ವರದಿ: ರವಿ ಎಂ.
ಶಿವಮೊಗ್ಗ,ನ.19:
ಇತ್ತೀಚೆಗಷ್ಟೇ ಶಿವಮೊಗ್ಗದ ತಿಲಕ್ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿ ಆರಂಭಗೊಂಡ ಗ್ಯಾಲಘರ್ (Gallagher) ಕಂಪನಿಯ ವಾಹನಗಳನ್ನು ನಿಗದಿತ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸದೆ, ಮನೆಗಳ ಮುಂಭಾಗದಲ್ಲಿ ನಿಲ್ಲಿಸುತ್ತಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿಬಂದಿದೆ.

ಕಂಪನಿಯ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಅದನ್ನು ಸಮರ್ಪಕವಾಗಿ ಬಳಸದೆ, ಮನೆಗಳ ಮುಂದೆ ವಾಹನಗಳನ್ನು ನಿಲ್ಲಿಸಿ ಮನೆಯವರಿಗೆ ಓಡಾಟಕ್ಕೆ ತೊಂದರೆ ಉಂಟುಮಾಡುತ್ತಿರುವುದು ಸರಿಯಲ್ಲ. ಈ ವಿಚಾರವಾಗಿ ಪ್ರಶ್ನಿಸಿದ ಮನೆಯವರೊಂದಿಗೆ ವಾಹನ ಚಾಲಕರು ಅಥವಾ ಸಿಬ್ಬಂದಿ ಜಗಳಕ್ಕೆ ಇಳಿಯುತ್ತಿರುವುದು ಇನ್ನಷ್ಟು ಆತಂಕಕಾರಿ ಸಂಗತಿಯಾಗಿದೆ.

ಕಂಪನಿಯು ತನ್ನ ಸಿಬ್ಬಂದಿಗೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಬೇಕು. ವಾಹನಗಳನ್ನು ನಿಗದಿತ ಪಾರ್ಕಿಂಗ್ ಸ್ಥಳದಲ್ಲಿಯೇ ನಿಲ್ಲಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಸ್ಥಳೀಯ ನಿವಾಸಿಗಳ ನೆಮ್ಮದಿ, ಸಾರ್ವಜನಿಕರ ಸಂಚಾರ ಮತ್ತು ಮನೆಗಳ ಮುಂಭಾಗದ ಸ್ವಾತಂತ್ರ್ಯಕ್ಕೆ

ಧಕ್ಕೆಯಾಗದಂತೆ ಕಂಪನಿಯ ಆಡಳಿತ ಮಂಡಳಿ ತಕ್ಷಣ ಗಮನಹರಿಸಬೇಕು ಎಂದು ಆಗ್ರಹಿಸಲಾಗಿದೆ.
ಸಾರ್ವಜನಿಕರಿಗೆ ತೊಂದರೆ ನೀಡದೆ, ನಿಯಮಬದ್ಧವಾಗಿ ವಾಹನ ನಿಲುಗಡೆ ಮಾಡುವ ಜವಾಬ್ದಾರಿಯನ್ನು ಕಂಪನಿ ನಿರ್ವಹಿಸಬೇಕು ಎಂಬುದು ಪಬ್ಲಿಕ್ ಆಗ್ರಹ.