ಶಿವಮೊಗ್ಗ : ಮಾಧ್ಯಮ ತನ್ನ ಸ್ವರೂಪ ಬದಲಾಯಿಸಿಕೊಂಡಿದ್ದು ಮೂಲ ಸ್ವರೂಪದಿಂದ ವಿಮುಖವಾಗಿದೆ. ಪತ್ರಕರ್ತ ಅಪ್ಡೇಟ್ ಆಗದಿದ್ದರೆ ವೃತ್ತಿಯಿಂದಲೇ ಔಟ್ಡೇಟ್ ಆಗುವ ಪರಿಸ್ಥಿತಿ ಇದ್ದು ಮುದ್ರಣ ಮಾಧ್ಯಮ ಸಾಮಾಜಿಕ ಜಾಲತಾಣದ ಸವಾಲಿನ ಎದುರು ಮಾಯವಾಗುವ ಆತಂಕದಲ್ಲಿದೆ ಎಂದು ಕರ್ನಾಟಕ ಮಾಹಿತಿ ಆಯೋಗ ಕಲ್ಬುರ್ಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ.ವೆಂಕಟಸಿಂಗ್ ಹೇಳಿದ್ದಾರೆ.
ಅವರು ಇಂದು ಸರ್ಕಾರಿ ನೌಕರರ ಭವನದಲ್ಲಿ ಶಿವಮೊಗ್ಗ ಪ್ರೆಸ್ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪಿ. ಲಂಕೇಶ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನಾಡಿನ ಅತ್ಯಂತ ಕ್ರೀಯಾಶೀಲ ಪತ್ರಕರ್ತರಾಗಿ ರಾಜ್ಯ ರಾಜಕಾರಣದಲ್ಲೇ ತಮ್ಮ ಪತ್ರಿಕೋದ್ಯಮದಿಂದ ಸಂಚಲನ ಮೂಡಿಸಿದ ಪಿ. ಲಂಕೇಶ್ ಹೆಸರಿನಲ್ಲಿ ನೀಡುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸುವುದೇ ನನ್ನ ಪಾಲಿನ ಸುಯೋಗ ಅದರಲ್ಲೂ ಅಂಬೇಡ್ಕರ್ ಜಯಂತಿಯಂದು ಅವರ ಆಶಯಕ್ಕೆ ಪೂರಕವಾದ ಗಾಂಧೀಜಿ ಮತ್ತು ಅಂಬೇಡ್ಕರ್ ಸಿದ್ಧಾಂತದೊಂದಿಗೆ ಪಿ. ಲಂಕೇಶ್ ಅವರ ಪತ್ರಿಕೋದ್ಯಮವನ್ನು ಅನುಸರಿಸಿದ ಸರಳ ಸಜ್ಜನಿಕೆಯ ಹಿರಿಯ ಪತ್ರಕರ್ತರಾದ ಡಿ. ಮಹಾದೇವಪ್ಪನವರಿಗೆ ಪಿ. ಲಂಕೇಶ್ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ಸಂತೋಷದ ವಿಚಾರವೆಂದರು.

ಬಂಡವಾಳ ಶಾಹಿಗಳು ಪತ್ರಿಕಾರಂಗ ಪ್ರವೇಶ ಮಾಡಿದ್ದಾರೆ. ತಮ್ಮ ಬಂಡವಾಳ ಮರು ಪಡೆಯಲು ಪತ್ರಕರ್ತರ ಮೇಲೆ ವೃತ್ತಿಧರ್ಮದಿಂದ ವಿಚಲಿತರಾಗುವಂತೆ ಒತ್ತಡ ಹೇರುತ್ತಾರೆ. ಜಾಹೀರಾತು ಆಧಾರದ ಮೇಲೆ ಮುದ್ರಣ ಮಾಧ್ಯಮ ನಿಲ್ಲುವ ಸ್ಥಿತಿ ಬಂದಿದೆ. ಅದೆನ್ನೆಲ್ಲಾ ಮೀರಿ ಸಾಮಾಜಿಕ ಜಾಲತಾಣಗಳ ಬ್ರೇಕಿಂಗ್ ನ್ಯೂಸ್ಗಳ ಸವಾಲನ್ನು ಎದುರಿಸುತ್ತಿದ್ದೇವೆ. ಆದರೆ ಮಾಹಿತಿಯ ನೈಜತೆ ಮುದ್ರಣ ಮಾಧ್ಯಮದಲ್ಲಿ ಮಾತ್ರ ಕಾಣುವುದು ಸಾಧ್ಯ. ಹಾಗಾಗಿ ಮುದ್ರಣ ಮಾಧ್ಯಮ ಇನ್ನೂ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. ಇದಕ್ಕೆ ಕೊಡಲಿ ಏಟು ಬಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಬುಡಮೇಲಾಗುವ ಸ್ಥಿತಿ ಬರಬಹುದು. ಮುದ್ರಣ ಮಾಧ್ಯಮದಲ್ಲಿ ಹೆಚ್ಚು ನೈಜತೆ ಮತ್ತು ಸಮಾಜಮುಖಿ ಬರಹಗಳನ್ನು ಕಾಣಬಹುದು. ಮಾಧ್ಯಮಗಳ ಸುದ್ದಿಯನ್ನೇ ಖರೀದಿಸುವ ಕಾಲ ಬಂದಿದ್ದು, ತನಿಖಾ ಪತ್ರಿಕೋದ್ಯಮ ಮಾಯವಾಗಿದೆ ಎಂದರು.

ಸಂವಿಧಾನದ ಆಶಯ, ಪತ್ರಿಕೋದ್ಯಮದ ಆಶಯ ಮತ್ತು ಮಾಹಿತಿ ಹಕ್ಕು ಆಯೋಗದ ಆಶಯ ಒಂದೇ ಆಗಿದೆ. ಪತ್ರಕರ್ತ ಮನಸ್ಸು ಮಾಡಿದರೆ ಏನು ಮಾಡಬಹುದು ಎಂದು ಪಿ. ಲಂಕೇಶ್ ನಮಗೆಲ್ಲಾ ತೋರಿಸಿಕೊಟ್ಟಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಸದುಪಯೋಗಪಡಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಕಾರ್ಯ ಪತ್ರಕರ್ತರು ಮಾಡಬೇಕಿದೆ ಎಂದರು.
ಚಿಂತಕ ಪ್ರೊ.ರಾಜೇಂದ್ರಚೆನ್ನಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬಂದಾಗ ಮಾತ್ರ ಪ್ರಜಾಪ್ರಭುತ್ವ ಇದೆ ಎಂದು ಅನಿಸುತ್ತದೆ. ಪತ್ರಿಕೋದ್ಯಮಕ್ಕೆ ಪ್ರಜಾಪ್ರಭುತ್ವದ ಜೊತೆಗೆ ಜನಸಾಮಾನ್ಯನನ್ನು ಬೆಸೆಯುವ ಶಕ್ತಿಯಿದೆ. ಭಾರತೀಯ ಪತ್ರಿಕೋದ್ಯಮಕ್ಕೆ ಶ್ರೇಷ್ಠವಾದ ಪರಂಪರೆಯಿದ್ದು, ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಪತ್ರಿಕೋದ್ಯಮದ ಮೂಲಕವೇ ಹೋರಾಟ ಪ್ರಾರಂಭಿಸಿದವರು. ಅವರ ವಿಚಾರಧಾರೆ ವಿಭಿನ್ನವಾಗಿದ್ದರೂ ಪ್ರಜಾ ಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯುವ ಹೋರಾಟವಾಗಿತ್ತು. ಸತ್ಯವನ್ನೇ ಹೇಳುವುದೇ ಪತ್ರಿಕೋದ್ಯಮವಾಗಿದೆ. ಜನಜಾಗೃತಿ ಮೂಡಿಸುವುದು, ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ಮೂಡಿಸುವುದು, ಪತ್ರಿಕೋದ್ಯಮದ ನಿಜವಾದ ಕೆಲಸವಾಗಿದೆ ಎಂದರು.
ತನಿಖಾ ಪತ್ರಿಕೋದ್ಯಮದ ಮೂಲಕ ಆಡಳಿತಶಾಹಿಗಳು, ಬಂಡವಾಳ ಶಾಹಿಗಳು ಮತ್ತು ಭ್ರಷ್ಟಾಚಾರಿಗಳ ನೈಜತೆಯನ್ನು ಬಯಲಿಗೆಳೆದಾಗ ಪತ್ರಕರ್ತನ ಮೇಲೆ ಹಲ್ಲೆ ಮತ್ತು ಅನೇಕ ಪತ್ರಕರ್ತರ ಹತ್ಯೆ ನಡೆದ ಉದಾಹರಣೆಗಳು ಇವೆ. ದುಷ್ಟ ಶಕ್ತಿಗಳು ಜೀವನವನ್ನೇ ತೆಗೆದಿದ್ದು ಇದೆ. ಬಂಡವಾಳ ಶಾಹಿಗಳ ಪ್ರವೇಶದಿಂದ ಅನೇಕ ಏರುಪೇರುಗಳಾಗಿದೆ. ಹಿಂದೆ ಪತ್ರಿಕೋದ್ಯಮ ವ್ಯವಸಾಯವಾಗಿತ್ತು. ಇಂದು ವ್ಯಾಪಾರವಾಗಿದೆ ಎಂದರು.

ರೀಲ್ಸ್ಗಳು ಮತ್ತು ವಿವಿಧ ಚಾನಲ್ಗಳು ಭ್ರಮೆಯ ಜಗತ್ತನ್ನು ಸೃಷ್ಟಿಸುತ್ತಿದ್ದು, ಜನ ಅದನ್ನೇ ಸತ್ಯವೆಂದು ಒಪ್ಪಿಕೊಂಡಿದ್ದಾರೆ ಆದ್ದರಿಂದ ನೈಜ ಪತ್ರಿಕೋದ್ಯಮದ ಮೇಲೆ ದುಷ್ಪರಿಣಾಮ ಬೀರಿದ್ದು ಪಿ. ಲಂಕೇಶ್ ಅಂತಹವರ ಪತ್ರಿಕೋದ್ಯಮ ಮತ್ತು ಅವರ ಅನುಭವ ಈಗಿನ ಪತ್ರಕರ್ತರಿಗೆ ಅವಶ್ಯವಿದ್ದು, ಶಿಕ್ಷಕರಿಗೆ ನಿಜವಾದ ಶಿಕ್ಷಣ ದೊರೆತ್ತದ್ದೇ ಆಗಿನ ಕಾಲದಲ್ಲಿ ಲಂಕೇಶ್ ಪತ್ರಿಕೆಯಿಂದ ಎಂದು ಹೇಳಬಹುದಾಗಿದೆ ಎಂದರು.
ಪ್ರೆಸ್ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಬೇಡ್ಕರ್ ಜಯಂತಿಯಂದು ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಾ ಬರುತ್ತಿದ್ದೇವೆ. ಪ್ರಶಸ್ತಿ ಎಂದರೆ ಲಾಬಿ ಮಾಡಿ ಪಡೆದುಕೊಳ್ಳುವುದು. ರಾಜಕೀಯ ವ್ಯಕ್ತಿ ಹಾಗೆಯೇ ಅರ್ಜಿ ಹಾಕಿ ಪ್ರಶಸ್ತಿ ತೆಗೆದುಕೊಳ್ಳುವ ಕಾಲದಲ್ಲಿ ನಾವಿದ್ದೀವಿ. ಅದಕ್ಕೆ ವಿಭಿನ್ನವಾಗಿ ಟೆಸ್ಟ್ ಪ್ರಶಸ್ತಿ ಆಯ್ಕೆ ಮಾಡುವಾಗ ಅವರ ಹಿರಿತನದ ಜೊತೆಗೆ ಬರಹಗಾರರಾಗಿರಬೇಕು. ಅನೇಕ ಪತ್ರಕರ್ತರನ್ನು ಸೃಷ್ಟಿಮಾಡುವ ಗುಣ ಹೊಂದಿರಬೇಕು. ಅಂತವರನ್ನು ಆಯ್ಕೆ ಮಾಡಿದಾಗ ಆ ಪ್ರಶಸ್ತಿಗೆ ಒಂದು ಗತ್ತು ಇರುತ್ತದೆ ಎಂದರು.

ಶ್ರೀನಿವಾಸ್ ಪ್ರಶಸ್ತಿ ಸಮಾರಂಭ ನಡೆಯುತ್ತದೆ. ಪತ್ರಿಕೋದ್ಯಮದ ಅತಿರಥ ಮಹಾರಥರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ರಾಜ್ಯಮಟ್ಟದಲ್ಲಿ ಹೊಸ ಆಯಾಮ ಸೃಷ್ಟಿ ಮಾಡುವ ದೆಸೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಡಿ.ಮಹಾದೇವಪ್ಪ ಮಾತನಾಡಿ, ನಾನು ಭೂತಕಾಲದ ಪತ್ರಕರ್ತ. ಲಂಕೇಶ್ ಅವರ ಟೀಕೆ-ಟಿಪ್ಪಣಿಗಳ ಮೂರು ಸಂಪುಟಗಳನ್ನು ಓದಿದರೆ ಈಗಿನ ಪತ್ರಕರ್ತರಿಗೆ ಎಲ್ಲಾ ವಿಷಯಗಳ ಪರಿಚಯವಾಗುತ್ತದೆ. ಪತ್ರಕರ್ತ ಯಾವಾಗಲೂ ವಿರೋಧಪಕ್ಷವಾಗಿ ಕೆಲಸ ಮಾಡುವವರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದ ವ್ಯಕ್ತಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನದಂದು ನನಗೆ ಪ್ರಶಸ್ತಿ ನೀಡುತ್ತಿದ್ದಾರೆ. ನನ್ನ 40 ವರ್ಷಗಳ ಪತ್ರಿಕೋದ್ಯಮದ ಅನುಭವದಲ್ಲಿ ಪತ್ರಕರ್ತ ಅಧ್ಯಯನಶೀಲರಾದಾಗ ಮಾತ್ರ ಅವನು ಹೊಸತನವನ್ನು ಹುಟ್ಟುಹಾಕಲು ಸಾಧ್ಯ ಮತ್ತು ಜನರ ವಿಶ್ವಾಸವನ್ನು ಪಡೆಯಲು ಸಾಧ್ಯ. ಈಗ ವರ್ತಮಾನಕ್ಕಿಂತ ವರಮಾನವೇ ಮುಖ್ಯವಾಗಿದೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದು, ಮಹಾತ್ಮಗಾಂಧಿಯವರ ಹತ್ಯೆಯಾಗಿದ್ದು, ಇರಾನ್ನಂತಹ ಪುಟ್ಟದೇಶ ಆಗಿನ ಕಾಲದಲ್ಲೇ ಭಾರತದ ಕಾಳೀನದಿ ಯೋಜನೆಗೆ ನೆರವು ನೀಡಿದ್ದು ಮುಂತಾದ ಅನೇಕ ವಿಚಾರಗಳ ಅನುಭವವನ್ನು ಅವರು ಈ ಸಂದರ್ಭದಲ್ಲಿ ಹಂಚಿಕೊಂಡರು.
ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯು.ಹೆಚ್. ವೈದ್ಯನಾಥ್, ಪ್ರೆಸ್ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ, ಟ್ರಸ್ಟ್ನ ಸಂಪಾದಕರ ಸಂಘದ ಅಧ್ಯಕ್ಷರಾದ ಎಸ್.ಕೆ.ಗಜೇಂದ್ರಸ್ವಾಮಿ ಪದಾಧಿಕಾರಿಗಳು, ಪ್ರಮುಖರಾದ ಡಿವೈಎಸ್ಪಿ ಗಂಗಾಧರ್, ಡಿಎಸ್ಎಸ್ ಪ್ರಮುಖರಾದ ಹಾಲೇಶಪ್ಪ, ಗುರುಮೂರ್ತಿ, ಕಲ್ಲೂರು ಮೇಘರಾಜ್, ಅನಂತ್ರಾಮ್ ಸಿಂಗ್, ವಾರ್ತಾಧಿಕಾರಿ ಮಾರುತಿ, ಗೋಪಿನಾಥ್, ಕಾಂಗ್ರೆಸ್ ಮುಖಂಡ ರವಿಕುಮಾರ್ ಮತ್ತಿತರರಿದ್ದರು.