ಶಿವಮೊಗ್ಗ : ಕೇಂದ್ರದಲ್ಲಿ ಪ್ರಧಾನಿ ಮೋದಿ ದೇಶದ ಚುಕ್ಕಾಣಿ ಹಿಡಿದು೧೨ ವರ್ಷ ಕಳೆದಿದ್ದು, ಈ ಅವಧಿಯಲ್ಲಿ ಅವರುಜಾಗತಿಕ ಮಟ್ಟದಲ್ಲಿ ಭಾರತವನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ದು, ಕೋಟ್ಯಂತರ ಭಾರತೀಯರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಕೇಂದ್ರದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ೧೨ ವರ್ಷ ಪೂರೈಸಿ ದಾಖಲೆ ಬರೆದ ಹಿನ್ನೆಯಲ್ಲಿ ಜೂ. ೧೦ ರಂದು ಬುಧವಾರ ಬಿಜೆಪಿ ಕಾರ್ಯಕರ್ತರು ಹಾಗೂ ಸಂಸದರು ಒಟ್ಟಾಗಿ ಕಲ್ಲಹಳ್ಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಗೌರವ ಗಳಿಸುತ್ತಿದ್ದು, ಇನ್ಫ್ರಾಸ್ಟ್ರಕ್ಚರ್ ಹಾಗೂ ರಾಷ್ಟ್ರೀಯತೆ ವಿಚಾರದಲ್ಲಿ ದೇಶವು ಮುನ್ನಡೆಯುತ್ತಿದೆ. ೨೦೪೭ರ ವೇಳೆಗೆ ’ವಿಕಸಿತ ಭಾರತ’ ನಿರ್ಮಾಣದ ಸಂಕಲ್ಪಕ್ಕೆ ವಿಘ್ನೇಶ್ವರನು ಶಕ್ತಿ ತುಂಬಲಿ ಹಾಗೂ ಪ್ರಧಾನಿಯವರಿಗೆ ಮತ್ತಷ್ಟು ಉತ್ತಮ ಆರೋಗ್ಯ, ಸದೃಢತೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು ಎಂದರು.
ಇದೇ ವೇಳೆ ವಿಧಾನ ಪರಿಷತ್ ಚುನಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ,ಬಿಜೆಪಿ- ಜೆಡಿಎಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ.ಹೆಚ್ಚುವರಿ ಅಭ್ಯರ್ಥಿ ಕಣದಲ್ಲಿದ್ದರೂ, ಶಾಸಕರಲ್ಲಿ ಪ್ರಧಾನಿ ಮೋದಿಯವರ ಮೇಲಿರುವ ವಿಶ್ವಾಸದಿಂದಾಗಿ ಬಿಜೆಪಿಯ ಇಬ್ಬರು ಅಧಿಕೃತ ಅಭ್ಯರ್ಥಿಗಳು ಮಾತ್ರವಲ್ಲದೆ, ಜೆಡಿಎಸ್ ಹಾಗೂ ಹಾಗೂ ಮೈತ್ರಿ ಹೊಂದಾಣಿಕೆಯ ಮೂರನೇ ಅಭ್ಯರ್ಥಿಯೂ ಕೂಡ ನೂರಕ್ಕೆ ನೂರು ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ : ಹೆಚ್.ಡಿ. ದೇವೇಗೌಡ ಅವರಿಗೆ ಬಿಜೆಪಿ ಮೈತ್ರಿಕೂಟದಿಂದ ಅನ್ಯಾಯ ಹಾಗೂ ಅವಮಾನವಾಗಿದೆ ಎಂಬ ಕಾಂಗ್ರೆಸ್ ಆರೋಪವನ್ನು ಮೈತ್ರಿ ನಾಯಕರು ಹಾಗೂ ಸಂಸದರು ತಳ್ಳಿಹಾಕಿದ್ದಾರೆ. ದೇವೇಗೌಡರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡ ಏಕೈಕ ನಾಯಕರೆಂದರೆ ಅದು ಪ್ರಧಾನಿ ನರೇಂದ್ರ ಮೋದಿ. ಕಾಂಗ್ರೆಸ್ನ ಈ ರಾಜಕೀಯ ಆರೋಪಗಳಿಗೆ ಸ್ವತಃ ದೇವೇಗೌಡರೇ ಪತ್ರಿಕಾಗೋಷ್ಠಿ ನಡೆಸಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಆರ್ಎಸ್ಎಸ್ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದರು, ಆರ್ಎಸ್ಎಸ್ ವಿಚಾರವನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ ಮತ್ತು ಅದರ ಪ್ರತಿಫಲವಾಗಿಯೇ ಇಂದು ದೇಶ ಮುನ್ನಡೆಯುತ್ತಿದೆ. ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ಹೈಕಮಾಂಡ್ ಅನ್ನು ಮೆಚ್ಚಿಸಲು ಹಾಗೂ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಕಿಡಿ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ವಿಳಂಬವಾಗುತ್ತಿರುವುದಕ್ಕೆ ರಾಜ್ಯ ಸರ್ಕಾರದ ಧೋರಣೆಯೇ ಕಾರಣ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಆರೋಪಿಸಿದರು.
ಕೇವಲ ೨೬ ಕೋಟಿ ರೂ. ವೆಚ್ಚದ ಈ ಕಾಮಗಾರಿಯನ್ನು ಸರ್ಕಾರ ಇಷ್ಟೊತ್ತಿಗಾಗಲೇ ಮುಗಿಸಬಹುದಿತ್ತು. ಮಳೆಗಾಲದಲ್ಲಿ ವಿಸಿಬಿಲಿಟಿ ಸಮಸ್ಯೆಯಿಂದಾಗಿ ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ನೀಡುತ್ತಿದ್ದ ವಯಬಿಲಿಟಿ ಫಂಡಿಂಗ್ ಅನ್ನು ಈ ಸರ್ಕಾರ ನೀಡುತ್ತಿಲ್ಲ. ಇನ್ಮುಂದೆ ಶಿವಮೊಗ್ಗ-ಬೆಂಗಳೂರು ವಿಮಾನಯಾನವನ್ನು ಕೇಂದ್ರ ಸರ್ಕಾರದ ‘ಉಡಾನ್-೪’ ಯೋಜನೆಯಡಿ ಸೇರಿಸಿ, ವಿಮಾನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ನಡೆದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಬಿಜೆಪಿ ೭ನೇ ವಾರ್ಡ್ ಅಧ್ಯಕ್ಷ ವಿಶ್ವನಾಥ್, ಪಾಲಿಕೆ ಮಾಜಿ ಸದಸ್ಯ ರಾದ ಸೋಮಸುಂದರ್, ಮಾಲತೇಶ್ ಸಿ.ಹೆಚ್., ಆರ್ಎಸ್ಎಸ್ ಮುಖಂಡರಾದ ಪದ್ಮನಾಭ ಭಟ್, ನಗರ ಕಾರ್ಯದರ್ಶಿ ರಂಗೇಶ್ ಮತ್ತಿತರರು ಪಾಲ್ಗೊಂಡರು. ಈ ವೇಳೆ ಪಟಾಕಿ ಸಿಡಿಸಿ ನಂತರ ಸಿಹಿ ಹಂಚಲಾಯಿತು. ಹಾಗೆಯೇ ದೇವಸ್ಥಾನದ ಆವರಣದಲ್ಲಿ ಗಿಡ ನೆಡಲಾಯಿತು.