ಶಿವಮೊಗ್ಗ: ಸವಳಂಗ ರಸ್ತೆಯ ಕೊಮ್ಮನಾಳು ಸಮೀಪದ ಖಾಸಗಿ ಶಾಲೆಯ ಬಳಿ ಕಾರು ನಿಲ್ಲಿಸಿದ್ದ ವ್ಯಕ್ತಿಗೆ ಚಾಕು ತೋರಿಸಿ ಬೆದರಿಸಿ ಹಣ ಹಾಗೂ ಚಿನ್ನಾಭರಣ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಮ್ಮನಾಳು ಗ್ರಾಮದ ಲಿಖಿತ್ ಹಾಗೂ ಬಿಕ್ಕೋನಹಳ್ಳಿಯ ದೀಪು ಬಂಧಿತ ಆರೋಪಿಗಳು. ಹೊಸನಗರ ತಾಲೂಕಿನ ಮತ್ತಲಿ ಜಡ್ಡು ಗ್ರಾಮದ ರೈತ ಆರ್. ಸುಭಾಷ್ ದರೋಡೆಗೆ ಒಳಗಾದವರು.

ಆ.14ರ ರಾತ್ರಿ ಸುಭಾಷ್ ಅವರು ಸ್ವಂತ ಕೆಲಸದ ನಿಮಿತ್ತ ಕಾರಿನಲ್ಲಿ ಸವಳಂಗಕ್ಕೆ ತೆರಳಿ, ಕೆಲಸ ಮುಗಿಸಿಕೊಂಡು ಹಿಂದಿರುಗುವ ವೇಳೆ ಕೊಮ್ಮನಾಳು ಸಮೀಪದ ಖಾಸಗಿ ಶಾಲೆಯ ಬಳಿ ಮೂತ್ರವಿಸರ್ಜನೆಗಾಗಿ ಕಾರು ನಿಲ್ಲಿಸಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಇಬ್ಬರು ಆರೋಪಿಗಳು ಚಾಕು ತೋರಿಸಿ ಬೆದರಿಸಿ ಅವರ ಬಳಿಯಿದ್ದ ₹2 ಸಾವಿರ ನಗದು ಹಾಗೂ ಸುಮಾರು ₹90 ಸಾವಿರ ಮೌಲ್ಯದ 6 ಗ್ರಾಂ ತೂಕದ ಚಿನ್ನದ ಬ್ರಾಸ್ಲೆಟ್ ಕಿತ್ತುಕೊಂಡು ಪರಾರಿಯಾಗಿದ್ದರು.

ಘಟನೆ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮಾಹಿತಿ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಂಧನದೊಂದಿಗೆ ಪ್ರಕರಣದ ತನಿಖೆ ಮುಂದುವರಿದಿದ್ದು, ದರೋಡೆಗೆ ಬಳಸಿದ ವಸ್ತುಗಳು ಹಾಗೂ ಇತರೆ ವಿಚಾರಗಳ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.