ಶಿವಮೊಗ್ಗ: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಮಾಡುವ ಸೇವೆ ಅತ್ಯಂತ ಶ್ರೇಷ್ಠವಾದದ್ದು. ಇಂತಹ ಸೇವೆಯಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಶಿಕಾರಿಪುರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿಯ ಶಿಶುವಿಹಾರ ರಸ್ತೆಯಲ್ಲಿರುವ ದಾವಣಗೆರೆ ಹೋಲ್ ಸೇಲ್ ಹ್ಯಾಂಡ್ ಲೂಮ್ಸ್ಗೆ ಇತ್ತೀಚೆಗೆ ಕುಟುಂಬ ಸಮೇತ ಭೇಟಿ ನೀಡಿ ಆತಿಥ್ಯ ಸ್ವೀಕರಿಸಿ ಅವರು ಮಾತನಾಡಿದರು.

ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಗಿಡ-ಮರಗಳ ಆರೈಕೆಯೊಂದಿಗೆ ನಮ್ಮೊಳಗಿನ ಆತ್ಮಾವಲೋಕನ, ರಾಷ್ಟ್ರಭಕ್ತಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ಜಾಗೃತಿಯೊಂದಿಗೆ ಪರೋಪಕಾರಂ ಕಾರ್ಯನಿರ್ವಹಿಸುತ್ತಿರುವುದನ್ನು ಶ್ಲಾಘಿಸಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ ಸ್ಮಶಾನ, ಬಸ್ ನಿಲ್ದಾಣಗಳ ಸುತ್ತಮುತ್ತ, ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ಆವರಣ, ಶಾಲೆ- ಕಾಲೇಜುಗಳ ಹೊರಭಾಗ, ದೇವಸ್ಥಾನ, ಮಸೀದಿ, ಚರ್ಚ್ ಸುತ್ತಲಿನ ಸಾರ್ವಜನಿಕ ಜಾಗ, ಉದ್ಯಾನವನಗಳು, ಕೆರೆ- ನದಿ ತೀರಗಳು, ರಸ್ತೆ ಬದಿಯ ನಿರ್ಲಕ್ಷಿತ ಸ್ಥಳಗಳು, ಪ್ಲಾಸ್ಟಿಕ್ ಕಸದ ಸಮಸ್ಯೆ ಇರುವ ಪ್ರದೇಶಗಳು ಮತ್ತಿತರೆಡೆ ಪರೋಪಕಾರಂ ತಂಡವು ಸ್ವಚ್ಛತೆ ನಡೆಸುತ್ತಿದೆ ಎಂದರಲ್ಲದೆ ಹುಚ್ಚರಾಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ತಾವೂ ಸಹ ಭಾಗಿಯಾಗಿದ್ದನ್ನು ನೆನಪಿಸಿದರು.
ತೇಜಸ್ವಿನಿ ರಾಘವೇಂದ್ರ, ಬಿ.ವೈ. ಅರುಣದೇವಿ, ಬಿ.ಆರ್. ಸುಭಾಷ್, ದಾವಣಗೆರೆ ಹೋಲ್ ಸೇಲ್ ಹ್ಯಾಂಡ್ ಲೂಮ್ಸ್ನ ಮಾಲೀಕ, ಪರೋಪಕಾರಂನ ಕಟ್ಟಾಳು ಕೆ.ಎಚ್. ಲಕ್ಷ್ಮಣ್, ಕೆ.ಎಲ್. ರೂಪ, ಕೆ.ಎಚ್. ಸುಧಾ ಬಾಯಿ, ಎಚ್.ಎಲ್. ಖುಷಿ ಎಚ್.ಎಲ್. ಪ್ರೇಮ್, ಪರೋಪಕಾರಂನ ಮಧುಕೇಶ್ವರ್ ಶಿವಾನಂದ್ ಮತ್ತಿತರರು ಉಪಸ್ಥಿತರಿದ್ದರು.