ಶಿವಮೊಗ್ಗ: ವೋಟ್ ಬಚಾವೋ, ದೇಶ ಬಚಾವೋ ಎಂಬ ಘೋಷಣೆಯೊಂದಿಗೆ ನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಿಂದ ಆರಂಭವಾದ ಮೆರವಣಿಗೆ ಮಹಾವೀರ ವೃತ್ತದವರೆಗೆ ಸಾಗಿತು. ಮೆರವಣಿಗೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್ಎಸ್ಯುಐ ಹಾಗೂ ವಿವಿಧ ಮುಂಚೂಣಿ ಘಟಕಗಳ ಸದಸ್ಯರು ಭಾಗವಹಿಸಿ, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ, ಬಿಸಿಲನ್ನೂ ಲೆಕ್ಕಿಸದೇ ಮಾನವ ಸರಪಳಿ ರಚಿಸಿ ಪ್ರತಿಭಟನಾ ಸಭೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೀಶ್, ಬಿಜೆಪಿಯು ಸಂವಿಧಾನ ವಿರೋಧಿಗಳಾಗಿದ್ದಾರೆ. ಪವಿತ್ರವಾದ ಮತದಾನದ ಕಳ್ಳತನಕ್ಕೆ ಕೈಹಾಕಿದ್ದಾರೆ. ಸುಮಾರು 13 ಕೋಟಿ ಮತಗಳನ್ನು ರದ್ದುಪಡಿಸಲಾಗಿದೆ. ಇವರು ಯಾರೂ 2014ರಲ್ಲಿ ಮತ ಹಾಕಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು ಇವು ಕಾಂಗ್ರೆಸ್ ಮತಗಳು ಎಂದು ಗೊತ್ತಾಗಿಯೇ ಡಿಲಿಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇವತ್ತು ಶಿವಮೊಗ್ಗದಲ್ಲಿ ಅರಾಜಕತೆಯ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅರಾಜಕತೆ ಎನ್ನುವ ಅರ್ಥವೇ ಇವರಿಗೆ ಗೊತ್ತಿಲ್ಲ. ಯಾವುದು ಅರಾಜಕತೆ? ಉದ್ಯೋಗ ನೀಡದಿರುವುದೇ? ನೋಟ್ ಬ್ಯಾನ್ ಮಾಡುವುದೇ? ಜಾಗಟೆ ಬಾರಿಸುವುದೇ? ಧರ್ಮದ ಹೆಸರಲ್ಲಿ ಜನರನ್ನು ದಾರಿ ತಪ್ಪಿಸುವುದೇ? ಕಸ, ಯೋಗದ ಹೆಸರಲ್ಲಿ ಜನರನ್ನು ದಿಕ್ಕು ತಪ್ಪಿಸುವುದೇ ಎಂದು ಪ್ರಶ್ನೆ ಮಾಡಿದರು.
ನಿಗಮ ಮಂಡಳಿ ಅಧ್ಯಕ್ಷರಾದ ಸಿ.ಜಿ. ಮಧುಸೂದನ್, ಕೆ. ಚೇತನ್ ಗೌಡ ಮಾತನಾಡಿ, ಮತದಾನ ಎಂಬುದು ಪ್ರಜಾಪ್ರಭುತ್ವದ ಮೂಲ ಆಧಾರ. ಮತದಾರರ ಪಟ್ಟಿಯಲ್ಲಿನ ಅಕ್ರಮಗಳು, ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಮತದಾರರ ಹೆಸರು ಕೈಬಿಡುವ ಪ್ರಕ್ರಿಯೆ ಮತ್ತು ಇವಿಎಂ ಕುರಿತ ಅನುಮಾನಗಳನ್ನು ದೂರ ಮಾಡದೆ ಚುನಾವಣೆ ನಡೆಸಿದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ, ಕಾಂಗ್ರೆಸ್ ಮುಖಂಡರುಗಳಾದ ರಮೇಶ್ ಹೆಗ್ಡೆ, ಕಲೀಂ ಪಾಷಾ, ಇಸ್ಮಾಯಿಲ್ ಖಾನ್, ಶಿವಕುಮಾರ್, ಡಾ.ಶ್ರೀನಿವಾಸ ಕರಿಯಣ್ಣ, ಎಸ್.ಟಿ. ಹಾಲಪ್ಪ, ಎಸ್.ಪಿ. ಶೇಷಾದ್ರಿ, ಚಂದ್ರಭೂಪಾಲ್ ಮುಂತಾದವರು ಮಾತನಾಡಿ, ಮತವನ್ನು ಕಾಪಾಡುವುದು ಎಂದರೆ ದೇಶವನ್ನು ಕಾಪಾಡಿದಂತೆ. ಆದ್ದರಿಂದ ಪ್ರತಿಯೊಬ್ಬ ಮತದಾರರ ಮತದ ಹಕ್ಕು ಉಳಿಯಬೇಕು, ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಡಬಾರದು, ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು. ಮತ್ತು ಚುನಾವಣೆಯಲ್ಲಿ ಅಕ್ರಮ ಎಸಗಿದ ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಆರ್. ರಾಜಶೇಖರ್, ಎಸ್.ಟಿ. ಚಂದ್ರಶೇಖರ್, ಪಿ.ಎಸ್. ಗಿರೀಶ್ ರಾವ್, ಹರ್ಷಿತ್ ಗೌಡ, ಪಿ.ಒ. ಶಿವಕುಮಾರ್, ಯು. ಶಿವಾನಂದ, ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಕುಮಾರ್(ದನಿ), ಕಾಂಗ್ರೆಸ್ ಮುಖಂಡರಾದ ನೇತ್ರಾವತಿ ಗೌಡ, ಕೆ. ರಂಗನಾಥ್, ನಾಗರಾಜ್ ಕಂಕಾರಿ, ಹೆಚ್. ಪಾಲಾಕ್ಷಿ, ಶಿವಣ್ಣ, ಹೆಚ್.ಎಂ. ಮಧು, ರೇಖಾ ರಂಗನಾಥ್, ಕೆ. ದೇವೇಂದ್ರಪ್ಪ, ವಿಶ್ವನಾಥ್ ಕಾಶಿ, ನೇತಾಜಿ, ಮಂಜುನಾಥ ಬಾಬು, ಕೆ.ಜೆ. ನಾಗೇಶ್ ನಾಯ್ಕ್, ಇಕ್ಕೇರಿ ರಮೇಶ್, ಚಿನ್ನಪ್ಪ, ಸ್ಟೆಲಾ ಮಾರ್ಟಿನ್, ಕವಿತಾ ತೋರಟ್, ವಿಜಯಲಕ್ಷಿö್ಮ ಪಾಟೀಲ್, ಭಾರತಿ ರಾಮಕೃಷ್ಣ, ಮಂಜುಳಾ ರವಿ, ಕವಿತಾ, ಗಂಗಾಧರ್, ಸುವರ್ಣಾ ನಾಗರಾಜ್, ಮೊದಲಾವರು ಇದ್ದರು.
3