ಶಿವಮೊಗ್ಗ : ರಾಜ್ಯದ ಆಡಳಿತ ಕುರ್ಚಿಯ ಕಿತ್ತಾಟದಿಂದಾಗಿ ಸಂಪೂರ್ಣ ಕುಸಿದಿದ್ದು ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಭಿವೃದ್ಧಿ ಶೂನ್ಯ ಸರ್ಕಾರವಾಗಿದ್ದು, ಸರ್ಕಾರ ಬದುಕಿದೆಯೋ, ಸತ್ತಿದೆಯೋ ಎನ್ನುವ ಪರಿಸ್ಥಿತಿಗೆ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಾನು ಮುಖ್ಯಮಂತ್ರಿಗಳಿಗೆ ಮೊದಲೇ ಕಿವಿಮಾತು ಹೇಳಿದ್ದೆ. ರಾಜ್ಯದ ಹಿತದೃಷ್ಟಿಯಿಂದ ಪಕ್ಷಬೇಧ ಮರೆತು ಸಮಗ್ರವಾಗಿ ಚರ್ಚೆ ಮಾಡುವುದಾದರೆ ಮಾತ್ರ ಈ ಅಧಿವೇಶನ ಕರೆಯಿರಿ ಎಂದಿದ್ದೆ. ನಾಯಕತ್ವಕ್ಕಾಗಿ ಪೈಪೋಟಿ ಮಾಡುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ನಿಮ್ಮ ನಾಯಕತ್ವ ಸಮಸ್ಯೆ ಬಗೆಹರಿಯುವತನಿಕ ಅಧಿವೇಶನ ಮುಂದೂಡಿ ಎಂದು ಮುಖ್ಯಮಂತ್ರಿಗಳಿಗೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.

ಅಧಿವೇಶನ ಪ್ರಾರಂಭವಾಗಿ ಒಂದುವಾರ ಆದರೂ ಕೂಡ ವಿರೋಧಪಕ್ಷದ ನಾಯಕರು ಮತ್ತು ಸದಸ್ಯರ ಸಮಸ್ಯೆಗಳಿಗೆ ಸ್ಪಂಧನೆ ಮಾಡುವ ವ್ಯವದಾನವೇ ಇಲ್ಲದೇ ಇರುವುದು ಈ ಸರ್ಕಾರದ ದುರ್ಧೈವವಾಗಿದೆ. ಸಿಎಂ-ಡಿಸಿಎಂ ಕಳೆದೆರೆಡು ವರ್ಷಗಳಿಂದ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದವರು ಈಗ ಒಬ್ಬರ ಮೇಲೊಬ್ಬರು ಕತ್ತಿ ಮಸಿಯುತ್ತಿದ್ದು ಪರಿಣಾಮ ರೈತರ, ಕೂಲಿ ಕಾರ್ಮಿಕರ, ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದೆ. 54 ಲಕ್ಷಟನ್ ಮೆಕ್ಕೆಜೋಳ ಬೆಳೆದ ರೈತ ಖರೀದಿ ಕೇಂದ್ರ ಇಲ್ಲದೆ ದಲ್ಲಾಳಿಗಳ ಮೊರೆಹೋಗಿ 1400 ರೂ.ಗಳಿಗೆ ಕಣ್ಣೀರು ಹಾಕುತ್ತಾ ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರ ಎಂಎಸ್ಪಿ 2400 ರೂ.ಗಳನ್ನು ಮೆಕ್ಕೆಜೋಳಕ್ಕೆ ನಿಗಧಿಮಾಡಿ 2 ತಿಂಗಳಾಗುತ್ತಾ ಬಂದಿದೆ. ಕಾಂಗ್ರೆಸ್ ಶಾಸಕರೇ ಈ ಗಂಭೀರ ಸಮಸ್ಯೆ ಬಗ್ಗೆ ನಮ್ಮೊಂದಿಗೆ ಧ್ವನಿಗೂಡಿಸಿದ್ದಾರೆ. ಆದರೂ ಯಾವ ಸಚಿವರು ಉತ್ತರ ಕರ್ನಾಟಕ ಭಾಗಕ್ಕೆ ಅತೀವೃಷ್ಟಿಯ ಹಾನಿ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಸ್ಥಳಕ್ಕೆ ಭೇಟಿನೀಡಿ, ಪರಿಹಾರ ನೀಡಿಲ್ಲ ಎಂದರು.

ಒಂದೆಡೆ ಕಾಂಗ್ರೆಸ್ನ ಹೈಕಮಾಂಡ್ ಸಿದ್ಧರಾಮಯ್ಯನವರೇ ಇರಬಹುದೇ ಎಂಬ ಸಂದೇಹ ಬರುತ್ತಿದೆ. ಯತೀಂದ್ರ ಹೈಕಮಾಂಡ್ ಎಂದು ಕಾಂಗ್ರೆಸ್ ಪಕ್ಷದವರೇ ಕೆಲವರು ಕಾಲೆಳೆಯುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2ವರೆ ವರ್ಷ ಆಗಿದೆ. ಪ್ರಣಾಳಿಕೆಯಲ್ಲಿ ನೀರಾವರಿಗೆ ಪ್ರತಿ ವರ್ಷಕ್ಕೆ 35 ಲಕ್ಷ ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆ ಹಣ ಇನ್ನೂ ಬಂದಿಲ್ಲ. ಆದರೆ ಕೇಂದ್ರ ಸರ್ಕಾರದ ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ರೂ. ನೀಡಿಲ್ಲವೆಂದು ಬೆಟ್ಟು ತೋರಿಸುತ್ತಾರೆ. ನುಡಿದಂತೆ ನಡೆಯದ ಕೊಟ್ಟ ಭರವಸೆಯನ್ನು ಈಡೇರಿಸದ ರಾಜ್ಯದ ಅಭಿವೃದ್ಧಿಗೆ ಕೇಂದ್ರ ನೀಡುವ ಅನುದಾನಕ್ಕೆ ತನ್ನ ಪಾಲನ್ನು ನೀಡದ ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಯಾವುದೇ ಸಹಕಾರ ನೀಡದ ಈ ಸರ್ಕಾರ ಎಲ್ಲದ್ದಕ್ಕೂ ಕೇಂದ್ರವೇ ಕಾರಣವೆಂದು ಆರೋಪ ಮಾಡುತ್ತಿದೆ. ಕೇಂದ್ರದ ಜನೌಷಧಿ ಯೋಜನೆಗೆ ಕಲ್ಲುಹಾಕಿ ಹೈಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿದೆ. ಯಡಿಯೂರಪ್ಪನವರು ಕೃಷಿಸಮ್ಮಾನ್ಗೆ ನೀಡುತ್ತಿದ್ದ 4000 ರೂ.ಗಳನ್ನು ಮತ್ತು ಭಾಗ್ಯಲಕ್ಷ್ಮೀ ಯೋಜನೆಗೂ ಕಲ್ಲುಹಾಕಿದ್ದು ಕೃಷಿಕರ ಮಕ್ಕಳಿಗೆ ನೀಡುವ ವಿದ್ಯಾನಿಧಿ ಯೋಜನೆಯನ್ನು ನಿಲ್ಲಿಸಿದೆ ಎಂದರು.
ಇದೀಗ ದ್ವೇಷ ಭಾಷಣದ ಶಾಸನ ತಂದು ವಿರೋಧ ಪಕ್ಷದವರನ್ನು ಕಟ್ಟಿಹಾಕುವ ಷಡ್ಯಂತ್ರಕ್ಕೆ ಕೈಹಾಕಿದೆ. ತುರ್ತು ಪರಿಸ್ಥಿತಿ ತಂದಾಗಲೇ ಕಾಂಗ್ರೆಸ್ನಿಂದ ಏನೂ ಮಾಡಲಾಗಲಿಲ್ಲ. ಈಗ ವಿರೋಧ ಪಕ್ಷವನ್ನು ಹಣಿಯುವ ಕೆಲಸಕ್ಕೆ ಹೊರಟಿದೆ ಎಂದರು.
ಕಾಂಗ್ರೆಸ್ನ ಹಿರಿಯ ಶಾಸಕರೊಬ್ಬರು ಸಿಎಂ ಸ್ಥಾನದ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿ ಈ ಸಿದ್ಧರಾಮಯ್ಯ ಅವರಾಗಿ ಇಳಿಯುವುದಿಲ್ಲ ಈಗ ದೇವರಾಜ್ ಅರಸ್ ಅವರ ಮುಖ್ಯಮಂತ್ರಿ ರೆಕಾರ್ಡ್ನ್ನು ಮುಗಿಸಿ ಇಳಿಯುತ್ತೇನೆ ಎಂದು ಸಬೂಬು ಹೇಳುತ್ತಾರೆ. ನಂತರ ದೀಪಾವಳಿ ಮುಗಿದ ಮೇಲೆ ಎನ್ನುತ್ತಾರೆ. ನಾವಂತೂ ಅವರನ್ನು ಇಳಿಸಿಯೇ ಬಿಡುತ್ತೇವೆ ಎಂದು ಉತ್ತರ ನೀಡಿದ್ದಾರೆ. ವೋಟ್ಚೋರಿ ಕಪಟ ನಾಟಕದಿಂದ ಅವರೇ ನಗೆಪಾಟಲಿಗೆ ಈಡಾಗಿದ್ದು ಬಿಹಾರದ ಜನ ತಕ್ಕಪಾಠ ಕಲಿಸಿದ್ದಾರೆ ಎಂದರು.
ಯತ್ನಾಳ್ ನನ್ನ ವಿರುದ್ಧ ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಅವರಿಗೆ ನನ್ನ ಬಗ್ಗೆ ಮಾತನಾಡದಿದ್ದರೆ ಊಟ ಸೇರಲ್ಲ, ನನ್ನ ತಾಳ್ಮೆಗೂ ಒಂದು ಮಿತಿ ಇದೆ. ಅವರ ಮೇಲೆ ಒಂದು ರೂ. ಅಥವಾ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಲು ಚಿಂತನೆ ಮಾಡಿದ್ದೇನೆ ಎಂದರು.
ರಾಜ್ಯದಲ್ಲಿ ನೂರಾರು ಕೋಟಿ ಡ್ರಗ್ಸ್ಗಳು ಪದೇ ಪದೇ ಪೊಲೀಸರು ಸೀಜ್ ಮಾಡುತ್ತಿದ್ದು, ಸರ್ಕಾರ ಈ ಡ್ರಗ್ಸ್ ದುಷ್ಟಜಾಲದ ಬುಡಕ್ಕೆ ಹೋಗಿ ಇದರ ಹಿಂದೆ ಇರುವ ಪ್ರಭಾವಿ ಶಕ್ತಿಗಳನ್ನು ಮಟ್ಟಹಾಕುವ ಕೆಲಸ ಮಾಡಬೇಕಾಗಿದೆ. ರಾಜ್ಯದಿಂದ ಕೇಂದ್ರದ ಯೋಜನೆಗಳಿಗೆ ಮ್ಯಾಚಿಂಗ್ ಗ್ರ್ಯಾಂಟ್ ಕೊಡದೆ ಹಲವಾರು ಯೋಜನೆಗಳು ಅರ್ಧಕ್ಕೆ ನಿಂತಿದೆ. ಭೂಸ್ವಾಧೀನ ಪ್ರಕ್ರಿಯೆಗಳು ನಿಂತ್ತಿದ್ದು, ಸಾರ್ವಜನಿಕ ಪ್ರಮುಖ ಯೋಜನೆಗಳಿಗೆ ಅಡ್ಡಿಯಾಗಿದೆ ಇದಕ್ಕೆ ಕಾರಣ ಸರ್ಕಾರದ ಬಳಿ ಹಣವಿಲ್ಲ ಎಲ್ಲಾ ಹಣವನ್ನು ಗ್ಯಾರೆಂಟಿ ಯೋಜನೆಗೆ ವಿನಿಯೋಗಿಸುತ್ತಿದ್ದು, ಸರ್ಕಾರಕ್ಕೆ ಆದಾಯದ ಕೊರತೆ ಉಂಟಾಗಿದ್ದು, ಅಭಿವೃದ್ಧಿ ಕುಂಠಿತವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಶಾಸಕ ಎಸ್.ಎನ್. ಚನ್ನಬಸಪ್ಪ, ಡಾ|| ಧನಂಜಯ ಸರ್ಜಿ, ಪ್ರಮುಖರಾದ ಕೆ.ಜಿ. ಕುಮಾರಸ್ವಾಮಿ, ಟಿ.ಡಿ. ಮೇಘರಾಜ್, ಜ್ಞಾನೇಶ್ವರ್, ನಾಗರಾಜ್, ಶಿವರಾಜ್, ಮಾಲತೇಶ್, ಎನ್.ಡಿ. ಸತೀಶ್, ಮಂಜುನಾಥ್, ಕೆ.ವಿ. ಅಣ್ಣಪ್ಪ ಮೊದಲಾದವರಿದ್ದರು.