
ಶಿವಮೊಗ್ಗ: ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಐಕ್ಯೂಎಸಿ ಹಾಗೂ ಸಾಂಸ್ಕೃತಿಕ ವಿಭಾಗದ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ಕನ್ನಡ ನಾಡಿನ ಜನಪದ ಸಂಸ್ಕೃತಿ, ಪರಂಪರೆ ಹಾಗೂ ಜನಪದ ಸಾಹಿತ್ಯದ ಕುರಿತು ಅರಿವು ಮತ್ತು ಆಸಕ್ತಿ ಮೂಡಿಸುವ ಉದ್ದೇಶದಿಂದ ಜನಪದ ಗೀತೆಗಳ ಪರಿಚಯ ಮತ್ತು ಗಾಯನ ಎಂಬ ವಿಶೇಷ ಕಾರ್ಯಕ್ರಮವನ್ನು ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕರ್ನಾಟಕ ಜನಪದ ಅಕಾಡೆಮಿ ಸದಸ್ಯರಾದ ದೇವಾನಂದ ವರಪ್ರಸಾದ್ ಕೆ. ಕೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿವಿಧ ಜನಪದ ಗೀತೆಗಳನ್ನು ಪ್ರಸ್ತುತಪಡಿಸುವ ಮೂಲಕ ವಿದ್ಯಾರ್ಥಿಗಳನ್ನು ಜನಪದದ ಝೇಂಕಾರ ನೀಡಿದರು. ತಮ್ಮ ಗಾಯನದೊಂದಿಗೆ ಜನಪದ ಗೀತೆಗಳ ವೈಶಿಷ್ಟ್ಯ, ಸಾಮಾಜಿಕ ಮಹತ್ವ, ಸಾಂಸ್ಕೃತಿಕ ಹಿನ್ನೆಲೆ ಹಾಗೂ ಜನಜೀವನದೊಂದಿಗಿನ ಅವುಗಳ ನಂಟನ್ನು ಪರಿಚಯಿಸಿದರು.

ಇದೇ ಸಂದರ್ಭದಲ್ಲಿ ಮೈಸೂರಿನ ಡಾ. ಎಚ್. ಜನಾರ್ಧನ್ ಜನಪದ ಗೀತೆಗಳನ್ನು ಹಾಡುತ್ತಾ, ಗ್ರಾಮೀಣ ಬದುಕಿನ ಸೊಗಡು, ಜನಪದ ಜೀವನಶೈಲಿಯ ವೈವಿಧ್ಯ, ಕನ್ನಡ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಸೊಗಸು ಅನಾವರಣಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಮಮತಾ ಪಿ. ಆರ್ ವಹಿಸಿದ್ದರು. ವಿಶೇಷ ಕರ್ತವ್ಯಾಧಿಕಾರಿ ಡಾ. ಆರ್. ಎಂ. ಜಗದೀಶ್, ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಪ್ರವೀಣ್ ಬಿ. ಎನ್ ಹಾಗೂ ಉಷಾ ಎಸ್. ಪಿ, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ನಕ್ಷಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.