ಹೊಸನಗರ; ಹೊಸನಗರ ನ್ಯಾಯಾಲಯದಿಂದ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದ ಆರೋಪಿಯೊಬ್ಬ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾದ ಘಟನೆ ಬುಧವಾರ ನಡೆದಿದೆ. ಕಳ್ಳಬೇಟೆ ಆರೋಪದಡಿ ತಾಲೂಕಿನ ಅಡುಗೋಡಿ ಗ್ರಾಮದ ವೆಂಕಟೇಶ ಎಂಬಾತನನ್ನು ಅರಣ್ಯ ಸಿಬ್ಬಂದಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಂಗ ಬಂಧನ ಆದೇಶ

ಹೊರಡಿಸಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಜೀಪಿನಲ್ಲಿ ಕಾರಾಗೃಹದತ್ತ ಕರೆಯುತ್ತಿದ್ದರು. ಮಾರ್ಗಮದ್ಯ ಬಟ್ಟೆಮಲ್ಲಪ್ಪ ಗ್ರಾಮದಲ್ಲಿ ತೀವ್ರ ಹಸಿವಾಗುತ್ತಿದೆ ತಿನ್ನಲು ಏನಾದರೂ ಬೇಕು ಎಂದು ಆರೋಪಿ ಕೇಳಿಕೊಂಡಿದ್ದು, ಉಪವಲಯ ಅರಣ್ಯಾಧಿಕಾರಿ ಸುನಿಲ್ ಡಿ ಕುಂಬಾರ್ ಜೀಪಿನಿಂದ ಇಳಿದು ಹೋಟೇಲ್ಗೆ ಹೊರಟಿದ್ದರು. ಈ ವೇಳೆ ಆರೋಪಿಯು ಜೀಪಿನಲ್ಲಿದ್ದ ಉಳಿದ ಸಿಬ್ಬಂದಿಯನ್ನು ತಳ್ಳಾಡಿ, ಏಕಾಏಕಿ ಹಲ್ಲೆ ನಡೆಸಿ ಜೀಪಿನಿಂದ ಜಿಗಿದು ಓಡಿ ಹೋಗಿದ್ದಾನೆ. ಸುತ್ತಮುತ್ತಲ ಪ್ರದೇಶದಲ್ಲಿ ಸಾಕಷ್ಟು ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

ತಂಡ ರಚನೆ: ಆರೋಪಿಗಾಗಿ ಹುಡುಕಾಟ: ಹೊಸನಗರ ಸರ್ಕಲ್ ಇನ್ಸ್ಪೇಕ್ಟರ್ ಗೌಡಪ್ಪ ಗೌಡರ್ರವರ ಮಾರ್ಗದರ್ಶನದಲ್ಲಿ ಸಬ್ಇನ್ಸ್ಪೇಕ್ಟರ್ ಶಂಕರ ಗೌಡ ಪಾಟೀಲ್ರವರ ನೇತೃತ್ವದ ಪೋಲೀಸ್ ತಂಡ ರಚಿಸಿ ಆರೋಪಿಯ ಪತ್ತಿಗಾಗಿ ಬಲೆ ಬೀಸಿದ್ದಾರೆ.