ಶಿವಮೊಗ್ಗ: ನಕಲಿ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಯೊಬ್ಬರ ಬಂಗಾರದ ಸರವನ್ನು ವಂಚನೆಯಿಂದ ಪಡೆದು ಪರಾರಿಯಾಗಿದ್ದ ಕುಖ್ಯಾತ ಅಂತರ್ರಾಜ್ಯ ಇರಾನಿ ಗ್ಯಾಂಗ್ನ ಇಬ್ಬರು ಆರೋಪಿಗಳನ್ನು ಪೇಪರ್ ಟೌನ್ ಪೊಲೀಸರು ಬಂಧಿಸಿ, ₹4.35 ಲಕ್ಷ ಮೌಲ್ಯದ 40 ಗ್ರಾಂ ಬಂಗಾರದ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.

2025ರ ನವೆಂಬರ್ 17ರಂದು ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಲಾಪುರದಲ್ಲಿ ಮಹಿಳೆಯೊಬ್ಬರು ಒಬ್ಬರೇ ತೆರಳುತ್ತಿದ್ದ ವೇಳೆ ಅಪರಿಚಿತರು ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು. ಬಳಿಕ ಮಹಿಳೆಯ ಬಳಿ ಇದ್ದ ಬಂಗಾರದ ಸರವನ್ನು ಪರಿಶೀಲನೆ ಮಾಡುವ ನೆಪದಲ್ಲಿ ಪಡೆದು ಮೋಸದಿಂದ ಪರಾರಿಯಾಗಿದ್ದರು. ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 127/2025ರ ಅಡಿಯಲ್ಲಿ ಬಿಎನ್ಎಸ್ ಕಾಯ್ದೆಯ ಕಲಂ 318(4) ಅನ್ವಯ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತನಿಖಾ ತಂಡವು ಕಾರ್ಯಾಚರಣೆ ನಡೆಸಿ, ಕುಖ್ಯಾತ ಅಂತರ್ರಾಜ್ಯ ಇರಾನಿ ಗ್ಯಾಂಗ್ನ ಸದಸ್ಯರಾದ ಸೈಯದ್ ಅಬ್ಬಾಸ್ ಅಲಿ @ ಕೊಡಿ @ ಅಬು ಹಾಗೂ ಹುಸೇನ್ ಭಾಷಾ, ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರಿಂದ ಸುಮಾರು ₹4,35,000 ಮೌಲ್ಯದ 40 ಗ್ರಾಂ ತೂಕದ ಬಂಗಾರದ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಈ ಗ್ಯಾಂಗ್ನ ಇನ್ನಿತರ ಕೃತ್ಯಗಳ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.