ಶ್ರೀ ಡಾ. ಬಾಲಗಂಗಾಧನಾಥ ಮಹಾಸ್ವಾಮೀಜಿ ಕರ್ಮ ಯೋಗಿಯಾಗಿ, ಧರ್ಮೋಪದೇಶಕರಾಗಿ, ಲೋಕದ ಸುಖ-ಶಾಂತಿಗಾಗಿ, ಜನರ ಉದ್ದಾರಕ್ಕಾಗಿ, ಆಹಾರ ನಿದ್ರೆಗಳ, ಹಗಲು ರಾತ್ರಿ ಪರಿವೆಯಿಲ್ಲದೆ ಪರಿಸರಮಿಸಿದವರು ಪೂಜ್ಯರು. ಪುರಾಣ ಪ್ರಸಿದ್ಧ ಪವಿತ್ರ ಶ್ರೀ ಆದಿಚುಂಚನಗಿರಿ ಸುಕ್ಷೇತ್ರವೂ, ನಿಸರ್ಗ ರಮಣೀಯ ಸುಂದರ ತಾಣವಾಗಿದೆ.

ಶಿಥಿಲ ಸ್ಥಿತಿಯಲ್ಲಿದ್ದ ಶ್ರೀಮಠವನ್ನು ಭೂಮಿಯಿಂದ ಬಾನೆತ್ತರಕ್ಕೆ ಬೆಳೆಸಿದ್ದರು. ಅವರು ಒಬ್ಬ ವ್ಯಕ್ತಿಯಾಗಿರಲಿಲ್ಲ ಅದ್ಭುತ ಶಕ್ತಿಯಾಗಿದ್ದರು.ಭೈರವನ ಭಕ್ತರಿಗೆ ಸೀಮಿತವಾಗಿದ್ದ ಶ್ರೀ ಕ್ಷೇತ್ರವನ್ನು ಒಂದು ಮಹಾನ್ ಕ್ಷೇತ್ರವಾಗಿಸಿ, ಧರ್ಮಪೀಠವನ್ನಾಗಿ ರೂಪಿಸಿದರು. ಸಮಾಜ ಸೇವೆಯನ್ನೇ ಭಗವಂತನ ಪೂಜೆ ಎಂದು ನಂಬಿ ಅದರಂತೆ ನಡೆದವರು. ಲೋಕೋದ್ದಾರಕರು, ತ್ರಿವಿಧ ದಾಸೋಹಿಗಳು ಆದ ಶ್ರೀಗಳವರು, ಜನಸಾಮಾನ್ಯರ ಉದ್ಧಾರಕ್ಕಾಗಿ ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಆಕಳು, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಆಂದೋಲನೆವನ್ನೇ ಮಾಡಿದರು. ಪೂಜ್ಯರು ತಮ್ಮ ದಣಿವರಿಯದ ತಮ್ಮ ಅವಿಶ್ರಾಂತ ದುಡಿಮೆಯ ಫಲವಾಗಿ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಪರಿಮಿತ ಸೇವೆಯನ್ನು ಸಲ್ಲಿಸಿದ್ದಾರೆ. ಶತಮಾನದಲ್ಲಿ ಸಾಧಿಸಲಾಗಿದ್ದನ್ನು ದಶಕದಲ್ಲಿ ಸಾಧಿಸಿ ಪವಾಡವನ್ನೇ ಮೆರೆದಿದ್ದಾರೆ. ದೀನರು, ನಿರಾಶ್ರಿತರು, ಅಂಗವಿಕಲರು, ಅನಕ್ಷರಸ್ಥರು, ರೋಗಿಗಳು ಮೊದಲಾದ ನಿರ್ಲಕ್ಷಿತರ ಬಗೆಗೆ ಅಪಾರ ಕಳಕಳಿ ಹೊಂದಿದ್ದ ಶ್ರೀಗಳು, ಭಕ್ತರಿಗೆ ಕುಲಗುರುವಾಗಿದ್ದದ್ದಷ್ಟೇ ಅಲ್ಲ ಅವರೆಲ್ಲರ ಪಾಲಿನ ದೈವವೇ ಆಗಿ, ಅವರೆಲ್ಲರ ನೆಮ್ಮದಿಯ ಬದುಕಿನ ಶಕ್ತಿಯಾಗಿದ್ದರು.

ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಭೈರವೈಕ್ಯ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಗದ್ದುಗೆ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೆ ಸಿದ್ಧವಾಗಿದ್ದು, ಏಪ್ರಿಲ್ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

ಕುಂಭಾಭಿಷೇಕ ಮಹೋತ್ಸವ:
ಏಪ್ರಿಲ್ 10 ರಿಂದ 12 ರವರೆಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯ ಸಾನ್ನಿಧ್ಯದಲ್ಲಿ ಶುಕ್ರವಾರ ಬೆಳಿಗ್ಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಶ್ರೀ ಗುರು ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಮೂಲ ವಿಗ್ರಹ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದ ಸಂದರ್ಭದಲ್ಲಿ ಕುಂಭಾಭಿಷೇಕ ಹಿನ್ನಲೆಯಲ್ಲಿ ಪರಮ ಪೂಜ್ಯರಿಂದ ಮೂರು ದಿನಗಳ ಕಾಲ ಶ್ರೀಗಳ ಸಾನ್ನಿಧ್ಯದಲ್ಲಿಹೋಮ ಹವನಾದಿ, ವಿವಿಧ ಬಗೆಯ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.
ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ನಾಡಿನ ಧರ್ಮ ಗುರುಗಳು,ವಿವಿಧ ಶಾಖಾ ಮಠದ ಶ್ರೀಗಳು, ಸಾಧು ಸಂತರು ಹಾಗೂ ಗಣ್ಯರು ಪಾಲ್ಗೊಡಿದ್ದರು.

ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.

“ಶ್ರೀ ಗುರು ಮಂದಿರದ ಸಂಕಲ್ಪ ಸಾಕಾರಗೊಳಿಸಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ.”..

ಪರಮಪೂಜ್ಯ ಡಾ. ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರು 2013 ಜನವರಿ 13ರಂದು ತಮ್ಮ ಭೌತಿಕ ದೇಹವನ್ನು ತ್ಯಜಿಸಿ ಕಾಲಭೈರವೇಶ್ವರ ಸ್ವಾಮಿಯಲ್ಲಿ ಲೀನವಾದರು.
ಶ್ರೀಕಾಲಭೈರವೇಶ್ವರ ಸ್ವಾಮಿ ದೇವಾಲಯದ ಪಕ್ಕದಲ್ಲಿಯೇ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವನ್ನು ಮಾಡಲಾಗಿತ್ತು. ಅಂದಿನಿಂದ ಆ ಪುಣ್ಯಸ್ಥಳವು ಪರಮಪೂಜ್ಯರ ಸನ್ನಿಧಿಯೆಂದೇ ಶ್ರೀ ಗುರುಗಳ ಮಂದಿರವಾಗಿ ಮಾರ್ಪಾಟಾಗಿತ್ತು.
ಪ್ರತಿದಿನ ನಾಡಿನ ಅಸಂಖ್ಯಾತ ಭಕ್ತರು ಶ್ರೀ ಗುರುಗಳ ಸನ್ನಿದಾನಕ್ಕೆ ಭೇಟಿ ನೀಡಿ,ಭಕ್ತಿಯಿಂದ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಿದ್ದರು. ಪರಮ ಪೂಜ್ಯ ಜಗದ್ಗುರುಗಳ ಆತ್ಮ ಜ್ಯೋತಿ ಬೆಳಗುತ್ತಿರುವ ಶ್ರೀ ಸನ್ನಿಧಿಯಲ್ಲಿ ಭವ್ಯವಾದ ಗುರು ಮಂದಿರವನ್ನು ನಿರ್ಮಿಸಬೇಕೆಂದು ಸಂಕಲ್ಪಿಸಿದ ಪರಮಪೂಜ್ಯ ಜಗದ್ಗುರು ಡಾ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ತಮ್ಮ ಸಂಕಲ್ಪವನ್ನು ಸಾಕಾರಗೊಳಿಸಲು ವಿಳಂಬ ಮಾಡಲಿಲ್ಲ. ದೇವಾಲಯಗಳ ನಿರ್ಮಾಣದಲ್ಲಿ ಅತ್ಯಂತ ಪರಿಣತಿಯನ್ನು ಹೊಂದಿದ ಶಿಲ್ಪಿಗಳೊಂದಿಗೆ ಸಮಾಲೋಚಿಸಿ, ಪರಮ ಪೂಜ್ಯ ಗುರೂಜಿಯವರ ಹಿರಿಮೆಗೆ ತಕ್ಕುದಾದ ಸುಂದರ ಭವ್ಯವಾದ ಶ್ರೀ ಗುರು ಮಂದಿರವನ್ನು ನಿರ್ಮಿಸಲು ಕಾರ್ಯತತ್ಪರರಾದರು. 2016 ಮೇ,9ರ ಶುಭದಿನದಂದು ಸಾವಿರಾರು ಸದ್ಭಕ್ತರ ಸಮ್ಮುಖದಲ್ಲಿ ನಾಡಿನ ಹಲವು ಮಠಾಧೀಶರ ಸಾನ್ನಿಧ್ಯದಲ್ಲಿ ಪರಮ ಪೂಜ್ಯ ಮಹಾಸ್ವಾಮಿಜಿಯವರು ತಮ್ಮ ಅಮೃತ ಹಸ್ತದಿಂದ ಶ್ರೀಗುರು ಮಂದಿರದ ಶಂಕುಸ್ಥಾಪನಾ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದ್ದರು. ಹಲವು ವರ್ಷಗಳಿಂದ 250ಕ್ಕೂ ಹೆಚ್ಚು ನೈಪುಣ್ಯತೆಯನ್ನು ಹೊಂದಿದ ನುರಿತ ಶಿಲ್ಪಿಗಳು ಭವ್ಯವಾದ ಶ್ರೀ ಗುರು ಮಂದಿರದ ನಿರ್ಮಾಣ ಕಾರ್ಯದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡರು.
ಶ್ರೀಗಳ ನಿಧನದ ಸಂದರ್ಭದಲ್ಲಿ ಗದ್ದುಗೆಯಲ್ಲಿ ತಾತ್ಕಾಲಿಕವಾಗಿ ಮಂಟಪ ನಿರ್ಮಿಸಲಾಗಿತ್ತು. ತದನಂತರ ಮೂಲ ಸಮಾಧಿಯ ಗದ್ದುಗೆಯನ್ನು ಯಥಾ ಸ್ಥಿತಿಯಲ್ಲಿರಿಸಿಕೊಂಡು, ಮಂಟಪವನ್ನು ತೆರವುಗೊಳಿಸಿ ಎರಡು ಅಂತಸ್ತುಗಳಲ್ಲಿ ಸಂಪೂರ್ಣವಾಗಿ ಕೆಂಪು ಗ್ರಾನೈಟ್ ಶಿಲೆ ಹಾಗೂ ವಿವಿಧ ಬಗೆಯ ಗ್ರಾನೈಟ್ ಶಿಲೆಗಳಿಂದ ನಿರ್ಮಿಸಲಾಗಿದೆ.
ಮೂಲ ಗದ್ದುಗೆಯನ್ನು ಯಾವುದೇ ಬದಲಾವಣೆ ಇಲ್ಲದೆ ಅದೇ ರೂಪದಲ್ಲಿಯೇ ಉಳಿಸಿಕೊಂಡು ಅದೇ ಸ್ಥಳದಲ್ಲಿಯೇ ಭವ್ಯವಾದ ಮಂಟಪ ನಿರ್ಮಿಸಿರುವುದು ವಿಶೇಷ. ಮಂಟಪದ ನೆಲ ಮಹಡಿಯಲ್ಲಿ ಗುರುಗಳ ಗದ್ದುಗೆ ಇರಲಿದ್ದು, ಗದ್ದುಗೆಯ ಸುತ್ತ ಪ್ರದಕ್ಷಿಣಾ ಸ್ಥಳ ಇದೆ. ನೆಲ ಮಹಡಿಯ ಮೇಲಿನ ಅಂತಸ್ತಿನಲ್ಲಿ ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪುತ್ಥಳಿ ಇರುವ ಭವ್ಯ ಮಂಟಪವಿದೆ.

ಬಿಜಿಎಸ್ ಸ್ಟೇಡಿಯಂನಲ್ಲಿ ವೇದಿಕೆ :
ನೂತನವಾಗಿ ನಿರ್ಮಿಸಲಾಗಿರುವ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಗದ್ದುಗೆಯ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ 15 ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ. ಮಂಟಪದ ಉದ್ಘಾಟನೆ ನಂತರ ಬಿಜಿಎಸ್ ಸ್ಟೇಡಿಯಂನಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂದು ರಾಜ್ಯ ಮತ್ತು ರಾಷ್ಟ್ರದ ಗಣ್ಯಾತಿ ಗಣ್ಯರು, ನಾಡಿನ ವಿವಿಧ ಮಠಾಧೀಶರು ಆಗಮಿಸಲಿದ್ದಾರೆ.