ಶಿವಮೊಗ್ಗ : ನಗರದ ಗಾಂಧಿಪಾರ್ಕ್ ಬಳಿ ಡಿವಿಎಸ್ ವೃತ್ತದಲ್ಲಿ 12ನೇ ಶತಮಾನದ ಸಮಾಜ ಸುಧಾರಕ ಹಾಗೂ ವಚನಕಾರ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಬಸವೇಶ್ವರರ ಪುತ್ಥಳಿಯನ್ನು ಶಿವಮೊಗ್ಗ ನಗರಕ್ಕೆ ಲಂಡನ್‌ನ ನೀರಜ್ ಪಾಟೀಲ್ ರವರು ಕೊಡುಗೆಯಾಗಿ ನೀಡಿದ್ದರು. ಶಿವಮೊಗ್ಗ ನಗರ ಪಾಲಿಕೆ ಮೂರ್ತಿ ಪ್ರತಿಷ್ಠಾಪನೆಗೆ 2018-19ನೇ ಸಾಲಿನ ಬಜೆಟ್‌ನಲ್ಲಿ 25 ಲಕ್ಷ ರೂ. ಅನುದಾನ ಕೂಡಾ ಕಾಯ್ದಿರಿಸಿತ್ತು. ನಂತರ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾನೆಯನ್ನು ಕಳುಹಿಸಲಾಗಿತ್ತು.
ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ಅನಾವರಣ ಮಾಡಬಾರದೆಂಬ ನ್ಯಾಯಲಯದ ನಿರ್ದೇಶನದ ಹಿನ್ನಲೆಯಲ್ಲಿ ಈ ಪ್ರಸ್ತಾವನೆ ವಾಪಾಸ್ ಬಂದಿತ್ತ. ನಂತರವೂ ಸಾರ್ವಜನಿಕ ವಲಯದಿಂದ ಪುತ್ಥಳಿ ಪ್ರತಿಷ್ಠಾಪನೆ ಮಾಡಲು ಒತ್ತಾಯ ಕೇಳಿಬಂದಿತ್ತು. ಪಾಲಿಕೆ ಸದಸ್ಯ ಹೆಚ್.ಸಿ. ಯೊಗೇಶ್ ಅವರು ಸಮಾನ್ಯ ಸಭೆಯಲ್ಲಿ ಬಸವೇಶ್ವರರ ಪೊಷಾಕಿನಲ್ಲಿ ಪಾಲ್ಗೊಂಡು ಮೂರ್ತಿ ಪ್ರತಿಷ್ಠಾಪನೆಗೆ ಶೀಘ್ರಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಿದ್ದರು. ಪಾಲಿಕೆಯ ಆಗಿನ ಮೇಯರ್ ಲತಾ ಗಣೇಶ್ ಪುತ್ಥಳಿ ಪ್ರತಿಷ್ಠಾಪನೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ನಂತರ ಪಾಲಿಕೆಯ ಸಭೆ 2020 ರ ಬಸವ ಜಯಂತಿಗೆ ಮುನ್ನವೇ ಪುತ್ಥಳಿಯನ್ನು ಅನಾವರಣಗೊಳಿಸುವುದಾಗಿ ನಿರ್ಣಯ ಕೈಗೊಂಡಿದ್ದರೂ ಕೂಡಾ ಅದು ಫಲ ನೀಡಿರಲಿಲ್ಲ.
ಇತ್ತೀಚೆಗೆ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಸವೇಶ್ವರ ಪುತ್ಥಳಿ ಅನಾವರಣದ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಸಚಿವ ಸಂಪುಟದ ತೀರ್ಮಾನದ ನಂತರ ಪುತ್ಥಳಿಯ ಪ್ರತಿಷ್ಠಾಪನೆ ಶೀಘ್ರವೇ ಸಂಪನ್ನಗೊಳ್ಳುವ ನಿರೀಕ್ಷೆ ಇದೆ.
ಮುಖ್ಯಮಂತ್ರಿಗಳಿಗೆ ಶ್ರೀಗಳ ಅಭಿನಂದನೆ
ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆಗೆ ಒಪ್ಪಿಗೆ ನೀಡಿರುವುದಕ್ಕೆ ಶಿವಮೊಗ್ಗ ಬವಸವಕೇಂದ್ರ ಹಾಗೂ ಚಿಕ್ಕಮಗಳೂರಿನ ಬಸವಮಂದಿರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಅವರು ನಗರದ ನಾಗರೀಕರ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಭಿನಂದಿಸಿದ್ದಾರೆ. ಆನಂದಪುರಂ – ಬೆಕ್ಕಿನ ಕಲ್ಮಠದ ಶ್ರೀಗಳು ಕೂಡಾ ಈ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಈ ಕಾರ್ಯ ನೆರವೇರುವಲ್ಲಿ ಸಹಕಾರ ನೀಡಿದ ಜಿಲ್ಲಾ ಉಸ್ತವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್. ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ಹೆಚ್.ಸಿ. ಯೊಗೇಶ್ ಸೇರಿದಂತೆ ಪಾಲಿಕೆಯ ಎಲ್ಲಾ ಸದಸ್ಯರಿಗೂ ಶ್ರೀಗಳು ಅಭಿನಂದನೆ ತಿಳಿಸಿದ್ದಾರೆ.