ಸಾಗರ : ಇಡೀ ಜಗತ್ತು ಭಾರತದ ಕಡೆ ತಿರುಗಿ ನೋಡುವಂತಹ ಶ್ರೇಷ್ಟ ಆಡಳಿತ ನೀಡಿದ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿ ಅವರದ್ದು. ಹಿಂದಿನ ಎಲ್ಲ ಪ್ರಧಾನ ಮಂತ್ರಿಗಳ ಅಧಿಕಾರಾವಧಿಯ ದಾಖಲೆ ಮುರಿಯುವ ಜೊತೆಯಲ್ಲಿ ಅಭಿವೃದ್ದಿಯಲ್ಲೂ ಮೋದಿಯವರು ವಿಶೇಷ ಸಾಧನೆ ಮಾಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಇಲ್ಲಿನ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಶನಿವಾರ ಬಿಜೆಪಿ ವತಿಯಿಂದ ನರೇಂದ್ರ ಮೋದಿ ಅವರ ಆಡಳಿತಕ್ಕೆ ಹನ್ನೆರಡು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು, ರೈಲ್ವೆ ನಿಲ್ದಾಣದ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಅವರು ಮಾತನಾಡುತ್ತಿದ್ದರು.
ಭವಿಷ್ಯದ ದೃಷ್ಟಿಯಿಂದಾಗಿ ದೇಶದಲ್ಲಿ ರೈಲ್ವೆ ಯೋಜನೆಯನ್ನು ವಿಸ್ತರಿಸಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಗೂ ಅಭಿವೃದ್ದಿಯ ಸಿಂಹಪಾಲು ದೊರೆತಿದೆ. ಶಿವಮೊಗ್ಗದಿಂದ ತಾಳಗುಪ್ಪವರೆಗೆ ರೈಲ್ವೆ ಮೂಲಸೌಲಭ್ಯ ಅಭಿವೃದ್ದಿಪಡಿಸಲು ಸುಮಾರು ೧೦೦ ಕೋಟಿ ರೂ. ವಿನಿಯೋಗಿಸಲಾಗಿದೆ. ತಾಳಗುಪ್ಪದಿಂದ ಸಿದ್ದಾಪುರ, ಶಿರಸಿ, ಹುಬ್ಬಳ್ಳಿ ರೈಲ್ವೆ ಸಂಪರ್ಕ ವಿಸ್ತರಣೆಗೆ ಸರ್ವೇ ಕಾರ್ಯ, ಹೊನ್ನಾವರಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ. ಸಾಗರಕ್ಕೆ ರೈಲ್ವೆ ಉಳಿದಿದೆ ಎಂದರೆ ಅದಕ್ಕೆ ಯಡಿಯೂರಪ್ಪ ಅವರ ಇಚ್ಚಾಸಕ್ತಿ ಕಾರಣವಾಗಿದೆ. ಬ್ರಾಡ್ಗೇಜ್ ನಿರ್ಮಾಣಕ್ಕೆ ೧೮೦ ಕೋಟಿ ಮ್ಯಾಚಿಂಗ್ ಗ್ರ್ಯಾಂಟ್ ನೀಡಿದ್ದರಿಂದ ಸಾಗರ ರೈಲ್ವೆ ಮಾರ್ಗ ಉಳಿಸಿ ಕೊಳ್ಳಲು ಸಾಧ್ಯವಾಗಿತ್ತು. ನಂತರದ ದಿನಗಳಲ್ಲಿ ನಾನು ಸಂಸದನಾದ ಮೇಲೆ ರೈಲ್ವೆ ಅಭಿವೃದ್ದಿಗೆ ವಿಶೇಷ ಆದ್ಯತೆ ನೀಡಿದ್ದೇನೆ ಎಂದು ಹೇಳಿದರು.
ಬಾಕ್ಸ್ : ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ವಿವಿಧ ಸೌಲಭ್ಯ ಒದಗಿಸುವಂತೆ ರೈಲ್ವೆ ಹೋರಾಟ ಸಮಿತಿ ಸಂಸದರಿಗೆ ಮನವಿ ಸಲ್ಲಿಸಿತು. ಪ್ರಮುಖವಾಗಿ ತಾಳಗುಪ್ಪ-ಬೆಂಗಳೂರು ಇಂಟರಸಿಟಿ ರೈಲನ್ನು ಬೆಳಿಗ್ಗೆ ೭ಕ್ಕೆ ತಾಳಗುಪ್ಪದಿಂದ ಬಿಡಬೇಕು, ಮೈಸೂರು ಬೆಂಗಳೂರು ತಾಳಗುಪ್ಪ ರೈಲಿನ ವೇಳಾಪಟ್ಟಿ ಬದಲಾವಣೆ ಮಾಡಬೇಕು. ಮೈಸೂರು ಬೆಂಗಳೂರು ತಾಳಗುಪ್ಪ ರೈಲಿನಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಮಾಡಬೇಕು. ಯಶವಂತಪುರ-ಶಿವಮೊಗ್ಗ ರೈಲನ್ನು ತಾಳಗುಪ್ಪವರೆಗೆ ವಿಸ್ತರಿಸಬೇಕು. ಬೀರೂರು-ಶಿವಮೊಗ್ಗವರೆಗಿನ ಡಬ್ಬಲ್ ಲೈನ್ ತಾಳಗುಪ್ಪವರೆಗೆ ವಿಸ್ತರಿಸಬೇಕು. ರೈಲ್ವೆ ನಿಲ್ದಾಣದಲ್ಲಿ ಸ್ನಾನಗೃಹ ಹಾಗೂ ಶೌಚಾಲಯ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಬೇಕು ಎಂಬಿತ್ಯಾದಿ ಬೇಡಿಕೆಯನ್ನು ಸಲ್ಲಿಸಲಾಯಿತು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿಯ ಕುಮಾರಸ್ವಾಮಿ, ಶಿವಮೂರ್ತಿ, ಬಿಜೆಪಿ ಪ್ರಮುಖರಾದ ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಪ್ರಸನ್ನ ಕೆರೆಕೈ, ಆರ್.ಶ್ರೀನಿವಾಸ್, ಗಣೇಶಪ್ರಸಾದ್, ದೇವೇಂದ್ರಪ್ಪ, ಮಧುರಾ ಶಿವಾನಂದ್, ಮೈತ್ರಿ ಪಾಟೀಲ್, ಪ್ರೇಮ ಸಿಂಗ್, ಗಾಯತ್ರಿ, ಶ್ವೇತಾ ಸಂತೋಷ್ ಶೇಟ್, ಪ್ರದೀಪ್ ಆಚಾರಿ ಇನ್ನಿತರರು ಹಾಜರಿದ್ದರು.