ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿವಿಧ ಜ್ವಲಂತ ಸಮಸ್ಯೆಗಳ ಕುರಿತು ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯ್ಕ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇಂದು ಮನವಿ ಸಲ್ಲಿಸಿ, ರೈತರು ಹಾಗೂ ಗ್ರಾಮೀಣ ಜನರ ಹಿತದೃಷ್ಟಿಯಿಂದ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕುಗಳಿಗೆ ಸಂಬಂಧಿಸಿದಂತೆ ಬರ ಪರಿಸ್ಥಿತಿ, ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶ (ESA) ಪ್ರಸ್ತಾವನೆ, ರೋಡ್ ನೆಟ್ವರ್ಕ್ ಗ್ರಿಡ್ ಪ್ಲಾನ್ ಹಾಗೂ ನೀರಾವರಿ ಯೋಜನೆಗಳ ಕುರಿತು ಮನವಿಯಲ್ಲಿ ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಗಿದೆ.
ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ, ಹೊಳಲೂರು, ಕುಂಸಿ ಹಾಗೂ ಆಯನೂರು ಹೋಬಳಿಗಳಲ್ಲಿ ವಾಡಿಕೆಗಿಂತ ಶೇ.69ರಷ್ಟು ಮುಂಗಾರು ಮಳೆ ಕೊರತೆಯಾಗಿದೆ ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಬಿತ್ತನೆಯಾಗಿರುವ 17,205 ಹೆಕ್ಟೇರ್ಗಳಲ್ಲಿ ಸುಮಾರು 13,305 ಹೆಕ್ಟೇರ್ ಪ್ರದೇಶ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಅನಾವೃಷ್ಟಿಯಿಂದ ಬಾಧಿತವಾಗಿದ್ದು, ಮೆಕ್ಕೆಜೋಳ, ರಾಗಿ ಹಾಗೂ ಭತ್ತ ಸೇರಿದಂತೆ ಸುಮಾರು ಶೇ.75ರಷ್ಟು ಬೆಳೆಗಳು ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ.
ಅಂತರ್ಜಲ ಮಟ್ಟ ಕುಸಿದಿರುವುದರಿಂದ ಕೊಳವೆಬಾವಿಗಳಲ್ಲಿಯೂ ನೀರಿನ ಲಭ್ಯತೆ ಕಡಿಮೆಯಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆಯಲ್ಲಿ ಬೆಳೆಹಾನಿ ದಾಖಲಾಗಿರುವ ಹಿನ್ನೆಲೆಯಲ್ಲಿ ಹಾರನಹಳ್ಳಿ, ಆಯನೂರು, ಕುಂಸಿ ಹಾಗೂ ಹೊಳಲೂರು ಹೋಬಳಿಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ನಾಲ್ಕು ಹೋಬಳಿಗಳ ವ್ಯಾಪ್ತಿಯ 54 ಕೆರೆಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ಅಂತರ್ಜಲ ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆಯಿದೆ ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.
ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕ್ಷೇತ್ರದ 61 ಗ್ರಾಮಗಳ ಜನರ ಆತಂಕಗಳನ್ನು ಪರಿಗಣಿಸಿ, ಪ್ರಸ್ತಾವಿತ ಕ್ರಮವನ್ನು ಮರುಪರಿಶೀಲಿಸಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.

ಈ ಗ್ರಾಮಗಳಲ್ಲಿ ಈಗಾಗಲೇ ವಿವಿಧ ಯೋಜನೆಗಳಿಂದ ಸ್ಥಳಾಂತರ ಹಾಗೂ ಪುನರ್ವಸತಿ ಸಮಸ್ಯೆಗಳನ್ನು ಎದುರಿಸಿರುವ ಕುಟುಂಬಗಳಿದ್ದು, ಹೊಸ ನಿಯಂತ್ರಣಗಳಿಂದ ಗ್ರಾಮೀಣ ಜನರ ಕೃಷಿ, ಜೀವನೋಪಾಯ ಹಾಗೂ ಭವಿಷ್ಯದ ಅಭಿವೃದ್ಧಿಗೆ ತೊಂದರೆಯಾಗುವ ಆತಂಕವಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2026ರ ಜುಲೈ 27ರಂದು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆ ಪ್ರಕಟಿಸಿದ್ದು, ಅದರ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ/ಅಭಿಪ್ರಾಯಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಕ್ಷೇತ್ರದ ಗ್ರಾಮಸ್ಥರ ಅಭಿಪ್ರಾಯಗಳನ್ನು ಪರಿಗಣಿಸಿ, ಕಸ್ತೂರಿ ರಂಗನ್ ವರದಿಯ ಆಧಾರದ ಮೇಲಿನ ESA ಪ್ರಸ್ತಾವನೆಗೆ ರಾಜ್ಯ ಸರ್ಕಾರದಿಂದ ಮನ್ನಣೆ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.

ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಪ್ರಸ್ತಾವಿತ Road Network Grid Plan ಹಲವು ಗ್ರಾಮಗಳ ಕೃಷಿ ಭೂಮಿಗಳ ಮೂಲಕ ಹಾದುಹೋಗಲಿದ್ದು, ಇದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.
ಅರಹತೊಳಲು, ಹನುಮಂತಾಪುರ, ಕೆಂಗನಳ್ಳಿ (ಅಶೋಕನಗರ), ಮಲ್ಲಾಪುರ, ಕನಸಿನಕಟ್ಟೆ, ಸನ್ಯಾಸಿಕೋಡಮಗ್ಗಿ, ನಾಗಸಮುದ್ರ, ಸಿದ್ದಿಪುರ, ಹೊಳೆಹಟ್ಟಿ, ಸೂಗೂರು, ಬುಳ್ಳಾಪುರ (ಗೊರುವಿಕಟ್ಟೆ), ಕೂಡ್ಲಿ, ಜಾವಳ್ಳಿ, ಬಿ.ಬೀರನಹಳ್ಳಿ, ವೆಂಕಟಾಪುರ, ಬೆಳಗಲು, ಕಾಟೀಕೆರೆ, ದಾಸರಕಲ್ಲಹಳ್ಳಿ, ತಿಮ್ಲಾಪುರ, ಮಾರಶೆಟ್ಟಿಹಳ್ಳಿ, ತಟ್ಟೆಹಳ್ಳಿ, ಅಗಸನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಈ ಭಾಗದಲ್ಲಿ ಅಡಿಕೆ, ದ್ವಿದಳ ಧಾನ್ಯಗಳು ಸೇರಿದಂತೆ ಭತ್ತ, ರಾಗಿ, ಜೋಳ ಹಾಗೂ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಫಲವತ್ತಾದ ಕೃಷಿ ಭೂಮಿಗೆ ಯೋಜನೆಯಿಂದ ಧಕ್ಕೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ರೈತರ ಆಕ್ಷೇಪಣೆಗಳನ್ನು ಪರಿಗಣಿಸಿ ಯೋಜನೆಯನ್ನು ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.

ಕ್ಷೇತ್ರದ ನೀರಾವರಿ ಸಮಸ್ಯೆ ನಿವಾರಣೆಗೆ ಹೊಸಹಳ್ಳಿ/ತುಂಗಾ ಏತ ನೀರಾವರಿ ಯೋಜನೆಯಡಿ ಗ್ರಾವಿಟಿ ಮೂಲಕ ನೀರು ತಲುಪದ ಕೆರೆಗಳಿಗೆ ಪೈಪ್ಲೈನ್ ಮೂಲಕ ನೀರು ತುಂಬಿಸುವ ಕಾಮಗಾರಿಗಳಿಗೆ ಅನುಮೋದನೆ ಹಾಗೂ ಅನುದಾನ ಬಿಡುಗಡೆ ಮಾಡುವಂತೆ ಶಾಸಕರು ಮನವಿ ಮಾಡಿದ್ದಾರೆ.
ಹರಕೆರೆ ಗ್ರಾಮದ ಬಳಿ ತುಂಗಾ ನದಿಯಿಂದ ನೀರನ್ನು ಎತ್ತಿ ಶಿವಮೊಗ್ಗ ತಾಲ್ಲೂಕಿನ ಹಾಯ್ಹೊಳೆ, ಬ್ಯಾರೇಹಳ್ಳ ಹಾಗೂ ಗೌಡನಕೆರೆಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಯಿಂದ ರೈತರಿಗೆ ಅನುಕೂಲವಾಗುತ್ತಿದೆ. ಆದರೆ ಗೌಡನಕೆರೆಯಿಂದ ಸವಳಂಗ ಕೆರೆಯವರೆಗೆ ಇರುವ ಹಳ್ಳ/ನಾಲೆ ವ್ಯವಸ್ಥೆ ಹಾನಿಗೊಳಗಾಗಿರುವುದು ಹಾಗೂ ರೈತರು ಮಾರ್ಗಮಧ್ಯೆ ಪಂಪ್ ಸೆಟ್ ಮೂಲಕ ನೀರು ಎತ್ತಿಕೊಳ್ಳುವುದರಿಂದ ಕೊನೆಯ ಭಾಗದ ಕೆರೆಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದು ಶಾಸಕರು ತಿಳಿಸಿದ್ದಾರೆ.
ಹೀಗಾಗಿ ಕೊಳವೆ ಮಾರ್ಗದ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಮನವಿ ಮಾಡಲಾಗಿದೆ.
ಮನವಿಯಲ್ಲಿ ಒಟ್ಟು ₹22.42 ಕೋಟಿ ಅಂದಾಜು ಮೊತ್ತದ ಮೂರು ಹಂತಗಳ ಕಾಮಗಾರಿಗಳಿಗೆ ಅನುದಾನ ಕೋರಲಾಗಿದೆ. ಇದರಲ್ಲಿ ಯರೆಕೊಪ್ಪ ಹೊಸೂರು, ಸೇವಾಲಾಲ್ ನಗರ, ಕೊನಗವಳ್ಳಿ, ಮುದುವಾಲ–ಎಡವಾಲ ಮಾರ್ಗದ 8 ಕೆರೆಗಳಿಗೆ ಪೈಪ್ಲೈನ್ ಮೂಲಕ ನೀರು ತುಂಬಿಸುವ ಕಾಮಗಾರಿಗೆ ₹9.76 ಕೋಟಿ, ಮಲ್ಲಾಪುರ–ಹಿಟ್ಟೂರು–ರಾಮನಗರ ವ್ಯಾಪ್ತಿಯ 8 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ₹9.96 ಕೋಟಿ ಹಾಗೂ ಕುಂಸಿ ಗ್ರಾಮದ ಹೊಸಕೆರೆಯಿಂದ ಕೆಳಭಾಗದ 18 ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ₹2.70 ಕೋಟಿ ಸೇರಿದಂತೆ ಒಟ್ಟು ₹22.42 ಕೋಟಿ ಅನುದಾನಕ್ಕೆ ಮನವಿ ಮಾಡಲಾಗಿದೆ.
ರೈತರ ಬೆಳೆ ರಕ್ಷಣೆ, ಕುಡಿಯುವ ನೀರಿನ ಭದ್ರತೆ, ಗ್ರಾಮೀಣ ಅಭಿವೃದ್ಧಿ ಹಾಗೂ ನೀರಾವರಿ ಸೌಲಭ್ಯ ವಿಸ್ತರಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.