ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಇಂದು ಸಮಾಜಮುಖಿ ಹಾಗೂ ಬಹುಮುಖಿ ವ್ಯಕ್ತಿತ್ವದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಟಿ.ಆರ್.ಅಶ್ವತ್ಥ್ ನಾರಾಯಣಶೆಟ್ಟಿ ಅವರ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಖ್ಯಾತ ಉದ್ಯಮಿ ಹಾಗೂ ಉಪನ್ಯಾಸಕರಾದ ಯು.ಕೆ. ಅಂಡ್ ಕೋ ಸಂಸ್ಥಾಪಕರಾದ ಉಲ್ಲಾಸ್ ಕಾಮತ್ ಅವರಿಂದ ಭಾರತದಲ್ಲಿ ಕುಟುಂಬ ವ್ಯವಹಾರ ನಿರ್ವಹಣೆ ಸವಾಲುಗಳು ಮತ್ತು ಭವಿಷ್ಯ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಉಲ್ಲಾಸ್ ಕಾಮತ್ ಅವರು ಯಾವುದೇ ದೇಶದ ಬೆನ್ನೆಲುಬು, ವಂಶಪಾರಂಪರ್ಯವಾಗಿ ನಡೆಸಿಕೊಂಡು ಬಂದ ಕೌಟುಂಬಿಕ ಹಿನ್ನಲೆಯುಳ್ಳ ವ್ಯವಹಾರಗಳು ಆಗಿದೆ. ಹಿಂದೆ ಕೈಗಾರಿಕೋದ್ಯಮಿಗಳು ನಮ್ಮ ಭಾರತದ ಸಮಗ್ರ ಅಭಿವೃದ್ಧಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ದಾನ ಮಾಡಿದ್ದಾರೆ. ಶಾಲೆಯನ್ನು ಕಟ್ಟಿಕೊಟ್ಟಿದ್ದಾರೆ. ಅವರಿಗೆ ಸಾಮಾಜಿಕ ಜವಾಬ್ದಾರಿ ಇತ್ತು. ಈಗ ಅದು ಕಾಣಲು ಸಿಗುತ್ತಿಲ್ಲ. ಜನಸಂಖ್ಯೆಯಲ್ಲಿ ನಾವು 150 ಕೋಟಿ ಇದ್ದೇವೆ. ಕರ್ನಾಟಕವೊಂದರಲ್ಲೇ ವರ್ಷಕ್ಕೆ 27 ಲಕ್ಷ ಯುವಕರು ಪದವಿಧರರಾಗಿ ಹೊರಗೆ ಬರುತ್ತಿದ್ದಾರೆ. ಅವರಿಗೆ ಎಲ್ಲಿ ಉದ್ಯೋಗ ಕಲ್ಪಿಸೋಣ ಎಂಬ ಪ್ರಶ್ನೆ ಮೂಡುತ್ತದೆ. ಮತ್ತೆ ಅದು ಅಸಾಧ್ಯ ಕೂಡ ಹೌದು. ವಿದ್ಯಾವಂತ ಪದವೀಧರರಿಗೆ ಕೆಲಸ ಸಿಗುತ್ತಿಲ್ಲ. ಸಿಕ್ಕಿದರೂ ಅವರ ಬಳಿ ಕೌಶಲ್ಯವಿಲ್ಲ. ಬಂಡವಾಳ ಹೂಡಿದವರ ಬಳಿ ಸೂಕ್ತ ತಾಂತ್ರಿಕತೆ ಇಲ್ಲ. ತಾಂತ್ರಿಕತೆ ಇದ್ದಲ್ಲಿ ಉತ್ತಮ ಕೆಲಸಗಾರರಿಲ್ಲ. ಎಲ್ಲವೂ ಇದ್ದ ಕಡೆ ಸಂಸ್ಥೆಗೆ ಉತ್ತಮ ನಿರ್ವಾಹಕರಿಲ್ಲ. ಈ ರೀತಿಯ ಅನೇಕ ಕಾರಣಗಳಿಂದ ನಮ್ಮ ದೇಶದ ಜಿಡಿಪಿ ಮೇಲೆ ಏರುತ್ತಿಲ್ಲ. ವಾಸ್ತವವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ನಾವು 5ನೇ ಸ್ಥಾನದಲ್ಲಿದ್ದು, 4ನೇ ಸ್ಥಾನಕ್ಕೆ ಜಿಗಿಯುವ ಹಂತದಲ್ಲಿದ್ದೇವೆ. ಆದರೆ ಅಮೇರಿಕಾ, ಚೈನಾ, ಜರ್ಮನಿ, ಜಪಾನ್, ಹೋಲಿಸಿದರೆ ನಮ್ಮಲ್ಲಿ ಬುದ್ಧಿವಂತರಿದ್ದರೂ ಆಲಸಿಗರ ಸಂಖ್ಯೆ ಜಾಸ್ತಿ ಇದೆ. ವಾರದಲ್ಲಿ 5ದಿನ ಕೆಲಸ ಹುಡುಕುತ್ತೇವೆ. ಎರಡು ದಿನ ಸುಸ್ತಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತೇವೆ.

ಜಪಾನ್ನಲ್ಲಿ ಎಷ್ಟೇ ದೊಡ್ಡ ಉದ್ಯಮಿಯಾದರೂ 60ನೇ ವರ್ಷಕ್ಕೆ ನಿವೃತ್ತಿಪಡೆದು, ತನ್ನ ಕುಟುಂಬದವರಿಗೆ ಆ ಉದ್ಯಮವನ್ನು ಸೂಕ್ತ ಮಾರ್ಗದರ್ಶನದೊಂದಿಗೆ ಹಸ್ತಾಂತರಿಸುತ್ತಾರೆ. ಆ ಉದ್ಯಮಗಳು ಅತ್ಯಂತ ಯಶಸ್ಸು ಕಂಡಿವೆ. ಆದರೆ ನಮ್ಮಲ್ಲಿ ಕುಟುಂಬದ ಮುಖ್ಯಸ್ಥರು ಯಶಸ್ವಿಯನ್ನು ಉದ್ಯಮವನ್ನು ನಡೆಸಿದರೂ ತಮ್ಮ ಮಕ್ಕಳಿಗೆ ಏನೂ ಮಾಹಿತಿ ನೀಡುವುದಿಲ್ಲ. ಸೂಕ್ತ ವಯಸ್ಸಿಗೆ ಸೂಕ್ತ ಮಾರ್ಗದರ್ಶನ ನೀಡುವುದಿಲ್ಲ. ಅವರಿಗೆ ಸ್ವಾತಂತ್ರ್ಯ ನೀಡುವುದಿಲ್ಲ. ಕುಟುಂಬದಲ್ಲಿ ಐಕ್ಯಮಥ್ಯದ ಕೊರತೆಯಿದೆ. ತಮ್ಮ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡದೆ ಅವರ ಉತ್ಸಾಹಕ್ಕೆ ತಣ್ಣೀರು ಎರೆಚುವವರಿದ್ದಾರೆ. ಭಾರತೀಯ ಮಹಿಳೆಯರಲ್ಲಿ ಉದ್ಯಮಿಯನ್ನು ಮದುವೆಯಾಗಬೇಡ, ನಾನು ಅನುಭವಿಸಿದ್ದೇ ಸಾಕು ನೀನು ಆ ಮನೆಗೆ ಹೋಗಬೇಡ ಎಂದು ಬುದ್ಧಿವಾದ ಹೇಳುವ ತಾಯಂದಿರೂ ಇದ್ದಾರೆ.

2047ರಲ್ಲಿ ವಿಕಸಿತ ಭಾರತದ ಕನಸ್ಸನ್ನು ನಾವು ಕಾಣುತ್ತಿದ್ದೇವೆ. ಆದರೆ ಇಲ್ಲಿ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಮಧ್ಯಮ ವರ್ಗದವರಿಗೆ ಹೇಗೆ ಶ್ರೀಮಂತರಾಗಬೇಕೆಂದು ಗೊತ್ತಿಲ್ಲ. ಬ್ಯಾಟು, ಬಾಲು, ವಿಕೇಟು ಇದ್ದವನೇ ಕ್ಯಾಪ್ಟನ್ ಎನ್ನುವ ರೀತಿಯಲ್ಲಿ ವಿಶ್ವದ ದೊಡ್ಡಣ್ಣ ಅಮೇರಿಕಾ ನಾನೇ ನಂಬರ್ 1 ಅನ್ನುತ್ತಿದೆ. ಅಲ್ಲಿಯ ಓರ್ವ ಉದ್ಯಮಿ 92ಲಕ್ಷ ಕೋಟಿ ಒಡೆಯನಾಗಿದ್ದಾನೆ. ಭಾರತದಲ್ಲಿ ಅವಕಾಶ ಇದ್ದರೂ ಕೂಡ ನಮ್ಮ ಧೋರಣೆಗಳು ನಮ್ಮನ್ನು ಹಿಂದಿಕ್ಕಿವೆ. ಶಿವಮೊಗ್ಗದ ಉದಾಹರಣೆ ತೆಗೆದುಕೊಂಡರೆ ಇಲ್ಲಿ ಒಂದು ಎಕರೆ ಜಾಗ ಪಡೆಯೋಣವೆಂದರೆ ಉದ್ಯಮಿಗಳು 2ವರೆ ಕೋಟಿ ನೀಡುವ ಪರಿಸ್ಥಿತಿ ಇದೆ. ಅದಕ್ಕಿಂತ ಅಡಿಕೆ ತೋಟದ ಆದಾಯವೇ ಉತ್ತಮ ಎನ್ನುತ್ತಾರೆ.
ದೇಶದಲ್ಲಿ ಕರ್ನಾಟಕ ಸೀನಿಯರ್ ಸಿಟಿಜನ್ ಪ್ಯಾರಾಡೈಸ್ ಆಗಿದೆ. ಅದನ್ನು ಗಮನಿಸಿ ವಿದೇಶಿ ಕಂಪನಿಗಳು ಇಲ್ಲಿ ಓಲ್ಡ್ ಏಜ್ ಹೋಂ ಬಿಗ್ ಇಂಡಸ್ಟ್ರೀ ಮಾಡಲು ಹೊರಟಿದ್ದಾರೆ. 100ರಲ್ಲಿ 8ರಷ್ಟು ಉದ್ಯಮಿಗಳು ಮಾತ್ರ ಯಶಸ್ವಿಯಾಗುತ್ತಿದ್ದಾರೆ. ಆದರೆ ಇಲ್ಲಿನ ಜನಸಂಖ್ಯೆಯ ಲಾಭವನ್ನು ವಿದೇಶಿ ಕಂಪನಿಗಳು ಬಾಚುತ್ತಿವೆ. 20 ಕೋಟಿಯಷ್ಟು ವಿದ್ಯಾವಂತ ಯುವಕರು ಡಿಲೆವರಿ ಬಾಯ್ಗಳಾಗಿ ಕೆಲಸ ಮಾಡುತ್ತಿದ್ದಾರೆ. ದೇಶದ ಎಲ್ಲಾ ಭಾಗದ ಜನರಿಗೆ ಕರ್ನಾಟಕದಲ್ಲಿ ಉದ್ಯೋಗ ಸಿಗುತ್ತಿದೆ. ದೇಶದ ಐದು ರಾಜ್ಯಗಳು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ದಾಪುಗಾಲು ಇಕ್ಕುತ್ತಿದೆ, ಅದರಲ್ಲಿ ಕರ್ನಾಟಕವೂ ಸೇರಿದೆ. ಹಿಂದಿನ ಸಾಧನೆ ಮುಂದಿನ ಯೋಚನೆಗಳು ಮತ್ತು ಯಶಸ್ವಿ ಉದ್ಯಮಿಗಳಾಗಬೇಕಾದರೆ ಕಠಿಣಶ್ರಮ ಪಡಬೇಕು. ಕುಟುಂಬದ ಮುಖ್ಯಸ್ಥರು ಮಕ್ಕಳನ್ನು ನಿರ್ಬಲರು ಎಂದು ತಾತ್ಸಾರ ಮಾಡದೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಜವಾಬ್ದಾರಿಯನ್ನು ನೀಡಿದರೆ ಆತ ಕೂಡ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದರು.
ಈ ಬಗ್ಗೆ ಸುಮಾರು 1ಗಂಟೆಗಳ ಉಪನ್ಯಾಸ ನೀಡಿದ ಅವರು, ಪ್ರಪಂಚದಲ್ಲಿ ನಮ್ಮ ದೇಶದ ಸ್ಥಿತಿಗತಿಯನ್ನು ವಿವರಿಸಿದರು. ಸಂಘದ ಅಧ್ಯಕ್ಷ ಗೋಪಿನಾಥ್ ಪ್ರಸ್ತಾವಿಕವಾಗಿ ಮಾತನಾಡಿ, 84ನೇ ಇಳಿ ವಯಸ್ಸಿನಲ್ಲಿ ಬಹುಮುಖ ವ್ಯಕ್ತಿತ್ವದ ಉತ್ಸಾಹಿ ಅನೇಕ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘದ ಸಂಸ್ಥಾಪಕ ಸದಸ್ಯರು, ಅಧ್ಯಕ್ಷರು ಆಗಿ ಸೇವೆ ಸಲ್ಲಿಸಿದ ಅಶ್ವತ್ಥ್ ನಾರಾಯಣ ಶೆಟ್ಟಿಯವರ ಅಭಿನಂದನಾ ಸಮಾರಂಭದ ಸಂದರ್ಭದಲ್ಲಿ ಖ್ಯಾತ ಉದ್ಯಮಿ 5 ಸಾವಿರ ಬಂಡವಾಳದಿಂದ 3 ಟ್ರಿಲಿಯನ್ ಕಂಪನಿ ಮಾಡಿದ ಜ್ಯೋತಿ ಲ್ಯಾಬರೇಟರೀಸ್ ಸಂಸ್ಥಾಪಕರಲ್ಲಿ ಒಬ್ಬರಾದ ಉಲ್ಲಾಸ್ ಕಾಮತ್ ಅವರು ಸಿಗುವುದೇ ದುರ್ಲಬ. ಅವರು ಶಿವಮೊಗ್ಗದವರು ಎಂಬುದು ನಮಗೆಲ್ಲರಿಗೂ ಹೆಮ್ಮೆ. ಗಿನ್ನೀಸ್ ರೆಕಾರ್ಡ್ ಕೂಡ ಅವರ ಹೆಸರಲ್ಲಿದೆ. ಕೆಲವೊಂದು ಸತ್ಯಗಳು ಒಪ್ಪಿಕೊಳ್ಳುವುದು ಕಷ್ಟ. ಆದರೆ ಆ ಸತ್ಯವನ್ನು ಹೇಳಲೇಬೇಕು ಎನ್ನುವುದು ಉಲ್ಲಾಸ್ ಕಾಮತ್ ಅವರ ನಿಲುವು. ಅಲ್ಲದೆ ಸಣ್ಣ ಕೈಗಾರಿಕೋದ್ಯಮಿಗಳ ಪರವಾಗಿ ಉದ್ಯಮದ ಪ್ರಸ್ತುತ ಪರಿಸ್ಥಿತಿ ಮತ್ತು ಯಶಸ್ಸು ಹಾಗೂ ಕೈಗಾರಿಕೆಯಲ್ಲಿ ಉದ್ಯಮಿಗಳಿಗೆ ಆಗುತ್ತಿರುವ ಸಂಕಷ್ಟಗಳ ಬಗ್ಗೆ ಅವರು ಅಪಾರ ಜ್ಞಾನ ಹೊಂದಿದ್ದು, ಈ ಬಗ್ಗೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ಗೆ ಸಲಹೆ ಕೊಡುವವರಿದ್ದಾರೆ. ಅವರ ಈ ಉಪನ್ಯಾಸ ಉದ್ಯಮಿಗಳಿಗೆ ಸದುಪಯೋಗವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಯುವ ಉದ್ಯಮಿಗಳು ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು. ವೇದಿಕೆಯಲ್ಲಿ ಎಂ.ಎಲ್.ಸಿ. ಅಶ್ವತ್ಥ್ ನಾರಾಯಣ್, ಉದ್ಯಮಿ ಎಸ್.ರುದ್ರೇಗೌಡ, ಪ್ರಮುಖರಾದ ಸುರೇಶ್, ಭೂಪಾಳಂ ಶಶಿಧರ್, ಲಕ್ಷ್ಮೀದೇವಿ ಗೋಪಿನಾಥ್, ಶರತ್, ಜಿ.ವಿಜಯಕುಮಾರ್, ರಮೇಶ್ಬಾಬು, ಮಾಜಿ ಅಧ್ಯಕ್ಷರಾದ ವಾಸುದೇವ್, ಪಿ.ರುದ್ರೇಶ್, ಗಣೇಶ್ ಅಂಗಡಿ, ಸತೀಶ್ಕುಮಾರ್ ಶೆಟ್ಟಿ ಮತ್ತಿತರರಿದ್ದರು