







ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 68
- ಗಜೇಂದ್ರಸ್ವಾಮಿ ಎಸ್.ಕೆ., ಶಿವಮೊಗ್ಗ
(ಅರಹತೊಳಲು, ಭದ್ರಾವತಿ)
ಇಂದಿನ ಬದುಕು ಅತ್ಯಂತ ವಿಭಿನ್ನ ಹಾಗೂ ಅಪಾಯಕಾರಿಯಾಗಿ ಮುಂದುವರಿಯುತ್ತಿರುವುದು ನಿಜಕ್ಕೂ ದುರಂತದ ಸಂಗತಿ. ಅಂದುಕೊಂಡದ್ದಕ್ಕಿಂತ ವಿಚಿತ್ರವಾಗಿ ಬದುಕು ಕಟ್ಟಿಕೊಳ್ಳುವ ಹಾಗೂ ಹೇಗಾದರೂ ಹಣ ಆಸ್ತಿ ಸಂಪಾದಿಸಬೇಕೆಂಬ ಕಟಿಬದ್ಧತೆಗೆ ಬಿದ್ದ ಒಂದು ಬಗೆಯ ಮನಸ್ಸು ಒಂದು ಕಡೆ ಕೆಲಸ ಮಾಡುತ್ತಿದ್ದರೆ, ಮತ್ತೊಂದು ಇಷ್ಟು ಕಡೆ ಬಾಲ್ಯದ ನೆನಪುಗಳೊಂದಿಗೆ ಯೌವ್ವನದ ಹೊಂಗನಸು ಕಟ್ಟಿಕೊಂಡು ಮುಂದಿನ ಭವಿಷ್ಯದ ಚಿಂತನೆ ಇಲ್ಲದೆ ದಿನದೊಡುತ್ತಿರುವ ವಿಚಿತ್ರ ಸನ್ನಿವೇಶಗಳು ನಮ್ಮ ಮುಂದೆ ಕಾಣುತ್ತಿವೆ ಅಲ್ಲವೇ?
ಯಾವುದೇ ಆಗಲಿ ಅದು ಅತಿ ಆಗಬಾರದು. ಏನೋ ಆಗದೆ ಇರಲೂ ಬಾರದು ಎಂಬುದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.

ಬಾಲ್ಯಾವಸ್ಥೆಯನ್ನು ಪೂರೈಸಿದ ನಂತರ ಬರುವ ಯೌವ್ವನ ನಿಜಕ್ಕೂ ಒಂದು ಬಗೆಯಲ್ಲಿ ಮುಂದಿನ ಬದುಕನ್ನು ರೂಪಿಸುವ ಹಾಗೂ ಕಟ್ಟಿಕೊಡುವ ಅಮೂಲ್ಯ ಗಳಿಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಮಾತಾಪಿತೃಗಳು ಹಾಗೂ ಪೋಷಕರ ಕಡ್ಡಿಬದ್ಧ ನಿಲುವುಗಳು ಹಾಗೂ ಕಠಿಣ ಸವಾಲುಗಳು, ಯೌವ್ವನದ ಬದುಕಿನಲ್ಲಿ ಆ ಮನಸ್ಸುಗಳಿಗೆ ಅಡ್ಡಿಯನಿಸುವುದು ಸರಿ. ಆದರೆ ಆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ, ಮನೋಸ್ಥಿತಿಯಲ್ಲಿ ಆ ಯೌವ್ವನಾವಸ್ಥೆಯ ಮನಗಳಲ್ಲಿ ಬೆಳೆಯಬೇಕಾಗಿರುವುದು ಅತ್ಯಂತ ಪ್ರಮುಖ.

ಏಕೆಂದರೆ ಕಷ್ಟಪಟ್ಟು ಸಾಕಿ ಸಲಹಿದ ಮಕ್ಕಳ ಮುಂದಿನ ಭವಿಷ್ಯ ಹೀಗಿರಬೇಕೆಂದು ಯೋಚಿಸುವ ತಂದೆ ತಾಯಿಯರ ಕನಸುಗಳ ಹಿಂದೆ ಮಕ್ಕಳ ಹಿತಬಿಟ್ಟರೆ ಬೇರೇನು ಇರುವುದಿಲ್ಲ ಎನ್ನುವುದು ಸರಿಯಷ್ಟೇ. ಹಾಗೆಂದ ಮಾತ್ರಕ್ಕೆ ಅದೇ ಹಿತವಚನ ದೊಡ್ಡ ಪರಿಪಾಠವಾಗಬಾರದು. ಹೇಳಿದ್ದನ್ನೇ ಹೇಳುವುದನ್ನು ಹಿರಿಯರು ಮಾಡುವುದು ಆ ಯೌವ್ವನದ ಮನಸ್ಸುಗಳಲ್ಲಿ ಅತಿಯಾಗಿ, ಆಕ್ರೋಶಕ್ಕೆ ಕಾರಣವಾಗಬಹುದು.

ಹೀಗೆ ಮಾಡಬೇಡ ಎಂದಾಕ್ಷಣ ಅದನ್ನೇ ಮಾಡುತ್ತೇನೆ? ಏನು ಮಾಡುತ್ತೀಯಾ ಎಂದು ಆ ಮನಸ್ಸು ತಿರುಗಿ ಬೀಳಬಹುದು. ಯಾವುದನ್ನು ಅತಿಯಾಗಿ ಹೇಳುವುದು ಹಾಗೂ ಪದೇಪದೇ ಗಂಭೀರ ಚಿತ್ತಗಳಲ್ಲಿ ಕಾಯುವುದು. ಆ ಯೌವ್ವನದ ಮನಸ್ಸಿನಲ್ಲಿ ಅದನ್ನೇ ಅತಿಯಾಗಿ ತಲೆಗೆ ತುಂಬಿಕೊಳ್ಳುತ್ತಾರಲ್ಲವೇ? ಅದಕ್ಕೆ ಹೇಳುವುದು ಯಾವಾಗ ಎಷ್ಟು ಹೇಳಬೇಕೋ ಅಷ್ಟು ಮಾತ್ರ ಉಪದೇಶ ಮಾಡುವುದು ಒಳ್ಳೆಯದು ಎನಿಸುತ್ತದೆ.
ಬಹುತೇಕ ತಂದೆ ತಾಯಿಗಳಲ್ಲಿ ತಾಯಿಯರು ಅನುಮಾನದ ಕಂಗಳಲ್ಲಿ ಮಕ್ಕಳನ್ನು ನೋಡುತ್ತಾರೆ ಎಂಬುದು ವಿಶೇಷ. ಏಕೆಂದರೆ ಆ ಮಕ್ಕಳ ಬದಲಾವಣೆ ವಯೋಜಹಜ ಯೌವ್ವನದ ದಿನಗಳು, ಅವರ ಚಲನವಲನ, ಹೊಸ ಹೊಸ ಆಲೋಚನೆಗಳು ತಾಯಿಯರಿಗೆ ಅತಿ ಬೇಗ ತಿಳಿಯುತ್ತದೆ ಎಂಬುದೇನೋ ಸತ್ಯ.

ಆದರೆ ಅಂತಹ ವಿಷಯಗಳಲ್ಲಿ ಒಂದೆರಡು ಬಾರಿ ಸಲಹೆ ಸೂಚನೆ ಹಿತವಚನ ನೀಡುವುದು ಒಳ್ಳೆಯದು. ಪದೇ ಪದೇ ಹೇಳುತ್ತಾ ಹೋದರೆ ಅದೇ ಆ ಮಕ್ಕಳನ್ನು ರೊಚ್ಚಿಗೆ ಇಳಿಸಬಹುದು. ಸಿಡಿದೆಳುವಂತೆ ಮಾಡಬಹುದು. ಬೇಡ ಎಂದದ್ದನ್ನು ಮಾಡಲು ಪ್ರಚೋದಿಸಬಹುದು. ಸತ್ತರೂ ಅದನ್ನು ಮರೆಯುವುದಿಲ್ಲ ಎಂಬ ಮನೋಭಾವನೆಯನ್ನು ಬೆಳೆಸಬಹುದು. ಇಂತಹ ವಿಷಯಗಳತ್ತ ಹಿರಿಯರು ಗಮನಹರಿಸಿ ಸೂಕ್ತ ಬಗೆಯಲ್ಲಿ ಸಲಹೆ ಸೂಚನೆ ನೀಡುವುದು ಒಳ್ಳೆಯದು ಎಂಬುದು ಪಬ್ಲಿಕ್ ಒಪಿನಿಯನ್.
ಅಂತೆಯೇ ಈ ವಿವಾಹ ನಂತರದ ಬದುಕು, ಕುಟುಂಬದ ಸಮಸ್ಯೆಗಳು ಬಹಳಷ್ಟು ಬದಲಾವಣೆಗಳನ್ನು ಕಾಣುತ್ತಿವೆ. ಪ್ರೇಮ ವಿವಾಹವಾಗುವ ಅದೆಷ್ಟೋ ಜೋಡಿಗಳಲ್ಲಿ ಶೇಕಡ 90ರಷ್ಟು ಪ್ರೇಮಾ ವಿವಾಹಗಳು ಒಂದೆರಡು ಮೂರು ವರ್ಷಗಳಲ್ಲಿ ಅಂತ್ಯ ಹಾಡಿರುವುದನ್ನು ನಾವು ಗಂಭೀರವಾಗಿ ಗಮನಿಸುವುದನ್ನ ಯುವ ಮನಸುಗಳು ಅದನ್ನು ಅರ್ಥಮಾಡಿಕೊಳ್ಳಬೇಕಿರುವುದು ಅತ್ಯಗತ್ಯ.
ಬದುಕು ಕೇವಲ ಇಬ್ಬರ ನಡುವೆ ಕಟ್ಟಿಕೊಳ್ಳುವುದಲ್ಲ, ತಂದೆ ತಾಯಿ ಮಕ್ಕಳು ಅವರ ಪತಿ ಅಥವಾ ಪತ್ನಿ, ಅವರ ಮಕ್ಕಳು, ಇದ್ದರೆ ಹಿರಿಯ ಅಜ್ಜ ಅಜ್ಜಿ, ಅತ್ತೆ, ಮಾವ, ಅತ್ತಿಗೆ, ಸೊಸೆ, ಚಿಕ್ಕಪ್ಪ, ಚಿಕ್ಕಮ್ಮ ಹೀಗೆ ಸಂಬಂಧಿಕರ ಪಟ್ಟಿಯ ನಡುವೆ ನಾವು ಬದುಕು ಕಟ್ಟಿಕೊಳ್ಳುವ ಅಗತ್ಯವನ್ನು ಅರ್ಥಮಾಡಿಕೊಳ್ಳಬೇಕಾದ ಸಂಗತಿ.