ಶಿವಮೊಗ್ಗ : ತೀರ್ಥಹಳ್ಳಿಯ ಬಾಣಂತಿ ಸಾವಿನ ಪ್ರಕರಣದಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಕುರಿತು ಸಮಗ್ರ ತನಿಖೆಗೆ ಜಿಲ್ಲಾಧಿಕಾರಿಯೂ ಸೇರಿ ಉನ್ನತ ಅಧಿಕಾರಿ ನೇಮಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಭರವಸೆ ನೀಡಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆಯ ಪ್ರಗತಿ ಕುರಿತು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ವೇಳೆ, ಶಾಸಕ ಅರಗ ಜ್ಣಾನೇಂದ್ರ ಅವರ ಪ್ರಸ್ತಾಪಕ್ಕೆ ಸಚಿವರು ಪ್ರತಿಕ್ರಿಯಿಸಿ, ತನಿಖೆಗೆ ಸೂಚಿಸಿದರು.
ಮೆಗ್ಗಾನ್ ತರಹದ ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿ ಈ ತರಹದ ಪ್ರಕರಣ ಬೆಳಕಿಗೆ ಬಂದಿರುವುದು ಅತ್ಯಂತ ನೋವಿನ ಸಂಗತಿ. ಇದನ್ನು ನಿರ್ಲಕ್ಷ್ಯ ಮಾಡುವ ಮಾತೇ ಇಲ್ಲ, ಇದು ಅಕ್ಷಮ್ಯ. ತಕ್ಷಣವೇ ಜಿಲ್ಲಾದಿಕಾರಿಗಳು ಈ ಪ್ರಕರಣದ ಕುರಿತು ತನಿಖೆಗೆ ತಜ್ಞರನ್ನು ನೇಮಕ ಮಾಡಬೇಕು, ಕೂಡಲೇ ವರದಿ ಪಡೆದು ತಮಗೆ ಸಲ್ಲಿಸುವಂತೆ ಸೂಚಿಸಿದರು.

ತೀರ್ಥಹಳ್ಳಿ ಬಾಣಂತಿ ಸಾವಿನ ಪ್ರಕರಣವನ್ನು ಸಭೆಯಲ್ಲಿ ಪ್ರಸ್ತಾಪಿಸಿ ಮಾತನಾಡಿದ ಶಾಸಕ ಅರಗ ಜ್ಞಾನೇಂದ್ರ ಅವರು, ಜಿಲ್ಲೆಯ ಬಡ ರೋಗಿಗಳ ಪಾಲಿಗೆ ಜಿಲ್ಲಾ ಕೇಂದ್ರದ ಮೆಗ್ಗಾನ್ ಆಸ್ಪತ್ರೆ ಇದ್ದು ಇಲ್ಲದಂತಾಗಿದೆ. ಶುಕ್ರವಾರ ವಷ್ಟೇ ತೀರ್ಥಹಳ್ಳಿಯ ಮಹಿಳೆಯೊಬ್ಬರು ಹೆರಿಗೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದರು. ಆದರೆ ತೀವ್ರ ರಕ್ತಸ್ರಾವದಲ್ಲಿದ್ದ ಮಹಿಳೆಗೆ ಸೂಕ್ತ ಚಿಕಿತ್ಸೆ ಇಲ್ಲದೆ, ನಿರ್ಲಕ್ಷ್ಯ ತೋರಿ, ಮಂಗಳೂರಿಗೆ ರೆಫರ್ ಮಾಡಿದ ಪರಿಣಾಮ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಕಿಡಿ ಕಾರಿದರು.
ಇದೇ ವೇಳೆ ಮೆಗ್ಗಾನ್ ಆಸ್ಪತ್ರೆ ವೈದ್ಯರು, ಮಂಗಳೂರಿಗೆ ರೆಫರ್ ಮಾಡಿದ ದಾಖಲೆಯನ್ನು ಸಚಿವರಿಗೆ ನೀಡುವ ಮೂಲಕ ಪ್ರಕರಣದ ಗಂಭೀರತೆಯನ್ನು ವಿವರಿಸಿದ ಅರಗ ಜ್ಣಾನೇಂದ್ರ ಅವರು, ಈ ತರಹದ ವೈದ್ಯರ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಲೇಬೇಕಿದೆ. ಮಹಿಳೆ ಸಾವಿಗೆ ಯಾರು ಹೊಣೆ ? ಇದನ್ನು ನಿಲ್ಲಿಸಿ ಎಂದು ಒತ್ತಾಯಿಸಿದರು.

ಶಾಸಕ ಚನ್ನಬಸಪ್ಪ ಮಾತನಾಡಿ, ಮೆಗ್ಗಾನ್ ಆಸ್ಪತ್ರೆಯ ಅವ್ಯವಸ್ಥೆ ಬಡವರ ಪಾಲಿಗೆ ತೀವ್ರ ಸಂಕಷ್ಡ ತಂದೊಡ್ಡಿದೆ. ಶಿವಮೊಗ್ಗ ಮೆಡಿಕಲ್ ಕಾಲೇಜು ಆದ ನಂತರ ಜಿಲ್ಲಾ ಕೇಂದ್ರದ ಮೆಗ್ಗಾನ್ ಆಸ್ಪತ್ರೆ ಕಳೆದು ಹೋಗಿದೆ.ಮೆಡಿಕಲ್ ಕಾಲೇಜು ಈಗಲೂ ಒಂದು ಆಸ್ಪತ್ರೆ ಹೊಂದುವುದಕ್ಕೆ ಆಗಿಲ್ಲ. ಈ ಕಾರಣದಿಂದಲೇ ಮೆಗ್ಗಾನ್ ಆಸ್ಪತ್ರೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಮೆಗ್ಗಾನ್ ಆಸ್ಪತ್ರೆ ವೈದ್ಯರು ಯಾಕಾಗಿ ಹೊರ ಪ್ರದೇಶದ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡುತ್ತಾರೆನ್ನುವುದಕ್ಕೆ ನಿರ್ದೀಷ್ಟ ಕಾರಣಗಳೇ ಇರುವುದಿಲ್ಲ. ಬಹಳ ನಿರ್ಲಕ್ಷ್ಯದಿಂದ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡುವ ಪ್ರವೃತ್ತಿ ನಡೆದಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಶಾಸಕರ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಮೆಗ್ಗಾನ್ ಆಸ್ಪತ್ರೆಯ ಅನೇಕ ಬೇಡಿಕೆಗಳು ವೈದ್ಯಕೀಯ ಶಿಕ್ಷಣ ಸಚಿವರ ವ್ಯಾಪ್ತಿಗೆ ಬರುತ್ತದೆ. ಕೆಲವು ಸಮಸ್ಯೆಗಳು ಆರೋಗ್ಯ ಇಲಾಖೆಗೆ ಸಂಬಂಧಿಸಿವೆ. ಹಾಗಾಗಿ ಇಷ್ಟರಲ್ಲಿಯೇ ಬೆಂಗಳೂರಿನಲ್ಲಿ ಮೆಗ್ಗಾನ್ ಆಸ್ಪತ್ರೆಯ ವಿಷಯ ಕುರಿತು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.