ಶಿವಮೊಗ್ಗ ನಗರದಾದ್ಯಂತ ಹಲವು ವಾರ್ಡ್‌ಗಳಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಸರಿ ಇರುವ ರಸ್ತೆಗಳನ್ನು ಹೊಡೆದು ಹೊಸದಾಗಿ ಅವರವರ ಸ್ವಂತ ಬ್ರಿಕ್ಸ್‌ಗಳನ್ನು ಹಾಕಿಕೊಂಡು ಬಿಲ್ಲು ಮಾಡಿಸಿಕೊಳ್ಳುತ್ತಿರುವ ಬಗ್ಗೆ ನೂರಾರು ಅನುಮಾನ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹುಟ್ಟಿವೆ.
ಚಿಕ್ಕ ಈ ಎರಡು ಉದಾಹರಣೆಗಳನ್ನು ಗಮನಿಸಿ
ಶಿವಮೊಗ್ಗ ಗಾರ್ಡ್‌ನ್ ಏರಿಯಾ 3ನೇ ತಿರುವಿನಲ್ಲಿ ಕಳೆದ ಮೂರು ತಿಂಗಳ ಹಿಂದೆ ಮಾಡಿದ್ದ ಕಾಂಕ್ರಿಟ್ ರಸ್ತೆ ಸಮರ್ಪಕ ಬಳಕೆಯಾಗುವ ಮುನ್ನವೇ ಯುಜಿಡಿಗೆಂದು ಮತ್ತೆ ಸುಂದರ ರಸ್ತೆಯಲ್ಲಿ ತುಂಡು ತುಂಡು ಮಾಡಿ ಇಡೀ ಕಾಮಗಾರಿಯನ್ನು ನೆಲಸಮಗೊಳಿಸಿದ್ದಾರೆ.
ಈ ಏರಿಯಾದ ಗಣೇಶ್‌ಟ್ರೇಡರ‍್ಸ್ ಎದುರಿನ ರಸ್ತೆಯಲ್ಲಿ ಹಿಂದೇ ಇದೇ ಯುಜಿಡಿ ಕಾಮಗಾರಿಗೆಂದು ೧೫ದಿನ ಕೆಲಸ ನಿಲ್ಲಿಸಿದ್ದ ಈ ಗುತ್ತಿಗೆದಾರ ಮಹಾಶಯ, ತಲೆ ಇಲ್ಲದ ಇಂಜಿನಿಯರ್ ಗಳ ಮಾತಿನಂತೆ ರಸ್ತೆ ನಿರ್ಮಿಸಿ ಈಗ ಮತ್ತೆ ಇಂಜಿನಿಯರ್‌ಗಳ ಎಡಬಿಡಂಗಿತನ ಅರ್ಥಮಾಡಿಕೊಳ್ಳುವಲ್ಲಿ ಸೋತು ಮತ್ತೆ ಗುಂಡಿ ತೋಡಿದ್ದಾರೆ. ಲಾಕ್‌ಡೌನ್‌ಗೆ ಒಂದಿಷ್ಟು ವಿರಾಮ ಸಿಕ್ಕರು ಇಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶವಿಲ್ಲದಿರುವುದು ಜನರ ಹಾಗೂ ಅಂಗಡಿ ಮಾಲೀಕರ ಆರೋಪವಾಗಿದೆ.
ಅಂತೆಯೇ ಚೆನ್ನಾಗಿರುವ ನೆಹರೂ ರಸ್ತೆಯ ಫುಟ್‌ಪಾತ್ ಮೇಲೆ ತೆಗೆದ ಮೆಸ್ಕಾಂ ಕೇಬಲ್ ಲೈನ್ ಸಂಪೂರ್ಣವಾಗಿ ಮುಗಿದಿಲ್ಲ. ಪ್ರತಿ ಕ್ರಾಸ್‌ಗಳ ಎರಡೂ ಬದಿಯಲ್ಲಿ ಇಂತಹ ಅಡ್ಡಕಸುಬಿತನ ನಡೆದಿರುವುದು ಎಷ್ಟರ ಮಟ್ಟಿಗೆ ಸರಿ. ನೆಹರೂ ರಸ್ತೆಯಲ್ಲಿ ಹಳೆಯ ಬ್ರಿಕ್ಸ್ ತೆಗೆದು ದೂಳು ಕೊಡವಿ ಹೊಸದಾಗಿ ಜೋಡಿಸಿ ಲಕ್ಷಾಂತರ ರೂಪಾಯಿ ಲೆಕ್ಕಬರೆದುಕೊಳ್ಳುವ ತಲೆಇಲ್ಲದ ಇಂಜಿನಿಯರ್‌ಗಳು ಬಹುಶಃ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಪಾಲಿಗೆ ಒಳ್ಳೆಯ ಅಧಿಕಾರಿಗಳಿರಬಹುದು. ಊರ ಜನ, ಊರಿನಲ್ಲಿ ಉಳಿದ ಜನಪ್ರತಿನಿಧಿಗಳು ಇಡೀ ಸ್ಮಾರ್ಟ್‌ಸಿಟಿ ಕಾಮಗಾರಿಗೆ ಎದ್ದುಬಿದ್ದು ಕ್ಯಾಕರಿಸಿ ಉಗಿಯುತ್ತಿರುವುದು ತಮ್ಮ ಗಮನಕ್ಕೆ ಬಾರದಿರುವುದು ಶಿವಮೊಗ್ಗ ಜನರ ಪಾಲಿಗೆ ಘೋರ ದುರಂತವೇ ಹೌದು.
ಈಗಲಾದರೂ ಸಚಿವರು ಹಾಗೂ ಶಾಸಕರಾದ ಕೆ.ಎಸ್.ಈಶ್ವರಪ್ಪ ಅವರೇ ಇತ್ತ ಗಮನಿಸಿ ಎಂದು ಇಲ್ಲಿನ ವರ್ತಕರು ಪ್ರೀತಿ ಹಾಗೂ ಆಕ್ರೋಶದಿಂದ ಪತ್ರಿಕೆಯ ಮೂಲಕ ಒತ್ತಾಯಿಸಿದ್ದಾರೆ.