ಶಿಕಾರಿಪುರ : ತಾಲೂಕಿನ ತೊಗರ್ಸಿ ಮಹಾಶಕ್ತಿ ಕೇಂದ್ರದ ಬಳ್ಳಿಗಾವಿ ಗ್ರಾಮದ ಬೂತ್ ವಾಸ್ತವ್ಯದ ನಿಮಿತ್ತ, ಐತಿಹಾಸಿಕ ಬಳ್ಳಿಗಾವಿ ಗ್ರಾಮದಲ್ಲಿ ನಿನ್ನೆ ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಅವರು ಗ್ರಾಮ ವಾಸ್ತವ್ಯ ಹೂಡಿದರು.
ಗ್ರಾಮ ವಾಸ್ತವ್ಯದ ವೇಳೆ ಗ್ರಾಮಸ್ಥರೊಂದಿಗೆ ಆತ್ಮೀಯವಾಗಿ ಬೆರೆತು ಅವರ ಕಷ್ಟ-ಸುಖಗಳನ್ನು ಆಲಿಸಿದ ಅವರು, ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದ ಸಲಹೆಗಳನ್ನು ಸ್ವೀಕರಿಸಿದರು. ಜನರೊಂದಿಗೆ ನೇರ ಸಂಪರ್ಕ ಹೊಂದುವ ಮೂಲಕ ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಮ ವಾಸ್ತವ್ಯವು ಜನರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ, ಜನರ ನಿರೀಕ್ಷೆಗಳಿಗೆ ಅನುಗುಣವಾಗಿ ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವ ಕಾರ್ಯಕ್ರಮವಾಗಿದೆ ಎಂದು ಬಿ.ವೈ. ವಿಜಯೇಂದ್ರ ಅವರು ಹೇಳಿದರು.

ಬೆಳಿಗ್ಗೆ ವಾಯುವಿಹಾರ ನಡೆಸಿದ ಅವರು, ಮಾರ್ಗಮಧ್ಯೆ ಭೇಟಿಯಾದ ಗ್ರಾಮದ ಹಿರಿಯರು, ಯುವಕರು ಹಾಗೂ ಸಾರ್ವಜನಿಕರೊಂದಿಗೆ ಆತ್ಮೀಯವಾಗಿ ಬೆರೆತು ಕುಶಲೋಪರಿ ವಿಚಾರಿಸಿದರು. ಗ್ರಾಮೀಣ ಬದುಕಿನ ಸಹಜ ಸೊಬಗನ್ನು ಆಸ್ವಾದಿಸುತ್ತಾ, ಜನರೊಂದಿಗೆ ಹೆಜ್ಜೆ ಹಾಕಿದ ಈ ವಾಯು ವಿಹಾರವು ಆತ್ಮೀಯತೆ ಮತ್ತು ಸರಳತೆಯ ಪ್ರತೀಕವಾಗಿ ಮೂಡಿಬಂದಿತು.