ಶಿವಮೊಗ್ಗ, ಅ.05
ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ‘ಸಿನಿಮೊಗೆ’ ಶಿವಮೊಗ್ಗ ಚಿತ್ರ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 14 ರಂದು ‘ಶಿವಮೊಗ್ಗ ಸಿನಿ ದಸರಾ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಬಾರಿಯ ಉತ್ಸವದಲ್ಲಿ ವಿಶೇಷವಾಗಿ ಕನ್ನಡಕ್ಕೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ತಂದುಕೊಟ್ಟ ಮಹನೀಯರ ಚಿತ್ರಗಳ ಪ್ರದರ್ಶನ ಹಾಗೂ ಸಂಭ್ರಮಾಚರಣೆ ನಡೆಯಲಿದೆ.

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಡಾ. ರಾಜ್ಕುಮಾರ್, ಅನಂತ್ನಾಗ್ ಹಾಗೂ ಬಾಲಿವುಡ್ನ ಖ್ಯಾತ ಛಾಯಾಗ್ರಾಹಕ ವಿ. ಕೆ. ಮೂರ್ತಿ ಅವರು ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಾರ್ಯಕ್ರಮದಲ್ಲಿ ವಿ. ಕೆ. ಮೂರ್ತಿ (ವಿ.ಕೆ. ಮೂರ್ತಿಯವರು ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ಹೂವು-ಹಣ್ಣು’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದರು) ಅವರನ್ನು ಸ್ಮರಿಸಿ, ಅವರ ಕುರಿತ ಕಿರು ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುವುದು.
ಅಕ್ಟೋಬರ್ 14 ಕ್ಕೆ ಉದ್ಘಾಟನೆ:
ಅ. 14 ರ ಬೆಳಿಗ್ಗೆ 10 ಗಂಟೆಗೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಹೆಸರಾಂತ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಿನಿ ದಸರಾವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಟಿ ಸಂಗೀತಾ ಅನಿಲ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ದೇಶಾದ್ರಿ ಹೊಸ್ಮನಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ. ವಿ. ತುಕಾರಾಮ ರಾವ್ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಸಾಧಕರಿಗೆ ಸನ್ಮಾನ:
ಸಮಾರಂಭದಲ್ಲಿ ‘ಸಿನಿಮೊಗೆ’ ಚಿತ್ರ ಸಮಾಜ ಹಾಗೂ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರನ್ನು ಗೌರವಿಸಲಾಗುವುದು. ಜೊತೆಗೆ ಸ್ಥಳೀಯ ಪ್ರತಿಭೆಗಳಾದ ಗಾರ್ಗಿ ಕಾರೆಹಕ್ಲು(ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪುರಸ್ಕೃತರು) ಚಂದ್ರಶೇಖರ ಶಾಸ್ತ್ರಿ (ಲಕ್ಷ್ಮೀನಿವಾಸ ಧಾರಾವಾಹಿ), ಚಂದ್ರಶೇಖರ ಹಿರೇಗೋಣಿಗೆರೆ (ಕಾಮಿಡಿ ಕಿಲಾಡಿಗಳು), ನಟ ದಾನಮ್, ನಟ ಹಾಗೂ ಸಂಘಟಕ ಶಿವಮೊಗ್ಗ ರಾಮಣ್ಣ ಮತ್ತು ಸಿನಿಮಾ ಸಂಘಟಕ ರಘು ಗುಂಡ್ಲು ಅವರನ್ನು ಸನ್ಮಾನಿಸಲಾಗುವುದು.
ಚಿತ್ರಮಂದಿರಗಳಲ್ಲಿ ರಾಜ್-ಅನಂತ್ ಚಿತ್ರಗಳ ಉಚಿತ ಪ್ರದರ್ಶನ:
ಅ. 14 ರ ಬೆಳಿಗ್ಗೆ 10 ಕ್ಕೆ ಶ್ರೀ ಮಲ್ಲಿಕಾರ್ಜುನ ಚಿತ್ರಮಂದಿರ – ಎರಡು ಕನಸು
ಅ. 15 ರ ಬೆಳಿಗ್ಗೆ 10 ಕ್ಕೆ : ಶ್ರೀ ವೀರಭದ್ರೇಶ್ವರ ಚಿತ್ರಮಂದಿರ – ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಾಸರಗೋಡು
ಅ. 16 ರ ಬೆಳಿಗ್ಗೆ 10 ಕ್ಕೆ ಶ್ರೀ ಮಲ್ಲಿಕಾರ್ಜುನ ಚಿತ್ರಮಂದಿರ – ಸಂಪತ್ತಿಗೆ ಸವಾಲ್
ಅ. 17 ರ ಬೆಳಿಗ್ಗೆ 10 ಕ್ಕೆ ಶ್ರೀ ವೀರಭದ್ರೇಶ್ವರ ಚಿತ್ರಮಂದಿರ – ಗಾಳಿಪಟ-2
‘ಪ್ರತಿಬಿಂಬ’ ಕಿರುಚಿತ್ರಗಳ ಉತ್ಸವ ಹಾಗೂ ಸಂವಾದ:
ಉದ್ಘಾಟನೆಯ ನಂತರ ಮಲೆನಾಡಿನ ಪ್ರತಿಭೆಗಳು ನಿರ್ಮಿಸಿದ 10 ಕಿರುಚಿತ್ರಗಳ ‘ಪ್ರತಿಬಿಂಬ’ ಉತ್ಸವ ನಡೆಯಲಿದೆ. ‘ಮಾಲ್ಗುಡಿ ಡೇಸ್’ ಖ್ಯಾತಿಯ ಮಾಸ್ಟರ್ ಮಂಜುನಾಥ್ ಹಾಗೂ ಮಾಸ್ಟರ್ ರೋಹಿತ್ ಶ್ರೀನಾಥ್ ಚಾಲನೆ ನೀಡಿ ಸಂವಾದ ನಡೆಸಲಿದ್ದಾರೆ.

ಇಲ್ಲಿ ಕಬಂಧ (ಪೃಥ್ವಿ ಗೌಡ), ಶರಾವತಿ (ಪ್ರಶಾಂತ್ ಸಾಗರ್), ದಿ ಗಿಫ್ಟ್ (ನಾಗರಾಜ್ ನೀಲ್), ದಾಳಿ (ಮೇದಿನಿ ಕೆಳಮನೆ), ಡಬಲ್ ಟಿಕ್ (ಈಶಾನ್ಯ ಶರ್ಮ), ಖಾಸಗಿ ಕನಸಿನ ಕಾಗದ (ನಾಗರಾಜ ಕಿತ್ತೂರ್), ಗೋಣಿ ಚೀಲ (ನವನ್ ಶ್ರೀನಿವಾಸ್), ವಡ್ಡಾರಾಧಕ (ಅನಿಶ್ ಶರ್ಮ), ಹಬ್ಬ ಹರಿದಿನ ಸುಗ್ಗಿ ಶಿವರಾತ್ರಿ (ನವೀನ್ ತೇಜಸ್ವಿ) ಹಾಗೂ ಘಮ (ವಿದ್ಯಾಲಕ್ಷ್ಮಿ ಪ್ರಹ್ಲಾದ್) ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ.
ರಾಜ್ – ಅನಂತ್ ಗಾನ ಯಾನ:

ಸಂಜೆ ವರ್ಣರಂಜಿತ ‘ರಾಜ್-ಅನಂತ್ ಗಾನ ಯಾನ’ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಗಾಯಕರಾದ ವಿನಯ್ ಶಿವಮೊಗ್ಗ, ಪೃಥ್ವಿ ಗೌಡ, ಕಾರ್ತಿಕ್ ನಾಗಲಾಪುರ ಹಾಗೂ ಸಂಗೀತಾ ಅವರು ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ವಾದ್ಯವೃಂದದಲ್ಲಿ ಮೇಲ್ವಿನ್ ಲೀಮಾ, ವಿನಯ್, ರಮೇಶ್, ರಾಘವೇಂದ್ರ ರಂಗಧೋಳ್ ಮತ್ತು ವಿಠ್ಠಲ್ ರಂಗಧೋಳ್ ಸಾಥ್ ನೀಡಲಿದ್ದಾರೆ. ಇಮ್ಯಾಜಿನ್ ಡಾನ್ಸ್ ಸ್ಟುಡಿಯೋ ತಂಡದಿಂದ ನೃತ್ಯ ಪ್ರದರ್ಶನ ಜರುಗಲಿದೆ.