ಶಿವಮೊಗ್ಗ,ಜೂ.21:
ಹದಿನೇಳು ವರುಷದ ಅಪ್ರಾಪ್ತೆ ಯುವತಿಯಯನ್ನು ಮದುವೆ ಮಾಡಿಕೊಂಡು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 27 ವರ್ಷದ ಯುವಕ ಸೇರಿದಂತೆ ನಾಲ್ವರಿಗೆ ಪೋಕ್ಸೋ ಕಾಯ್ದೆಯಡಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಶಿವಮೊಗ್ಗ ನ್ಯಾಯಾಲಯ ಆದೇಶಿಸಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪರಿಚಯ ಮಾಡಿಕೊಂಡು ಬಳಿಕ ಬಾಲ್ಯ ವಿವಾಹವಾಗಿ, ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು 2024 ರಲ್ಲಿ ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆಗೆ ದೂರು ಬಂದಿತ್ತು.

ಈ ದೂರಿನ ಅನ್ವಯ ಪೊಲೀಸರು ಪೋಕ್ಸೋ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ಪೊಲೀಸ್ ಠಾಣೆ ತನಿಖಾಧಿಕಾರಿ, ಇಂದಿನ ಕೋಟೆ ಪೊಲೀಸ್ ಠಾಣೆಯ ಪಿಐ ಹರೀಶ್ ಪಟೇಲ್ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಶಿವಮೊಗ್ಗದ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-1) ದಲ್ಲಿ ಪ್ರಕರಣ ವಿಚಾರಣೆ ನಡೆದು, ಆರೋಪಿತರು ನಡೆಸಿದ ಕೃತ್ಯ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ನಿಂಗನಗೌಡ ಭ ಪಾಟೀಲ್ ಅವರು ಅಪರಾಧಿ ಯುವಕ ಸೇರಿ ನಾಲ್ವರಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1.85 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಹಾಗೆಯೇ ಸಂತ್ರಸ್ತ ಬಾಲಕಿಗೆ 4 ಲಕ್ಷ ರೂ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಶ್ರೀಧರ್ ಅವರು ವಾದ ಮಂಡಿಸಿದ್ದರು.