ಶಿವಮೊಗ್ಗ : ಭಜನೆ ಎಂಬ ಮೂರರಕ್ಷರದಲ್ಲಿ ಅತೀವ ಶಕ್ತಿ ಅಡಗಿದೆ ಎಂದು ಮೂತ್ರಕೋಶ ಹಾಗೂ ಮೂತ್ರಪಿಂಡ ಖ್ಯಾತ ತಜ್ಞ ವೈದ್ಯ ಡಾ. ಚಂದ್ರಶೇಖರ್ ಹೇಳಿದರು. ಶಿವಮೊಗ್ಗ ನಾಗಸುಬ್ರಹ್ಮಣ್ಯ ದೇವಾಲಯದಲ್ಲಿ, ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ, ಶ್ರೀ ಸ್ವಾಮಿ ವಿವೇಕಾನಂದ ಅಡ್ವೆಂಚರ್ ಮತ್ತು ಸ್ಪೋರ್ಟ್ಸ್ ಕ್ಲಬ್, ಅರ್ಚಕ ವೃಂದ ಮತ್ತು ಭಜನಾ ಪರಿಷತ್ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ, ಆಷಾಢ ಭಜನಾ ಮಾಸೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಜನೆ ಎಂಬುದು ಹಾಡು ಅಲ್ಲ,

ಪ್ರಾರ್ಥನೆಯಲ್ಲ. ಇದು ನಮ್ಮ ಮನಸ್ಸನ್ನು ಶಾಂತಗೊಳಿಸುವ ಮತ್ತು ಭಗವಂತನೊಂದಿಗೆ ನಮ್ಮನ್ನು ಬೆಸೆಯುವ ಆಧ್ಯಾತ್ಮಿಕ ಸಾಧನವಾಗಿದೆ. ಇದು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದ್ದು, ಜನರಲ್ಲಿ ಭಕ್ತಿ, ಏಕತೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.

ಇಂದಿನ ಒತ್ತಡದ ಜೀವನದಲ್ಲಿ ಭಜನೆಯು ಉತ್ತಮ ಔಷಧಿಯಂತೆ ಕೆಲಸ ಮಾಡುತ್ತದೆ. ಸಾಮೂಹಿಕವಾಗಿ ಭಜನೆ ಮಾಡುವುದರಿಂದ ನಮ್ಮಲ್ಲಿರುವ ಒತ್ತಡ ಮತ್ತು ಆತಂಕ ದೂರವಾಗಿ, ಮನಸ್ಸಿಗೆ ಅಪಾರ ನೆಮ್ಮದಿ ಸಿಗುತ್ತದೆ. ಭಜನೆಗಳು ನಮ್ಮಲ್ಲಿನ ಭಕ್ತಿ ಭಾವವನ್ನು ಜಾಗೃತಗೊಳಿಸುತ್ತವೆ. ಹರಿಕಥೆ, ಕೀರ್ತನೆ ಮತ್ತು ಭಜನೆಗಳ ಮೂಲಕ ನಮ್ಮ ಹಿರಿಯರು ಆಧ್ಯಾತ್ಮಿಕ ಮೌಲ್ಯಗಳನ್ನು ನಮಗೆ

ತಿಳಿಸಿಕೊಟ್ಟಿದ್ದಾರೆ. ಇದು ನಮ್ಮ ಸಂಸ್ಕೃತಿಯ ಬೇರು ಆಗಿದೆ. ನಾವು ಭಜನೆಗಳನ್ನು ಹಾಡುವಾಗ ಅಥವಾ ಕೇಳುವಾಗ, ನಮ್ಮ ಮನಸ್ಸು ಲೌಕಿಕ ಚಿಂತೆಗಳಿಂದ ದೂರವಾಗಿ ದೇವರ ನಾಮಸ್ಮರಣೆಯಲ್ಲಿ ಲೀನವಾಗುತ್ತದೆ. ಇದು ಭಗವಂತನ ಸಾಮೀಪ್ಯವನ್ನು ಅನುಭವಿಸುವ ಸುಲಭ ಮಾರ್ಗವಾಗಿದೆ. ಇದರ ಜೊತೆಗೆ ನಾವೆಲ್ಲರೂ ದೇಶಕ್ಕಾಗಿ ಮತ್ತು ಪರಿಸರಕ್ಕಾಗಿ ಒಂದಿಷ್ಟು ಸಮಯ ಮೀಸಲಿಡಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮವನ್ನು ಪತ್ರಕರ್ತರಾದ ಗೋ.ವ. ಮೋಹನಕೃಷ್ಣ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ರಾಮಲಿಂಗಪ್ಪ ಹೆಚ್., ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ರಮೇಶ್, ಭಜನಾ ಪರಿಷತ್ ಅಧ್ಯಕ್ಷ, ದೇವಾಲಯದ ಪ್ರಧಾನ ಅರ್ಚಕರಾದ ಸಂದೇಶ್ ಉಪಾಧ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.