ಶಿವಮೊಗ್ಗ: ಬೆಂಗಳೂರಿನ ಕೋರಮಂಗಲ ಕ್ರೀಡಾಂಗಣದಲ್ಲಿ ಸೆ.16ರಿಂದ 19ರವರೆಗೆ ನಡೆದ ಅಧಿಕೃತ ಸೌತ್ ಇಂಡಿಯಾ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಶಿವಮೊಗ್ಗದ ಮೀನಾಕ್ಷಿ ಆರ್. ಅವರು 60–65 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ ಎಂದು ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆ ಅಧ್ಯಕ್ಷ ಶಿವಮೊಗ್ಗ ವಿನೋದ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಮೀನಾಕ್ಷಿ ಅವರು ಈ ಸಾಧನೆ ಮಾಡಿದ್ದಾರೆ. ಸೌತ್ ಇಂಡಿಯಾ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಪದಕ ಬಂದಿರುವುದು ಇದೇ ಮೊದಲು ಎಂದರು.

ಮೀನಾಕ್ಷಿ ಅವರು ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ ಕ್ರೀಡಾಪಟುವಾಗಿದ್ದು, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್ಎಐ)–ಎನ್ಐಎಸ್ ತರಬೇತಿ ಪಡೆದ ಜಿಲ್ಲೆಯ ಮೊದಲ ಬಾಕ್ಸಿಂಗ್ ಕೋಚ್ ಆಗಿದ್ದಾರೆ. ಶಿವಮೊಗ್ಗ ಜಿಲ್ಲಾ ಬಾಕ್ಸಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಕೋಚ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಈ ಹಿಂದೆ ರಾಜ್ಯಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿರುವ ಅವರು, ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯ ಮಹಿಳಾ ಬಾಕ್ಸಿಂಗ್ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ ಎಂದರು.

ಬೆಳ್ಳಿ ಪದ ವಿಜೇತರಾದ ಮೀನಾಕ್ಷಿ,ಸಂಸ್ಥೆಯ ಖಜಾಂಚಿ ಅನೂಪ್ ಆರ್. ಶೇಖರ್, ರಾಜ್ಯ ಬಾಕ್ಸಿಂಗ್ ತೀರ್ಪುಗಾರ ಮಲ್ಲಿಕಾರ್ಜುನ್, ಪ್ರಕೃತಿ ಆರ್. ಗೌಡರ್ ಇದ್ದರು.