ಶಿವಮೊಗ್ಗ,ಜ.02:
ಕಳೆದ 2 ವರ್ಷಗಳಲ್ಲಿ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದು ವಿಶೇಷ. ಈ ಜಾಗ ಪ್ರೇರಣೆ ನೀಡುವ ಜಾಗದ ಜೊತೆಗೆ ಕೆಲಸ ಕಲಿಕೆಯ ಪಾಠಶಾಲೆಯಾಗಿದೆ. ಇದು ತಮ್ಮ ಅದೃಷ್ಟ ಎಂದು ಇಲ್ಲಿಂದ ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಇಂದಿಲ್ಲಿ ತಿಳಿಸಿದರು.
ಅವರು ಮಾಧ್ಯಮದವರ ಜೊತೆ ಸ್ನೇಹಕೂಟದಲ್ಲಿ ಭಾಗಿಯಾಗಿ, ಅರಣ್ಯ ಸಂಬಂಧಿ ಸಮಸ್ಯೆಗಳು, ಕಂದಾಯ ದಾಖಲೆ ಸಮಸ್ಯೆ, ಭೂಸ್ವಾಧೀನ ಪ್ರಕ್ರಿಯೆ, ಶರಾವತಿ ಸಂತ್ರಸ್ಥರ ಸಮಸ್ಯೆಗಳು ಮೊದಲಾದ ಅತ್ಯಂತ ಸವಾಲಿನ ಕೆಲಸವುಳ್ಳ ಜಿಲ್ಲೆ ಶಿವಮೊಗ್ಗ ಆಗಿದ್ದು, ಇಲ್ಲಿ ಕೆಲಸ ನಿರ್ವಹಿಸಿ ಇಲ್ಲಿನ ಸಾರ್ವಜನಿಕರು, ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಹೆಚ್ಚಿನ ಅಂಶಗಳನ್ನು ತಾವು ಕಲಿತಿದ್ದಾಗಿ ತಿಳಿಸಿದ ಅವರು, ಬಿ.ಹೆಚ್.ರಸ್ತೆಯ ಹೆದ್ದಾರಿಗೆ ಸಂಬಂಧಿಸಿದಂತೆ 30 ಜಾಗಗಳಲ್ಲಿ ಭೂಮಿ ಸ್ವಾಧೀನ ಸಮಸ್ಯೆ ಬಗೆಹರಿಸಿದ ಸಮಾಧಾನ ತಮಗಿದೆ. ಶರಾವತಿ ಸಂತ್ರಸ್ಥರ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೇಳಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಲಾಗಿದೆ. ಇನ್ನು 8-10 ದಿನಗಳಲ್ಲಿ ಆ ಸಮಸ್ಯೆಗೆ ಒಂದು ಪರಿಹಾರ ಒದಗುವ ವಿಶ್ವಾಸವಿದೆ. ಹೊಸ ಜಿಲ್ಲಾಧಿಕಾರಿಗಳು ಅದರತ್ತ ಗಮನಹರಿಸುವರು ಎಂದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆಯಲ್ಲಿ ಹೇರಳ ಅವಕಾಶವಿದೆ. ಪರಿಸರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ 60ಕ್ಕೂ ಹೆಚ್ಚಿನ ಪ್ರವಾಸಿ ಸ್ಥಳದಲ್ಲಿ ಪ್ರವಾಸಿಗರ ಆಕರ್ಷಣೆಗೆ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ. ವಿಶ್ವಪ್ರಸಿದ್ಧ ಜೋಗ ಜಲಪಾತದ ಅಭಿವೃದ್ಧಿಗೆ ಇದ್ದ ಅಡೆ-ತಡೆ ನಿವಾರಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ಕುಮಾರ್ ಜಿ.ಕೆ.ಯೊಡನೆ ತಾವು ಉತ್ತಮ ಸಂಬಂಧ ಹೊಂದಿದ್ದು, ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಒಳ್ಳೆಯ ರೀತಿಯಲ್ಲಿ ಇರುವಂತೆ ನೋಡಿಕೊಂಡಿದ್ದೇನೆ ಎಂದ ಅವರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಅವರ ಸಹಕಾರದೊಂದಿಗೆ ಮಿಷನ್ ಸುರಕ್ಷಾ ಯೋಜನೆಯನ್ನು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಅನುಷ್ಟಾನಗೊಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಯ ಸುಮಾರು 800 ದೇವಾಲಯಗಳಿದ್ದು 300 ದೇವಾಲಯಗಳ ಸರ್ವೇಕಾರ್ಯ ಪೂರ್ಣಗೊಳಿಸಿ, ಉಸ್ತುವಾರಿ ಸಮಿತಿ ರಚಿಸಲಾಗಿದೆ. ಶರಾವತಿ ಸಂತ್ರಸ್ಥರ ಬಗ್ಗೆ 9,136 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಸಮೀಕ್ಷೆ ಮಾಡಲಾಗಿದೆ. ಸುಮಾರು 2000 ಅರ್ಜಿಗಳು ಬಂದಿದ್ದು, ಶರಾವತಿ ಸಂತ್ರಸ್ಥರ ಪಟ್ಟಿಯಿಂದ ಕೈಬಿಡಲಾಗಿದೆ ಎನ್ನಲಾಗಿದ್ದ 800 ಜನ ಸಂತ್ರಸ್ಥರು ಅರ್ಜಿ ಸಲ್ಲಿಸಿದ್ದು, ಅವರ ಅಹವಾಲುಗಳನ್ನು ಕೂಡ ಪಡೆದು ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 36,000 ಎಕರೆ ಹಸಿರು ಅರಣ್ಯ ಇದೆ. ಡೀಮ್ಡ್ ಅರಣ್ಯದ ಕುರಿತು ಸಮೀಕ್ಷೆ ನಡೆಸಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಮಂಗನ ಕಾಯಿಲೆ ತೀವ್ರಗೊಳ್ಳುತ್ತಿದ್ದು, ತಾವು ಆರೋಗ್ಯ ಇಲಾಖೆಯ ಆಯುಕ್ತರಾಗಿ ಸೇವೆಗೆ ಸೇರಿಕೊಳ್ಳುತ್ತಿದ್ದು, ಮಂಗನ ಕಾಯಿಲೆ ಪರಿಹಾರಕ್ಕಾಗಿ ಲಸಿಕೆಯ ಬಗ್ಗೆ ಹೆಚ್ಚಿನ ಗಮನ ನೀಡುತ್ತೇನೆ. ಈ ಕುರಿತು ಮಧ್ಯದಲ್ಲಿ ಶಿವಮೊಗ್ಗಕ್ಕೂ ಭೇಟಿನೀಡಿ, ಪರಿಣಿತರೊಂದಿಗೆ ಸಮಾಲೋಚಿಸಿ ಕೆಎಫ್ಡಿ ಭೀಕರತೆಯನ್ನು ಶಮನಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಸಂತೋಷ್ ಕಾಚಿನಕಟ್ಟೆ, ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಇದ್ದರು.

ಶಿವಮೊಗ್ಗದ ಪತ್ರಕರ್ತರಿಗೆ ಥ್ಯಾಂಕ್
ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದಷ್ಟು ದಿವಸ ಇಲ್ಲಿನ ಪತ್ರಕರ್ತರು ತಮಗೆ ಉತ್ತಮ ಸಹಕಾರ ನೀಡಿದ್ದಾರೆ. ಸಾಮಾನ್ಯವಾಗಿ 2-3 ವರ್ಷ ಕೆಲಸ ನಿರ್ವಹಿಸಿದ ಅವಧಿಯಲ್ಲಿ ಅಧಿಕಾರಿಯ ವಿರುದ್ಧ ಒಂದೆರೆಡಾದರೂ ವೈಯಕ್ತಿಕ ನೆಗೆಟಿವ್ ಸುದ್ದಿಗಳು ಬರುವುದು ಸಹಜ. ಆದರೆ ನನ್ನ ಬಗ್ಗೆ ಒಂದೂ ಕೂಡ ನೆಗೆಟಿವ್ ವರದಿ ಪ್ರಕಟವಾಗದೇ ಇರುವುದು ನಾನು ಮಾಡಿದ ಉತ್ತಮ ಕೆಲಸಕ್ಕೋ ಅಥವಾ ಇಲ್ಲಿ ಒಳ್ಳೆಯ ಪತ್ರಕರ್ತರು ಇರುವುದಕ್ಕೋ ಗೊತ್ತಿಲ್ಲ. ಒಟ್ಟಿನಲ್ಲಿ ಎಲ್ಲಾ ಪತ್ರಕರ್ತರು ನನಗೆ ಒಳ್ಳೆಯ ಸಹಕಾರ ನೀಡಿದ್ದಾರೆ. ಇಲ್ಲಿಯ ಪತ್ರಕರ್ತರು, ಪತ್ರಿಕಾಭವನ, ಪ್ರೆಸ್ ಟ್ರಸ್ಟ್ ರಾಜ್ಯಕ್ಕೆ ಮಾದರಿಯಾಗಿದೆ.