ಶಿವಮೊಗ್ಗ : ಸಮಗ್ರ ಮತ ಪಟ್ಟಿ ಪರಿಷ್ಕರಣಾ (ಎಸ್ಐಆರ್) ಪ್ರಕ್ರಿಯೆಯ ಸದುಪಯೋಗವನ್ನು ಭಾರತೀಯ ಪ್ರತಿ ಪ್ರಜೆಯೂ ಪಡೆದುಕೊಳ್ಳಬೇಕು ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಕರೆ ನೀಡಿದರು.
ಅವರು ಇಂದು ನಗರದ ಎಸ್.ಪಿ.ಎಂ.ರಸ್ತೆಯಲ್ಲಿ ರಾಷ್ಟ್ರಭಕ್ತರ ಬಳಗವು ಗೋವರ್ಧನ ಟ್ರಸ್ಟ್ ಸಹಯೋಗದಲ್ಲಿ ಎಸ್ಐಆರ್ ಸಂಬಂಧಿ ಮತದಾರರ ಎರಡನೇಯ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರವು ಮತಪಟ್ಟಿ ಶುದ್ಧೀಕರಣಕ್ಕಾಗಿ ಉತಮ ಕಾರ್ಯವನ್ನು ಅಸರಂಭಿಸಿದೆ. ಪ್ರತಿಯೊಬ್ಬ ಅರ್ಹ ಮತದಾರ ಇದನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕು ಎಂದ ಅವರು ರಾಷ್ಟ್ರಭಕ್ತರ ಬಳಗ ಇಂಥಹ ಸೇವಾ ಕಾರ್ಯವನ್ನು ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆಯಲ್ಲದೆ ಇವರ ಕಾರ್ಯ ಶ್ಲಾಘನೀಯ ಎಂದರು.
ಭಾರತದಲ್ಲಿ ಬಾಂಗ್ಲಾ, ಪಾಕಿಸ್ತಾನಗಳಿಂದ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಯಾವುದೇ ದೇಶಕ್ಕಾದರೂ ಆತಂಕಕಾರಿಯೇ. ಈ ನುಸುಳುಕೋರರನ್ನು ದೇಶದಿಂದ ಹೊರ ಹಾಕಲು ಎಸ್ಐಆರ್ ಬಹುಮುಖ್ಯವಾಗಿದೆ.


ಪ್ರಜಾಪ್ರಭುತ್ವದಲ್ಲಿ ಚುನಾವಣಾ ಗುರುತಿನ ಪತ್ರ ಎಲ್ಲರಲ್ಲೂ ಮೂಲಭೂತವಾಗಿರಬೇಕು. ಈ ಸಂದರ್ಭದಲ್ಲಿ ಯಾರೂ ಮೈಮರೆಯಬಾರದು. ಎಲ್ಲರೂ ಜಾಗೃತರಾಗಿರಬೇಕು ಎಂದು ಕಿವಿಮಾತು ಹೇಳಿದರು. ರಾಷ್ಟ್ರಭಕ್ತರ ಬಳಗದ ಅಧ್ಯಕ್ಷ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಎಸ್ ಐ ಆರ್ ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಪ್ರಜೆಯ, ರಾಜಕಾರಣಿಯ ಕರ್ತವ್ಯ. ಇದರಲ್ಲಿ ವಿಫಲವಾದರೆರಾಜಕಾರಣ ಮಾಡುವುದು ವ್ಯರ್ಥ. ಹೊರ ದೇಶಗಳಿಂದ ನುಸುಳುಕೋರನ್ನು ಪತ್ತೆ ಹಚ್ಚಲು ಎಸ್ ಐಆರ್ ಸಹಕಾರಿ ಎಂದರು.

ಸೊರಬದ ಜಡೆ ಮಠದ ಡಾ.ಮಹಾಂತಸ್ವಾಮೀಜಿ ಮಾತನಾಡಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಕೇವಲ ಸಂಸ್ಕೃತಿ, ಪರಂಪರೆಯ ರಕ್ಷಣೆ ಮಾಡುತ್ತಿಲ್ಲ. ಎಸ್ಐಆರ್ ಮಾಹಿತಿ ಕೇಂದ್ರವನ್ನು ಆಂಭಿಸುವುದರ ಮೂಲಕ ಪ್ರಜಾಪ್ರಭುತ್ವದ ರಕ್ಷಣೆಗೂ ಮುಂದಾಗಿರುವುದು ಅಭಿನಂದನೀಯ ಎಂದರು.

ಸಮಾರಂಭದಲ್ಲಿ ಪ್ರಮುಖರಾದ ಈ.ವಿಶ್ವಾಸ್, ಮಹಾಲಿಂಗ ಶಾಸ್ತ್ರೀ, ಮೋಹನ್ ಜಾಧವ್, ಸುವರ್ಣಾ ಶಂಕರ್, ಲಕ್ಷ್ಮೀ ಶಂಕರ ನಾಯಕ್, ಲತಾ ಗಣೇಶ್, ಶಿವಾಜಿ, ಬಾಲು, ಅನಿತಾ, ಕೆಂಪಮ್ಮ, ಸೀತಾಲಕ್ಷ್ಮೀ ಮೊದಲಾದವರಿದ್ದರು.

ಜುಲೈ ೨೦ರಂದು ಬೊಮ್ಮನಕಟ್ಟೆಯಲ್ಲಿ ಸೇವಾ ಕೇಂದ್ರ ಆರಂಭ
ಜೂ.೧೬ರಂದು ತಮ್ಮ ಬಳಗದ ವತಿಯಿಂದ ಶುಭಮಂಗಳ ಸಮುದಾಯ ಭವನದಲ್ಲಿ ಪ್ರಥಮ ಮಾಹಿತಿ ಸೇವಾ ಕೇಂದ್ರ ತೆರೆದಿದ್ದು ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರಕುತ್ತಿದೆ. ಇಲ್ಲಿಯವರೆಗೆ ಸುಮಾರು ೬,೪೦೦ಕ್ಕೂ ಹೆಚ್ವು ಮತದಾರರು ಎಸ್ಐಆರ್ ಮಾಹಿತಿ ಪಡೆದುಕೊಂಡಿದ್ದಾರೆ. ಜಿಲ್ಲೆಯಿಂದಷ್ಟೇ ಅಲ್ಲ. ಹೊರ ರಾಜ್ಯ, ಹೊರ ದೇಶಗಳಿಂದಲೂ ಮತದಾರರು ಸಂಪರ್ಕಿಸುತ್ತಿದ್ದಾರೆ. ನಗರದ ಮತದಾರರಿಗೆ ಇನ್ನಷ್ಟು ಸಹಾಯ ಮಾಡಲು ಜು.೨೦ರಂದು ಬೊಮ್ಮನಕಟ್ಟೆಯಲ್ಲಿ ಬಳಗದ ವತಿಯಿಂದ ಮೂರನೇ ಎಸ್ಐಆರ್ ಮತದಾರ ಸೇವಾ ಕೇಂದ್ರವನ್ನು ಆರಂಭಿಸಲಾಗುವುದು ಎಂಬ ಮಾಹಿತಿ ನೀಡಿದರು.
-ಕೆ.ಈ. ಕಾಂತೇಶ್, ರಾಷ್ಟ್ರಭಕ್ತರ ಬಳಗದ ಸಂಚಾಲಕ