ಶಿವಮೊಗ್ಗ : ಜೂನ್ ೩೦ : : ಪ್ರಸಕ್ತ ಸಾಲಿನ ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ರೈತರು ತೋಟಗಳಲ್ಲಿ ಬೆಳೆದ ಅಡಿಕೆ ಮರಗಳು ನಾಶಗೊಂಡಿದ್ದು, ಈ ಸಂಬಂಧ ಬಾಧಿತ ರೈತರಿಗೆ ವಿಶೇಷ ಪ್ಯಾಕೇಜ್ಘೋಷಿಸುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಕೋರಿಕೆ ಸಲ್ಲಿಸಲಾಗುವುದು. ಅಂತೆಯೇ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ನಿಯೋಗ ತೆರಳಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವಂತೆ ರಾಜ್ಯ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ನಜೀರ್ಸಾಬ್ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸಂಬಂಧ ಜಿಲ್ಲಾಡಳಿತದ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿರುವುದಾಗಿ ಅವರು ತಿಳಿಸಿದರು.

ಅನಿರೀಕ್ಷಿತ ಮಳೆಯಿಂದಾಗಿ ಜಿಲ್ಲೆಯಲ್ಲಿ ೨೫೦೦ಹೆಕ್ಟೇರ್ಪ್ರದೇಶದಲ್ಲಿ ಬೆಳೆದ ತೋಟಗಾರಿಕೆ ಬೆಳೆ ನಾಶವಾಗಿದೆ. ಅಲ್ಲದೇ ಬೆಳೆದು ನಿಂತ ಸುಮಾರು ೧೧ಲಕ್ಷ ಅಡಿಕೆ ಮರಗಳು ಧರೆಗುರುಳಿವೆ. ಇದರಿಂದಾಗಿ ರೈತರ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಸರ್ಕಾರದಿಂದ ವಿಶೇಷ ಪ್ಯಾಕೇಜ್ಘೋಷಿಸಿದಲ್ಲಿ ರೈತರಿಗೆ ಅನುಕೂಲವಾಗಲಿದೆ. ಪ್ರಸ್ತುತ ಎನ್.ಡಿ.ಆರ್.ಎಫ್ನಿಯಮಾನುಸಾರ ಪರಿಹಾರ ಘೋಷಿಸಿದಲ್ಲಿ ನಾಶಗೊಂಡ ತೋಟದ ನಿರ್ವಹಣೆಗೆ ಸಾಕಾಗುವುದಿಲ್ಲ. ಸಂತ್ರಸ್ಥರಿಗೆ ಮಾನವೀಯ ನೆಲೆಯಲ್ಲಿ ಪರಿಹಾರ ದೊರಕಿಸಿ ಕೊಡಿ. ಮಲೆನಾಡಿನಲ್ಲಿ ಸಂಭಾವ್ಯ ಭೂಕುಸಿತ ಉಂಟಾಗುವ ಪ್ರದೇಶಗಳನ್ನು ಗುರುತಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ. ಮಳೆಮಾಪನ ಕೇಂದ್ರಗಳ ಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಅತೀವೃಷ್ಟಿಯಿಂದ ಬೆಳೆಹಾನಿಗೊಳಗಾದ ರೈತರಿಗೆ ಸರಿಯಾದ ಬೆಳೆವಿಮಾ ಮೊತ್ತ ದೊರಕದಂತಾಗಿದೆ. ಆದ್ದರಿಂದ ತಕ್ಷಣದ ಕ್ರಮವಾಗಿ ಮಳೆಮಾಪನ ಕೇಂದ್ರಗಳನ್ನು ಸರಿಪಡಿಸಿ, ಹಿಂದಿನ ವರ್ಷದಲ್ಲಿ ಬೆಳೆ ನಾಶಗೊಂಡ ರೈತರಿಗೆ ಪರಿಹಾರಧನ ಕೊಡಿಸಿ.

? ಡಾ|| ಧನಂಜಯಸರ್ಜಿ, ವಿಧಾನಪರಿಷತ್ಸದಸ್ಯರು.
ಏಪ್ರಿಲ್ ಮಾಹೆಯಲ್ಲಿ ಬಿದ್ದ ಮಳೆಯಿಂದಾಗಿ ಹಾನಿಗೊಳಗಾದ ಒಟ್ಟು ೫೯೨ಮನೆಗಳ ಪೈಕಿ ೬೬ಮನೆಗಳು ಸಂಪೂರ್ಣ ನಾಶಗೊಂಡಿವೆ. ೫೨೬ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮೇ ಮಾಹೆಯಲ್ಲಿ ೨೨೦ಮನೆಗಳು ಹಾನಿಗೊಳಗಾಗಿದ್ದು, ೧ಮನೆ ಪೂರ್ಣಪ್ರಮಾಣದಲ್ಲಿ ಹಾಗೂ ೨೧೯ಮನೆಗಳು ಭಾಗಶಃ ಹಾನಿಗೊಳಗಾಗಿದೆ. ಮನೆ ಸಂತ್ರಸ್ಥರ ನೆರವಿಗೆ ಈವರೆಗೆ ಯಾರೊಬ್ಬರೂ ಧಾವಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಕೆ.ಜೆ.ಜಾರ್ಜ್ಅವರು ಮಾತನಾಡಿ, ಸಂತ್ರಸ್ಥ ಕುಟುಂಬದವರಿಗೆ ತಕ್ಷಣದ ಪರಿಹಾರ ಕ್ರಮವನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ದೊರಕಿಸಿಕೊಡಬೇಕು. ಅಲ್ಲದೆ ಭಾಗಶಃ ಅಥವಾ ಪೂರ್ಣಪ್ರಮಾಣದ ಮನೆ ನಾಶಗೊಂಡವರ ಮಾಹಿತಿ ಪಡೆದು, ಅವರಿಗೆ ಸಕಾಲದಲ್ಲಿ ಸೌಲಭ್ಯ ಒದಗಿಸಿಕೊಡುವಂತೆ ಸೂಚಿಸಿದರು.

ದೇವಕಾತಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಘಟಕಗಳಿಗೆ ಅಗತ್ಯವಿರುವ ವಿದ್ಯುತ್ಸರಬರಾಜು ಮಾಡುವಲ್ಲಿ ತೀವ್ರತರಹದ ವ್ಯತ್ಯಯವಾಗುತ್ತಿದೆ. ಅದಕ್ಕಾಗಿ ಶಾಶ್ವತ ಪರಿಹಾರ ನೀಡಬೇಕು. ಕೈಗಾರಿಕಾ ಘಠಕಗಳಿಗೆ ನಿರಂತರ ವಿದ್ಯುತ್ಸರಬರಾಜು ಮಾಡಲು ಅಗತ್ಯವಾಗಿರುವ ಪವರ್ಸ್ಟೇಷನ್ನಿರ್ಮಿಸಲು ೨ ಎಕರೆ ಪ್ರದೇಶವನ್ನು ಕಾಯ್ದಿರಿಸಲಾಗಿದೆ ಎಂದು ಶಾಸಕ ಚನ್ನಬಸಪ್ಪ ಅವರು ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಸಚಿವ ಕೆ.ಜೆ.ಜಾರ್ಜ್ಅವರು ಮಾತನಾಡಿ, ಸದರಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು. ನಗರದ ಹೊರವಲಯದ ಗೋವಿಂದಾಪುರದಲ್ಲಿ ನಿರ್ಮಾಣಗೊಂಡಿರುವ ವಸತಿ ಸಮುಚ್ಚಯದಲ್ಲಿನ ನಿವಾಸಿಗಳ ಅನುಕೂಲಕ್ಕಾಗಿ ತಾತ್ಕಾಲಿಕ ವಿದ್ಯುತ್ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿನ ವಿದ್ಯುತ್ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲೆಯಲ್ಲಿರುವ ೨೮೦ ಮಳೆಮಾಪನ ಕೇಂದ್ರಗಳು ಇದ್ದು, ಅವುಗಳ ಪೈಕಿ ಹಾಳಾಗಿದ್ದ ೨೦೦ಕ್ಕೂ ಹೆಚ್ಚಿನ ಮಳೆಮಾಪನ ಕೇಂದ್ರಗಳನ್ನು ದುರಸ್ತಿ ಮಾಡಲಾಗಿದೆ. ಕಳೆದ ಸಾಲಿನ ಬೆಳೆ ಸಮೀಕ್ಷೆಯಿಂದ ಸಂತ್ರಸ್ಥ ರೈತರಿಗೆ ಬೆಳೆವಿಮಾ ಪರಿಹಾರ ಮೊತ್ತ ಕೊಡುವಲ್ಲಿ ಆಗಿರುವ ನ್ಯೂನತೆಯನ್ನು ಸರಿಪಡಿಸುವಲ್ಲಿ ವಿಮಾ ಕಂಪನಿಗಳ ಮುಖ್ಯಸ್ಥರಿಗೆ ಹಾಗೂ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಪ್ರಸಕ್ತ ಸಾಲಿನ ಮಳೆ ಕೊರತೆಯಿಂದಾಗಿ ಕೆರೆಕಟ್ಟೆ ಕಾಲುವೆಗಳನ್ನು ತುಂಬಿಸಿಕೊಳ್ಳುವುದು, ಏತನೀರಾವರಿ ಸೌಲಭ್ಯ ಬಳಸಿಕೊಳ್ಳುವುದು ಅನಿವಾರ್ಯವಾಗಲಿದೆ. ಅದಕ್ಕಾಗಿ ಸಣ್ಣ ಮತ್ತು ಭಾರೀ ನೀರಾವರಿ ಇಲಾಖೆ ಸನ್ನದ್ಧವಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಭಾರೀ ನೀರಾವರಿ ಇಲಾಖೆಯ ವ್ಯಾಪ್ತಿಗೊಳಪಡುವ ಏತ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಮೆಸ್ಕಾಂಗೆ ಕೋಟ್ಯಾಂತರ ರೂಪಾಯಿಗಳ ವಿದ್ಯುತ್ಶುಲ್ಕ ಪಾವತಿಸುವುದು ಬಾಕಿ ಇದೆ. ರಾಜ್ಯದಲ್ಲಿಯೂ ನೆರೆಯ ರಾಜ್ಯಗಳಿಂದ ವಿದ್ಯುತ್ಖರೀದಿಸಿ ವಿತರಿಸಲಾಗುತ್ತಿದೆ. ವಿದ್ಯುತ್ಸರಬರಾಜು ಮಾಡಿದವರಿಗೂ ಹಣ ಪಾವತಿ ಮಾಡಬೇಕಾಗಿರುವುದರಿಂದ ಏತ ನೀರಾವರಿ ಸೌಲಭ್ಯಕ್ಕಾಗಿ ವಿದ್ಯುತ್ಬಳಸಿಕೊಳ್ಳುವ ಪೂರ್ವದಲ್ಲಿ ಮುಂಗಡ ಹಣ ಪಾವತಿಸುವಂತೆ ಸೂಚಿಸಲಾಗುವುದು ಎಂದ ಅವರು, ಮುಂದಿನ ದಿನಗಳಲ್ಲಿ ಸೋಲಾರ್ನಿಂದ ಏತ ನೀರಾವರಿ ಯೋಜನೆಯನ್ನು ಬಳಸಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ|| ಧನಂಜಯ ಸರ್ಜಿ, ಶ್ರೀಮತಿ ಬಲ್ಕೀಸ್ಬಾನು, ಅಪರ ಜಿಲ್ಲಾಧಿಕಾರಿ ಅಭಿಷೇಕ್ವಿ, ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.