ಶಿವಮೊಗ್ಗ : ಡಾ.ಶರತ್ ಮರಿಯಪ್ಪ ಫೌಂಡೇಷನ್ವತಿಯಿಂದ ಜುಲೈ 5ರಂದು `ರನ್ ಮಲೆನಾಡು-2026’ ಎಂಬ ಬೃಹತ್ ಮ್ಯಾರಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಫೌಂಡೇಷನ್ನಿನ ಸಂಸ್ಥಾಪಕ ಡಾ.ಶರತ್ ಮರಿಯಪ್ಪ ಹೇಳಿದರು.
ಜುಲೈ 5ರ ಬೆಳಿಗ್ಗೆ 6 ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ಆರಂಭವಾಗುತ್ತದೆ. ಮಾಜಿ ಸಚಿವ ಮಧುಬಂಗಾರಪ್ಪ, ಸಚಿವ ಸಂತೋಷ್ಲಾಡ್, ಆರ್.ಎಂ. ಮಂಜುನಾಥ್ ಗೌಡರು, ಆರ್.ಪ್ರಸನ್ನಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ ಎಂದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಫೌಂಡೇಷನ್ ಇದೀಗ ಆರಂಭವಾಗಿದ್ದು, ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಯೋಚಿಸಿದ್ದು ಇದರ ಹಿನ್ನಲೆಯಲ್ಲಿ ಈಗ ಮ್ಯಾರಥಾನ್ ಎಂಬ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದು ಆರೋಗ್ಯಕರ ಕಾರ್ಯಕ್ರಮವಾಗಿದೆ. ಪರಿಸರ ಸಂರಕ್ಷಣೆ, ಹಸಿರು ಬೆಳೆಸುವುದು, ಕ್ರೀಡಾ ಮನೋಭಾವ ಬೆಳೆಸುವುದು ಮುಖ್ಯವಾಗಿ ವಿಶೇಷ ಚೇತನರ ಸಬಲೀಕರಣ ಎಂಬ ಮಹತ್ವದ ಉದ್ದೇಶವನ್ನಿಟ್ಟುಕೊಂಡು ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಈ ಮ್ಯಾರಥಾನ್ನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಲಿದ್ದಾರೆ. ಈ ಬಾರಿ ವಿಶೇಷವಾಗಿ ಹ್ಯೂಮಥಾನ್ ಎಂಬ ವಿಶೇಷ ಚೇತನರಿಗಾಗಿ ವಿಶೇಷ ಓಟವನ್ನು ಕೂಡ ಆಯೋಜಿಸಲಾಗಿದೆ. ಇದು ಮಾನಸಿಕ ಮತ್ತು ದೈಹಿಕ ವಿಶೇಷ ಚೇತನರಿಗೆ ಆತ್ಮವಿಶ್ವಾಸ ಬೆಳೆಸುವುದೇ ಆಗಿದೆ. ಮತ್ತು ನಾವು ಅವರ ಜೊತೆ ಇದ್ದೇವೆ ಎಂಬ ಮನೋಭಾವನೆ ಕೂಡ ಉಂಟಾಗುತ್ತದೆ. ಜೊತೆಗೆ ಈ ಓಟದಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ಸುಮಾರು 2000 ಸಸಿಗಳನ್ನು ಉಚಿತವಾಗಿ ನೀಡಲಾಗುವುದು ಹಾಗೂ ಇದಕ್ಕೆ ನೋಂದಣಿ ಅಗತ್ಯವಿದ್ದು, ಮೊದಲ 2000 ನೋಂದಾಯಿತರಿಗೆ ಉಚಿತವಾಗಿ ಟೀಶರ್ಟ್ ಜೊತೆಗೆ ಪ್ರಮಾಣಪತ್ರ ನೀಡಲಾಗುವುದು ಎಂದರು.

ಮ್ಯಾರಥಾನ್ ಸ್ಪರ್ಧೆಯ ಬಗ್ಗೆ ವಿವರ ನೀಡಿದ ಅಥ್ಲೆಟಿಕ್ ಅಸೋಸಿಯೇಷನ್ನಿನ ಮುಖ್ಯಸ್ಥ ಉದಯಕುಮಾರ್ ಈ ಸ್ಪರ್ಧೆಗಳು ಐದು ವಿಭಾಗಗಳಲ್ಲಿ ನಡೆಯುತ್ತವೆ. 16ವರ್ಷದೊಳಗಿನ ಬಾಲಕ-ಬಾಲಕಿಯರಿಗೆ 20ವರ್ಷದ ಬಾಲಕ-ಬಾಲಕಿಯರಿಗೆ ಕ್ರಮವಾಗಿ ಮೂರು ಕಿ.ಮೀ. ಹಾಗೂ 5 ಕಿ.ಮೀ. ಓಟದ ಸ್ಫರ್ಧೆಯಿದ್ದು, ಎರಡೂ ವಿಭಾಗಗಳಲ್ಲಿ ತಲಾ 3 ಬಹುಮಾನಗಳನ್ನು ನೀಡಲಾಗುತ್ತದೆ. ಅಂದರೆ ಪ್ರಥಮ 3000, ದ್ವಿತೀಯ 2000, ತೃತೀಯ 1000 ರೂ.ಗಳನ್ನು ಎರಡೂ ವಿಭಾಗದಲ್ಲೂ ನಗದು ಬಹುಮಾನ ನೀಡಲಾಗುವುದು. ಹಾಗೆಯೇ ಪುರುಷ ಮತ್ತು ಮಹಿಳಾ ವೃತ್ತಿಪರರಿಗೆ 10 ಕಿ.ಮೀ. ಓಟದ ಸ್ಪರ್ಧೆ ಇದ್ದು, ಇದರಲ್ಲೂ ಕೂಡ ಕ್ರಮವಾಗಿ 10,000, 7,000 ಹಾಗೂ 5000 ರೂ.ಗಳನ್ನು ಬಹುಮಾನ ನೀಡಲಾಗುತ್ತದೆ ಎಂದರು.
ಹಾಗೆಯೇ ಪುರುಷ ಮತ್ತು ಮಹಿಳಾ ಸಾರ್ವಜನಿಕ ವಿಭಾಗದಲ್ಲಿ 5 ಕಿ.ಮೀ. ಸ್ಪರ್ಧೆ ಏರ್ಪಡಿಸಿದ್ದು ಇದರಲ್ಲಿಯೂ ಕೂಡ 5,000, 3,000, 2,000 ರೂ.ಗಳನ್ನು ನಗದು ಬಹುಮಾನ ನೀಡಲಾಗುವುದು. ಈ ವರ್ಷ ವಿಶೇಷವಾಗಿ ದಂಪತಿಗಳಿಗಾಗಿ 3 ಕಿ.ಮೀ. ಓಟದ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಿಗೆ ಟ್ರೋಫಿ ಹಾಗೂ ವಿಶೇಷ ಉಡುಗೊರೆ ನೀಡಲಾಗುವುದು ಎಂದರು.
ಕೆ.ರಂಗನಾಥ್ ಮಾತನಾಡಿ, ಡಾ.ಶರತ್ ಮರಿಯಪ್ಪ ಫೌಂಡೇಷನ್ ಹಲವು ಸಾಮಾಜಿಕ ಉದ್ದೇಶಗಳಿಂದ ಅಸ್ಥಿತ್ವಕ್ಕೆ ಬಂದಿದೆ. ಕೇವಲ ರಾಜಕಾರಣ ಮಾತ್ರ ಮುಖ್ಯವಲ್ಲ, ಸಾಮಾಜಿಕ ಯೋಜನೆಗಳು ಯೋಚನೆಗಳು ಕೂಡ ಬೇಕಾಗುತ್ತದೆ. ಆರೋಗ್ಯ, ಶಿಕ್ಷಣ, ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳ ಕಡೆ ಈ ಫೌಂಡೇಷನ್ ಕೆಲಸ ಮಾಡುತ್ತದೆ. ಮುಂದಿನ ದಿನಗಳಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದರು.
ನೋಂದಣಿಗೆ ಹಾಗೂ ಹೆಚ್ಚಿನ ವಿವರಗಳಿಗೆ ಮೊ.: 8971397714, 8892325558, 8660461910ರಲ್ಲಿ ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಉದಯಕುಮಾರ್, ಯಶವಂತ್ ನಾಯಕ್, ಅಶೋಕ್, ಅರುಣ್ರಾಜ್, ವಿಜಯಕುಮಾರ್, ದೀಪು, ಪ್ರದೀಪ್, ಶಿವಕುಮಾರ್, ನವೀನ್, ವಿನಯ್, ವಿನೋದ್, ಸಂದೀಪ್ ಮುಂತಾದವರಿದ್ದರು.