ಶಿವಮೊಗ್ಗ : “ಕ್ಷೇತ್ರದ ಬಡ ಹಾಗೂ ಆಶ್ರಯ ರಹಿತ ಕುಟುಂಬಗಳ ಹಕ್ಕುಪತ್ರದ ಬೇಡಿಕೆಗೆ ನ್ಯಾಯ ಒದಗಿಸುವುದು ಹಾಗೂ ಬಡಾವಣೆಗಳ ಮೂಲಸೌಕರ್ಯಗಳ ಕೊರತೆಯನ್ನು ನಿವಾರಿಸುವುದು ನಮ್ಮ ನಗರಾಭಿವೃದ್ಧಿ ಯೋಜನೆಯ ಮಹತ್ವಾಕಾಂಕ್ಷಿ ಅಜೆಂಡಾವಾಗಿದೆ” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಶಾಸಕರು ಕ್ಷೇತ್ರ ಪ್ರವಾಸ ಕೈಗೊಂಡು, ಶಿವಮೊಗ್ಗ ನಗರದ ವಾರ್ಡ್ ನಂಬರ್ ೮ರ ವ್ಯಾಪ್ತಿಗೆ ಬರುವ ಹುಚ್ಚರಾಯ ಕಾಲೋನಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಬಡಾವಣೆಯ ಗಲ್ಲಿಗಳಿಗೂ ಸಂಚರಿಸಿ, ಅಲ್ಲಿನ ಸಾರ್ವಜನಿಕ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿದರು.

ಹಕ್ಕುಪತ್ರ ವಿತರಣೆಗೆ ಚುರುಕು: ಹುಚ್ಚರಾಯ ಕಾಲೋನಿಯಲ್ಲಿ ದಶಕಗಳಿಂದ ವಾಸಿಸುತ್ತಿದ್ದರೂ ತಾಂತ್ರಿಕ ಕಾರಣಗಳಿಂದ ಇಂದಿನವರೆಗೂ ಹಕ್ಕುಪತ್ರ ದೊರೆಯದ ನಿವಾಸಿಗಳ ಆತಂಕವನ್ನು ಶಾಸಕರು ಆಲಿಸಿದರು. ಈ ಸೂಕ್ಷ್ಮ ಸಮಸ್ಯೆಯನ್ನು ಕಂದಾಯ ಇಲಾಖೆಯ ನಿಯಮಾವಳಿಗಳ ಅನ್ವಯ ವಿಶೇಷ ಪ್ರಕರಣವೆಂದು ಪರಿಗಣಿಸಿ, ಅರ್ಹ ನಿವಾಸಿಗಳಿಗೆ ತಕ್ಷಣವೇ ಹಕ್ಕುಪತ್ರಗಳನ್ನು ವಿತರಿಸಲು ಕಂದಾಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.

ಭೇಟಿಯ ವೇಳೆ ಪ್ರಮುಖರಾದ ಲಕ್ಷ್ಮಿಕಾಂತ್, ದಿನೇಶ್, ಪರಮೇಶ್ ನಾಯ್ಕ್, ವೆಂಕಟೇಶ ಗೌಡ, ಜಗದೀಶ್, ವಾಸು, ವೆಂಕಟೇಶ್ ನಾಯ್ಕ್ ಸೇರಿದಂತೆ ಹುಚ್ಚರಾಯ ಕಾಲೋನಿಯ ಭಾಜಪದ ಕಾರ್ಯಕರ್ತರು ಉಪಸ್ಥಿತರಿದ್ದರು.