಕಾಲಹರಣ ಮಾಡಿದ್ದರು. ಈ ಮಧ್ಯೆ ದೂರುದಾರರ ಪತಿ ಅನಾರೋಗ್ಯದಿಂದ ನಿಧನರಾಗಿದ್ದರಿಂದ, ಬೆಂಗಳೂರಿನಲ್ಲಿ ವಾಸಿಸಲು ಇಷ್ಟವಿಲ್ಲದೆ ದೂರುದಾರರು ಊರಿಗೆ ಹಿಂತಿರುಗಿದ್ದರು.

ನಂತರ ಫ್ಲಾಟ್ ಒಪ್ಪಂದವನ್ನು ರದ್ದುಪಡಿಸಿ ಮುಂಗಡ ಹಣವನ್ನು ವಾಪಸ್ ನೀಡುವಂತೆ ಕೋರಿದ್ದರು. ಎದುರುದಾರರು ಹಣ ನೀಡುವುದಾಗಿ ಭರವಸೆ ನೀಡಿ ನಂತರ ವಂಚಿಸಿದ್ದು, ಲೀಗಲ್ ನೋಟೀಸ್ಗೂ ಸ್ಪಂದಿಸಿರಲಿಲ್ಲ. ಇದರಿಂದ ನೊಂದ ದೂರುದಾರರು ಗ್ರಾಹಕ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು,ವಿಚಾರಣೆಗೆ ಗೈರುಹಾಜರಾದ 1 ರಿಂದ 4ನೇ ಎದುರುದಾರರನ್ನು ಆಯೋಗವು ಏಕಪಕ್ಷೀಯವೆಂದು ಘೋಷಿಸಿತ್ತು.
ತೀರ್ಪು:
ದೂರುದಾರರ ವಾದ ಮತ್ತು ದಾಖಲೆಗಳನ್ನು ಪರಿಶೀಲಿಸಿದ ಆಯೋಗವು, ಎದುರುದಾರರು ಮುಂಗಡ ಹಣವನ್ನು ಹಿಂದಿರುಗಿಸದೆ ಸೇವೆಯಲ್ಲಿನ್ಯೂನ್ಯತೆ ಎಸಗಿದ್ದಾರೆ ಎಂದು ತೀರ್ಮಾನಿಸಿದೆ.

1 ರಿಂದ 4ನೇ ಎದುರುದಾರರು ಜಂಟಿಯಾಗಿ ಹಾಗೂ ಪ್ರತ್ಯೇಕವಾಗಿ, ದೂರುದಾರರಿಂದ ಪಡೆದ ಮುಂಗಡ ಹಣದಲ್ಲಿ RERA ನಿಯಮಗಳಂತೆ ಶೇ.2ರಷ್ಟು ಕಡಿತಗೊಳಿಸಿ, ಉಳಿದ ರೂ. 9,01,600/- ಗಳಿಗೆ ದಿನಾಂಕ:18/08/2024ರಿಂದ ವಾರ್ಷಿಕ ಶೇ.9ರ ಬಡ್ಡಿಯೊಂದಿಗೆ 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದ್ದಲ್ಲಿ ಶೇ.12ರಂತೆ ಬಡ್ಡಿ ಅನ್ವಯವಾಗಲಿದೆ.

ಮಾನಸಿಕ ಹಿಂಸೆ ಮತ್ತು ದೂರಿನ ವೆಚ್ಚಕ್ಕಾಗಿ ರೂ. 25,000/- ಹಾಗೂ ರೂ. 10,000/- ಗಳನ್ನು ಸಹ 45 ದಿನಗಳೊಳಗೆ ನೀಡಬೇಕು. ತಪ್ಪಿದಲ್ಲಿ ಇದಕ್ಕೆ ವಾರ್ಷಿಕ ಶೇ.10 ರಂತೆ ಬಡ್ಡಿ ವಿಧಿಸಲಾಗುವುದು ಎಂದು ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರು ದಿನಾಂಕ: 07/11/2026 ರಂದು ಆದೇಶ ಹೊರಡಿಸಿದ್ದಾರೆ.