
ಶಿವಮೊಗ್ಗ: ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಶಿವಮೊಗ್ಗ ಉಪವಿಭಾಗಾಧಿಕಾರಿ ಹುದ್ದೆಗೆ ಮಹತ್ವದ ಬದಲಾವಣೆ ಮಾಡಲಾಗಿದೆ.

ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಿಶೇಷ ಭೂಸ್ವಾಧೀನಾಧಿಕಾರಿ (ಬಿಬಿಸಿ-7)ಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಮೈತ್ರಿ ಹೆಚ್.ಪಿ., ಕೆಎಎಸ್ (ಕಿರಿಯ ಶ್ರೇಣಿ) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದೇ ವೇಳೆ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಿ.ಹೆಚ್. ಸತ್ಯನಾರಾಯಣ್, ಕೆಎಎಸ್ (ಕಿರಿಯ ಶ್ರೇಣಿ) ಅವರನ್ನು ವರ್ಗಾವಣೆ ಮಾಡಲಾಗಿದ್ದು, ಮುಂದಿನ ಸ್ಥಳ ನಿಯುಕ್ತಿಗಾಗಿ ಸಿಆಸು ಇಲಾಖೆಯಲ್ಲಿ ಕಾರ್ಯವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಸರ್ಕಾರದ ಈ ಆದೇಶದೊಂದಿಗೆ ಶಿವಮೊಗ್ಗ ಉಪವಿಭಾಗದ ಆಡಳಿತದ ಹೊಣೆಗಾರಿಕೆ ಇದೀಗ ಡಾ. ಮೈತ್ರಿ ಅವರ ಹೆಗಲೇರಿದೆ. ಕಂದಾಯ ಆಡಳಿತ ಸೇರಿದಂತೆ ಉಪವಿಭಾಗ ವ್ಯಾಪ್ತಿಯ ವಿವಿಧ ಆಡಳಿತಾತ್ಮಕ ಕಾರ್ಯಗಳ ಮೇಲ್ವಿಚಾರಣೆಯನ್ನು ನೂತನ ಉಪವಿಭಾಗಾಧಿಕಾರಿ ನಿರ್ವಹಿಸಲಿದ್ದಾರೆ.