ಶಿವಮೊಗ್ಗ,ಆ.19: ಡಾ.ಶರತ್ ಮರಿಯಪ್ಪ ಫೌಂಡೇಶನ್ ವತಿಯಿಂದ ಸೆ.19 ರಂದು ಶಿವಮೊಗ್ಗದಲ್ಲಿ ‘ಮಲೆನಾಡು ಮೆಗಾ ಜಾಬಥಾನ್-2026’ ಹೆಸರಿನಡಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಫೌಂಡೇಶನ್ನ ಸಂಸ್ಥಾಪಕ ಅಧ್ಯಕ್ಷ ಡಾ.ಶರತ್ ಮರಿಯಪ್ಪ ತಿಳಿಸಿದರು.

ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಎನ್ಇಎಸ್ ಕಾಲೇಜು ಆವರಣದಲ್ಲಿ ಸೆ.19 ರಂದು ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ಈ ಮೇಳ ನಡೆಯಲಿದೆ. ನೂರಕ್ಕೂ ಹೆಚ್ಚು ಕಂಪನಿಗಳು ಇದರಲ್ಲಿ ಭಾಗವಹಿಸುತ್ತವೆ. 3000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಇವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿ ನೇಮಕಾತಿ ಪತ್ರ ವಿತರಿಸಲಾಗುವುದು ಎಂದರು.

“ಶಿಕ್ಷಣ ಮುಗಿದಿದೆ, ಕೈಯಲ್ಲಿ ಪದವಿ ಇದೆ, ಆದರೆ ಉದ್ಯೋಗ ಮಾತ್ರ ಇಲ್ಲ. ಇದು ಇಂದಿನ ಹೆಚ್ಚಿನ ವಿದ್ಯಾವಂತ ಯುವಕರ ಸಮಸ್ಯೆಯಾಗಿದೆ. ಕೆಲವರಿಗೆ ಉದ್ಯೋಗ ಎಲ್ಲಿದೆ ಎಂಬ ಮಾಹಿತಿಯೂ ಇಲ್ಲ. ಅಂತಹ ಯುವಕರಿಗೆ ಒಂದು ಸೂರಿನಡಿ ಉದ್ಯೋಗದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ” ಎಂದು ತಿಳಿಸಿದರು.

ಇದಕ್ಕೂ ಮುನ್ನ ಫೌಂಡೇಶನ್ “ರನ್ ಮಲೆನಾಡು” ಮತ್ತು “ಸಾಗರ್ ಕಿನಾರೆ” ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿತ್ತು. ಸಾವಿರಾರು ಜನರ ಬೆಂಬಲ ಸಿಕ್ಕಿತ್ತು. ಅದೇ ಪ್ರೇರಣೆಯೊಂದಿಗೆ ಈಗ ಯುವಕರ ಭವಿಷ್ಯಕ್ಕಾಗಿ ಈ ಮೇಳವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಅಕ್ಷರ ಫೌಂಡೇಶನ್, ಗ್ರಾಮೀಣಾ ಅಭಿವೃದ್ದಿ ಸಂಸ್ಥೆಯ ಮುಖ್ಯಸ್ಥ ಕುಮಾರ್ ಮಾತನಾಡಿ, ಈ ಮೇಳದಲ್ಲಿ ಸಾಫ್ಟ್ವೇರಿ ಕಂಪನಿಗಳು, ಹಣಕಾಸು ಸಂಸ್ಥೆಗಳು, ಆಸ್ಪತ್ರೆಗಳು, ನರ್ಸಿಂಗ್, ಮೆಕಾನಿಕಲ್, ಸಕ್ಯೂರಿಟಿ, ಹೆಚ್ಆರ್ ವಿಭಾಗ, ಆಡಳಿತಾತ್ಮಕ ಹುದ್ದೆಗಳು, ಬಿಪಿಓ, ಫಾರ್ಮಸಿ ಸೇರಿದಂತೆ ನೂರಕ್ಕೂ ಹೆಚ್ಚು ಕಂಪನಿಗಳು ಮತ್ತು ಉದ್ಯಮಿಗಳು ಇದರಲ್ಲಿ ಭಾಗವಹಿಸುತ್ತಾರೆ. 8 ನೇ ತರಗತಿಯಿಂದ ಸ್ನಾತಕೋತ್ತರ ಮತ್ತು ತಾಂತ್ರಿಕ ಕೋರ್ಸ್ಗಳಲ್ಲಿ ಉತ್ತೀರ್ಣರಾದ 18 ವರ್ಷದಿಂದ 45 ವರ್ಷದವರೆಗಿನ ಉದ್ಯೋಗ ಆಕಾಂಕ್ಷಿಗಳು ಕೂಡ ಇದರಲ್ಲಿ ಭಾಗವಹಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಆಯೋಜಕರಾದ ರಾಜೇಶ್ ಮಾತನಾಡಿ, ಇದೊಂದು ಬಹುದೊಡ್ಡ ಉದ್ಯೋಗ ಮೇಳವಾಗಿದೆ. ಶಿವಮೊಗ್ಗದ ವರೆಗೆ ಹೆಚ್ಚು ಆದ್ಯತೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಒಂದು ತಿಂಗಳೆ ಮೊದಲೆ ನಾವು ಪ್ರಕಟಣೆ ಕೊಟ್ಟಿದ್ದೇವೆ. ಕಾರಣ ಸಂದರ್ಶನಕ್ಕೆ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಸಂದರ್ಶನ ಹೇಗೆ ಮಾಡಬೇಕು ಎಂಬುದರ ಬಗ್ಗೆಯು ಶರತ್ ಮರಿಯಪ್ಪ ಫೌಂಡಶೇನ್ ವತಿಯಿಂದ ತರಬೇತಿ ನೀಡುವ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಾ.ಚೇತನ್, ವಿಶ್ವಾಸ್ ಕಾಮತ್, ವಿನಯ್, ರಂಗನಾಥ್ ಸೇರಿದಂತೆ ಹಲವರು ಇದ್ದರು.
ಹೆಚ್ಚಿನ ವಿವರಕ್ಕೆ ಮೊ.ಸಂ: 9620627697, 9380556464 ಹಾಗೂ ಕಂನಿಗಳ ನೊಂದಣಿಗೆ 9740840973, 8095900808 ಗೆ ಸಂಪರ್ಕಿಸಬಹುದು.

“ಒಬ್ಬ ಯುವಕನಿಗೆ ಉದ್ಯೋಗ ಸಿಕ್ಕರೆ ಒಂದು ಕುಟುಂಬದ ಬದುಕು ಬದಲಾಗುತ್ತದೆ. ಸಾವಿರ ಯುವಕರಿಗೆ ಉದ್ಯೋಗ ಸಿಕ್ಕರೆ ಒಂದು ಜಿಲ್ಲೆಯ ಭವಿಷ್ಯ ಬದಲಾಗುತ್ತದೆ”
– ಡಾ.ಶರತ್ ಮರಿಯಪ್ಪ