
ಶಿವಮೊಗ್ಗ: ದೆಹಲಿಯಲ್ಲಿ ಚುನಾವಣೆ ಆಯೋಗದ ಮುಖ್ಯ ಚುನಾವಣೆ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ವರದಿ ಮಾಡಲು ತೆರಳಿದ್ದ ಪತ್ರಕರ್ತೆಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಪೋಲೀಸರ ದುರ್ವರ್ತನೆಯನ್ನು ಶಿವಮೊಗ್ಗ ಪ್ರೆಸ್ಟ್ರಸ್ಟ್ ತೀವ್ರವಾಗಿ ಖಂಡಿಸಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಟ್ರಸ್ಟ್, ಮಾಧ್ಯಮ ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಯು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಯತ್ನವಾಗಿದೆ. ಪತ್ರಕರ್ತೆಯರ ನ್ಯಾಯಸಮ್ಮತ ಕರ್ತವ್ಯಕ್ಕೆ ಅಡ್ಡಿ ಮಾಡಿರುವುದಲ್ಲದೆ, ಅಗೌರವವಾಗಿ ನಡೆಸಿಕೊಂಡಿರುವ ದೆಹಲಿ ಪೊಲೀಸರ ನಡೆ ಅಕ್ಷಮ್ಯವಾದುದಾಗಿದೆ. ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

ದೂರು ನೀಡಿದ ಪತ್ರಕರ್ತೆಯರನ್ನೇ ವಶಕ್ಕೆ ಪಡೆದು ಕಿರುಕುಳ ನೀಡಲಾಗಿದೆ. ಅಧಿಕೃತ ಗುರುತಿನ ಚೀಟಿ ಹೊಂದಿದ್ದರೂ ಅವರನ್ನು ಅನುಮಾನದಿಂದ ನೋಡಿರುವ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ಖಂಡನೀಯವಾದುದಾಗಿದೆ ಎಂದು ಪ್ರೆಸ್ ಟ್ರಸ್ಟ್ನ ಅಧ್ಯಕ್ಷ

ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ, ಉಪಾಧ್ಯಕ್ಷ ಹೊನ್ನಾಳಿ ಚಂದ್ರಶೇಖರ್, ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಖಜಾಂಚಿ ಕೆ.ತಿಮ್ಮಪ್ಪ , ಹಿರಿಯ ಪತ್ರಕರ್ತರಾದ ಗೋಪಾಲ್ ಯಡಗೆರೆ, S.k Gajendraswamy ಜೇಸುದಾಸ್, ರಾಮಚಂದ್ರ ಗುಣಾರಿ ಮತ್ತು ಎಲ್ಲಾ ಟ್ರಸ್ಟಿಗಳು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.