ಶಿವಮೊಗ್ಗ: ಸಕಾರಾತ್ಮಕ ಮನೋಭಾವದೊಂದಿಗೆ ನಿರಂತರ ಕಲಿಕೆ, ಹೊಸತನವನ್ನು ಅಳವಡಿಸಿಕೊಂಡ ವಿದ್ಯಾರ್ಥಿಗಳು ಸೃಜನಶೀಲವಾಗಿ ಅರಳಬೇಕಿದೆ ಎಂದು ಖ್ಯಾತ ಕೌಶಲ್ಯಾಭಿವೃದ್ದಿ ತರಬೇತುದಾರ ರವಿಕುಮಾರ್ ಅಂಗಡಿ ಹೇಳಿದರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯ ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ವತಿಯಿಂದ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಫಾರ್ಮಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಯೋಗಾತ್ಮಕ ಕಲಿಕೆ ಹಾಗೂ ಕೌಶಲ್ಯಾಭಿವೃದ್ದಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಮನಸ್ಸು ವರ್ತಮಾನದಲ್ಲಿ ನೆಲೆಗೊಂಡಾಗ ಮಾತ್ರ ನಿಜವಾದ ಸಂತೋಷ ಹಾಗೂ ಸೃಜನಶೀಲತೆ ಅರಳುತ್ತದೆ. ಜೀವನವೂ ನಿರಂತರ ಚಲನೆಯಲ್ಲಿರಬೇಕು. ಹೊಸತನವನ್ನು ಕಲಿಯುವ ಹಂಬಲ, ಆತ್ಮವಿಶ್ವಾಸ ಮತ್ತು ಉತ್ಸಾಹದ ಬದುಕು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಮೂಡಬೇಕು. ಚಿಂತೆ, ಭಯ ಹಾಗೂ ನಿರಾಸೆಗಳು ವ್ಯಕ್ತಿಯ ಸಾಮರ್ಥ್ಯವನ್ನು ಕುಗ್ಗಿಸುತ್ತವೆ. ಆದ್ದರಿಂದ ಸಕಾರಾತ್ಮಕ ಮನೋಭಾವದೊಂದಿಗೆ ಸದಾ ಕ್ರಿಯಾಶೀಲರಾಗಿರಬೇಕು.
ಇಂದಿನ ಉದ್ಯೋಗ ನೀಡುವ ಸಂಸ್ಥೆಗಳು ಕೇವಲ ಶೈಕ್ಷಣಿಕ ಅರ್ಹತೆಯನ್ನು ಮಾತ್ರವಲ್ಲ, ಸೃಜನಶೀಲ ಚಿಂತನೆ, ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸುವ ಕೌಶಲ್ಯ, ತಂಡದೊಂದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹಾಗೂ ಸಂಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲ ವ್ಯಕ್ತಿಗಳನ್ನು ನಿರೀಕ್ಷಿಸುತ್ತಿವೆ. ಕಾಲಕ್ಕೆ ತಕ್ಕಂತೆ ಹಳೆಯ ಕಲಿಕೆಗಳನ್ನು ಮರುಪರಿಶೀಲಿಸಿ, ಹೊಸ ಜ್ಞಾನವನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಂಡಾಗ ಮಾತ್ರ ವೇಗವಾಗಿ ಬದಲಾಗುತ್ತಿರುವ ಜಗತ್ತಿನೊಂದಿಗೆ ಹೆಜ್ಜೆ ಹಾಕಲು ಸಾಧ್ಯ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಇಂದಿನ ಉದ್ಯೋಗ ಸಂದರ್ಶನಗಳಲ್ಲಿ ಜ್ಞಾನಕ್ಕಿಂತಲೂ ಆತ್ಮವಿಶ್ವಾಸ, ಉತ್ತಮ ಉಡುಗೆ-ತೊಡುಗೆ, ದೇಹಭಾಷೆ ಹಾಗೂ ಪರಿಣಾಮಕಾರಿ ಸಂವಹನ ಕೌಶಲ್ಯಕ್ಕೆ ಹೆಚ್ಚಿನ ಮಹತ್ವವಿದೆ. ಸಂವಹನವೆಂದರೆ ಕೇವಲ ಮಾತನಾಡುವುದಲ್ಲ, ಗುಣಮಟ್ಟದ ಪ್ರಸ್ತುತಿ, ಸೂಕ್ತ ಪದಗಳ ಆಯ್ಕೆ, ಸಮೃದ್ಧ ಶಬ್ದಸಂಪತ್ತು ಮತ್ತು ಕ್ರಮಬದ್ಧವಾಗಿ ವಿಚಾರಗಳನ್ನು ಮಂಡಿಸುವ ಸಾಮರ್ಥ್ಯವೂ ಅದರ ಭಾಗವಾಗಿದೆ. ಇಂತಹ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಕಾರ್ಪೊರೇಟ್ ಕ್ಷೇತ್ರದ ನಿರೀಕ್ಷೆಗಳಿಗೆ ತಕ್ಕ ಸಮರ್ಥ ವೃತ್ತಿಪರರಾಗಿ ರೂಪುಗೊಳ್ಳಬಹುದು ಎಂದು ಹೇಳಿದರು.

ರೋಟರಿ ಶಿವಮೊಗ್ಗ ಅಧ್ಯಕ್ಷರಾದ ಎನ್.ಗೋಪಿನಾಥ ಮಾತನಾಡಿ, ಪ್ರಪಂಚದ ಅತ್ಯಂತ ದೊಡ್ಡ ಸೇವಾ ಸಂಸ್ಥೆಯಾಗಿ ರೋಟರಿ ಗುರುತಿಸಿಕೊಂಡಿದೆ. ಯುವ ಸಮೂಹ ಮೌಲ್ಯಗಳೊಂದಿಗೆ ಸಾಮರ್ಥ್ಯಾಧಾರಿತ ವ್ಯಕ್ತಿತ್ವ ರೂಪಿಸಿಕೊಳ್ಳುವತ್ತ ಬದ್ದರಾಗಿ ಎಂದು ಹೇಳಿದರು.
ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಎಸ್.ಎನ್.ಶ್ರೀಹರ್ಷಾ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ದಿಶಾ ಪ್ರಾರ್ಥಿಸಿ, ಉಪನ್ಯಾಸಕರಾದ ಸಂಜನಾ ನಿರೂಪಿಸಿದರು.