ಶಿವಮೊಗ್ಗ: ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಅ. 3 ಮತ್ತು 4ರಂದು ನಡೆದ ರಾಜ್ಯಮಟ್ಟದ ಯು–14 ಮತ್ತು ಯು–17 ಬಾಕ್ಸಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟುಗಳು ಪದಕ ಗಳಿಸಿದ್ದಾರೆ.

ಯು–14ರ 44–46 ಕೆ.ಜಿ. ವಿಭಾಗದಲ್ಲಿ ಸೀಮಾ ಇಂಗ್ಲಿಷ್ ಸ್ಕೂಲ್ನ ವಿದ್ಯಾರ್ಥಿ ಮನೋಜ್ ಸಿ. ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಅವರು ದೆಹಲಿಯಲ್ಲಿ ನಡೆಯಲಿರುವ ಎಸ್ಜಿಎಫ್ಐ ರಾಷ್ಟ್ರಮಟ್ಟದ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಯು–17ರ 75–80 ಕೆ.ಜಿ. ವಿಭಾಗದಲ್ಲಿ ಡಿ.ವಿ.ಎಸ್. ಪ್ರೌಢಶಾಲೆಯ ವಿದ್ಯಾರ್ಥಿ ರಿತೇಶ್ ಎಂ. ಬೆಳ್ಳಿ ಪದಕ ಪಡೆದಿದ್ದಾರೆ.

ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಸ್ಪರ್ಧೆ ನಡೆಯಿತು. ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ವಿನೋದ್, ಖಜಾಂಚಿ ಹಾಗೂ ಕೋಚ್ ಅನೂಪ್ ಆರ್. ಶೇಖರ್, ಜಂಟಿ ಕಾರ್ಯದರ್ಶಿ ಶ್ರೇಯಸ್, ಕಾರ್ಯದರ್ಶಿ ಮೀನಾಕ್ಷಿ ಹಾಗೂ ಸದಸ್ಯರಾದ ದಿಗಂತ್ ಮತ್ತು ಸಾದ್ ಉಪಸ್ಥಿತರಿದ್ದರು.

ಮನೋಜ್ ಮತ್ತು ರಿತೇಶ್ ಅವರ ಸಾಧನೆಗೆ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.