
ಶಿವಮೊಗ್ಗ, ಜೂ.೧೨:
ದೇಶದ ಹೆಮ್ಮೆಯ ಹಾಗೂ ಅತಿದೊಡ್ಡ ಪುಸ್ತಕ ವ್ಯಾಪಾರ ಮಳಿಗೆ ಸ್ವಪ್ನ ಬುಕ್ಹೌಸ್ನ ೨೫ನೇ ಶಾಖೆಯ ಉದ್ಘಾಟನೆ ನಾಳೆ ಜೂನ್೧೩ರಂದು ಬೆಳಿಗ್ಗೆ ೧೧ಗಂಟೆಗೆ ಬಿ.ಹೆಚ್.ರಸ್ತೆಯ ಬ್ಯಾರೀಸ್ ಸಿಟಿಸೆಂಟರ್ ಮಾಲ್ನಲ್ಲಿ ನಡೆಯಲಿದೆ ಎಂದು ಸಪ್ನ ಬುಕ್ಹೌಸ್ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮಿಜೀ ಉದ್ಘಾಟನಾ ಸಮಾರಂಭದ ದಿವ್ಯಸಾನಿಧ್ಯವನ್ನು ವಹಿಸಲಿದ್ದು, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಬ್ಯಾರೀಸ್ ಗ್ರೂಪ್ ಸಂಸ್ಥಾಪಕ ಸೈಯದ್ ಮೊಹಮ್ಮದ್ ಬ್ಯಾರಿ ಸೇರಿದಂತೆ ಗಣ್ಯಾತಿಗಣ್ಯರು ಉಪಸ್ಥಿತರಿರುವರು ಎಂದರು.
೧೯೬೭ರಲ್ಲಿ ಕೇವಲ ೪೦ ಚದರ ಅಡಿ ಜಾಗದಲ್ಲಿ ಆರಂಭವಾದ ಪುಸ್ತಕ ಮಳಿಗೆ ಇಂದು ಒಟ್ಟು ೫,೫೦,೦೦೦ ಚದರ ಅಡಿ ಹೊಂದುವಂತಾಗಿದೆ. ೯೦೦೦ಕ್ಕೂ ಹೆಚ್ಚು ಪ್ರಕಟಣೆಯನ್ನು ಹೊರತಂದ ಹೆಗ್ಗಳಿಕೆ ತಮ್ಮ ಸಂಸ್ಥೆಯದ್ದಾಗಿದ್ದು, ೫೦೦ಕ್ಕೂ ಹೆಚ್ಚು ಲೇಖಕರ ಕೃತಿಯನ್ನು ಪ್ರಕಟಿಸಿದ ಭಾಜನಕ್ಕೆ ಒಳಗಾಗಿದೆ. ಜ್ಞಾನ ದಾನ, ಅನುಭವ ದಾನ, ತತ್ವವನ್ನು ಆಧರಿಸಿ ಪುಸ್ತಕ ಮಳಿಗೆ ಕಾರ್ಯನಿರ್ವಹಿಸುತ್ತಿದ್ದು, ದಿನಕ್ಕೆ ಸುಮಾರು ೬೦ಸಾವಿರ ಪುಸ್ತಕ ಪ್ರೇಮಿಗಳು ಮಳಿಗೆಗೆ ಭೇಟಿ ಕೊಡುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಅತ್ಯುತ್ತಮ ಪ್ರಕಾಶನ ಪ್ರಶಸ್ತಿ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಭಾರತದ ಅತಿದೊಡ್ಡ ಪುಸ್ತಕ ಭಂಡಾರ ಎಂಬ ದಾಖಲೆಗೆ ಪಾತ್ರವಾಗಿದೆ ಎಂದರು.

ತಮ್ಮ ಬುಕ್ಹೌಸ್ ೭ ಸಾವಿರ ಗ್ರಂಥಾಲಯಗಳಿಗೆ ಪುಸ್ತಕ ಸರಬರಾಜು ಮಾಡುತ್ತಿದ್ದು, ಒಂದು ಸಾವಿರಕ್ಕೂ ಹೆಚ್ಚು ಪಠ್ಯ-ಪುಸ್ತಕ, ಸ್ಪರ್ಧಾತ್ಮಕ ಪರೀಕ್ಷೆಗಳ ಗ್ರಂಥಗಳನ್ನು ಓದುಗರಿಗೆ ನೀಡುತ್ತಿದೆ. ಆನ್ಲೈನ್ ಮೂಲಕವೂ ಪುಸ್ತಕ ಪ್ರೇಮಿಗಳು ವ್ಯವಹರಿಸುವ ಸೌಲಭ್ಯವನ್ನು ತಾವು ನೀಡುತ್ತಿದ್ದು, ಹೆಚ್ಚಿನ, ಅಪರೂಪದ ಪುಸ್ತಕಗಳು ಬೇಕಾದಲ್ಲಿ ಸಪ್ನ ಕಿಯಾಕ್ಸ್ ಎಂಬ ತಂತ್ರಾಂಶ ಪರಿಚಯಿಸುತ್ತಿದ್ದು ೨೦ ಮಿಲಿಯನ್ಗೂ ಹೆಚ್ಚಿನ ಪುಸ್ತಕಗಳ ಬಗ್ಗೆ ಇದರಲ್ಲಿ ಮಾಹಿತಿ ಪಡೆದುಕೊಳ್ಳುವುದಲ್ಲದೆ ಖರೀದಿಯನ್ನು ಮಾಡಬಹುದು ಎಂದ ಅವರು, ಬುಕ್ಹೌಸ್ನಿಂದ ಮನೆ ಬಾಗಿಲಿಗೂ ಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈಗ ಶಿವಮೊಗ್ಗದಲ್ಲಿ ಆರಂಭವಾಗುತ್ತಿರುವ ತಮ್ಮ ಬುಕ್ಹೌಸ್ ೧೦,೦೦೦ ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಸುಮಾರು ೬೦ ಸಾವಿರ ಚದರ ಅಡಿ ಗೋದಾಮನ್ನು ಹೊಂದಿದೆ. ಇಲ್ಲಿ ೫ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಇಡಲಾಗುತ್ತಿದ್ದು, ೨೫೦ಕ್ಕೂ ಹೆಚ್ಚು ಬೇರೆ ಬೇರೆ ವರ್ಗದ ಪುಸ್ತಕಗಳನ್ನು ಒದಗಿಸಲಾಗುವುದು. ಉದ್ಘಾಟನಾ ಸಂದರ್ಭದಲ್ಲಿ ಖರೀದಿಸುವ ಪುಸ್ತಕಗಳಿಗೆ ಆಕರ್ಷಕ ರಿಯಾಯಿತಿ ಏರ್ಪಡಿಸಿದ್ದು, ಕೆಲವು ಉಚಿತ ಉಡುಗೊರೆಗಳು ಸಂದಾಯವಾಗಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನಿಜೇಶ್, ಜಿಎಂ ದೊಡ್ಡೇಗೌಡ, ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ಎಂ.ಎನ್.ಸುಂದರ್ರಾಜ್ ಇದ್ದರು.
