ಶಿವಮೊಗ್ಗ : ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಹಗಲಿರುಳು ಶ್ರಮಿಸುವ ವೈದ್ಯರ ಸೇವೆ ಅನನ್ಯವಾದದ್ದು. ಅವರ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಹಾಗೂ ಜೀವದಾನದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ, ರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಿವಮೊಗ್ಗ ರೌಂಡ್ ಟೇಬಲ್ 166, ಸ್ಮಾರ್ಟ್ 266, ಸೆಂಟಿನಲ್ಸ್ 316, ಮಲ್ನಾಡ್ ಮಾಸ್ಟರ್ಸ್ 212 ಹಾಗೂ ಫಾರ್ ಎವರ್ 26 ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 01.07.2026 ರ ಬುಧವಾರದಂದು ನಗರದ ‘ರೋಟರಿ ಬ್ಲಡ್ ಬ್ಯಾಂಕ್’ನಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು ವೈದ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ರಕ್ತದಾನವು ಶ್ರೇಷ್ಠ ದಾನಗಳಲ್ಲಿ ಒಂದಾಗಿದ್ದು, ತುರ್ತು ಸಂದರ್ಭಗಳಲ್ಲಿ ಅನೇಕರ ಪ್ರಾಣ ಉಳಿಸುವ ಮಹತ್ಕಾರ್ಯವಾಗಿದೆ. ರಾಷ್ಟ್ರೀಯ ವೈದ್ಯರ ದಿನದಂದು ಆಯೋಜಿಸಲಾಗಿದ್ದ ಈ ಶಿಬಿರದಲ್ಲಿ ಯುವಜನತೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಪಾಲ್ಗೊಂಡು ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ, ಶಿವಮೊಗ್ಗ ರೌಂಡ್ ಟೇಬಲ್ ನ ನೂತನ ಪದಾಧಿಕಾರಿಗಳ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ತಮ್ಮ ಮೊದಲ ಹೆಜ್ಜೆಯಾಗಿ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಹಾಗೂ ಜನಸಾಮಾನ್ಯರ ಆರೋಗ್ಯ ರಕ್ಷಣೆಯಲ್ಲಿ ತಮ್ಮದೇ ಆದ ಮಹತ್ವದ ಕೊಡುಗೆ ನೀಡಿರುವ ವೈದ್ಯರುಗಳಾದ ಡಾ. ಶ್ರೀಧರ್, ಡಾ. ಸ್ವರೂಪ್ ಮಲ್ಲೇಶ್, ಡಾ. ಚೇತನ್ ಅವರನ್ನು ಸನ್ಮಾನಿಸಿ ಶುಭಕೋರಲಾಯಿತು.

ಈ ವೇಳೆ ಶಿವಮೊಗ್ಗ ರೌಂಡ್ ಟೇಬಲ್ ನ ಅಧ್ಯಕ್ಷರು ಹಾಗೂ ಸದಸ್ಯರುಗಳಾದ ಈಶ್ವರ್ ಸರ್ಜಿ, ನರೇನ್, ಆದರ್ಶ್ ರಾಜು, ಶುಶ್ರುತ್, ಆಶ್ರಿತ್ ಹಾಗೂ ಸಚಿನ್ ಅವರು ಸೇರಿದಂತೆ ವಿವಿಧ ಸಂಸ್ಥೆಗಳ ಪಧಾಧಿಕಾರಿಗಳು ಉಪಸ್ಥಿತರಿದ್ದರು.