ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 67
ಗಜೇಂದ್ರಸ್ವಾಮಿ ಎಸ್. ಕೆ., ಶಿವಮೊಗ್ಗ, (ಅರಹತೊಳಲು, ಭದ್ರಾವತಿ)

ಡೈಲಿ ಎಲ್ಲಾ ಟಿವಿಗಳಲ್ಲಿ ಸಾಮಾನ್ಯವಾಗಿ ನಿತ್ಯ ಭವಿಷ್ಯ ಮೂಡಿಬರುತ್ತದೆ. ನಿಜವಾಗಿಯೂ ಇಲ್ಲಿ ಭವಿಷ್ಯದ ಹಾಗೂ ನಮ್ಮ ಜಾತಕದ ಮತ್ತು ನಮ್ಮ ನಂಬಿಕೆಗಳ ವಿರುದ್ಧದ ಚರ್ಚೆ ಅಲ್ಲ, ಆದರೆ ನಮ್ಮೊಳಗಿನ ಕೆಲ ಮೂಢನಂಬಿಕೆಗಳು, ನಮ್ಮೊಳಗಿನ ಕಾಕತಾಳಿಯ ಬದಲಾವಣೆಗಳನ್ನು ನಿಜವೆಂದು ನಂಬಿಸುವ ವಾಡಿಕೆಗಳು ನಮ್ಮ ನಡುವೆ ಗಂಭೀರವಾಗುತ್ತಿರುವುದು ಹೌದಲ್ಲವೇ? ಅದೂ ಸಹ ಈ ಟಿವಿ ಚಾನಲ್ ಗಳಲ್ಲಿ ಮೂಡಿಬರುತ್ತಿರುವ ನಿತ್ಯ ಭವಿಷ್ಯವನ್ನು ಹಚ್ಚಿಕೊಂಡ ಸಾಕಷ್ಟು ನೋಡುಗರ ಮನಸ್ಥಿತ ಅತ್ಯಂತ ವಿಸ್ಮಯ ಎನಿಸುತ್ತದೆ.
- ಯಾವುದೇ ಪರಿಣಾಮ ಬೀರದ ಹೆತ್ತವರ ವರ ಅಥವಾ ಶಾಪ..!
ಬಹಳಷ್ಟು ಕಡೆ ಹೆತ್ತ ಮಕ್ಕಳ ಬಗ್ಗೆ ಅವರ ಭವಿಷ್ಯದ ಬಗ್ಗೆ ನೂರಾರು ಕನಸು ಕಟ್ಟಿಕೊಂಡು ಎಲ್ಕೆಜಿಯಲ್ಲೇ ಡಾಕ್ಟರ್ ಇಲ್ಲವೇ ಡಿಸಿ ಮಾಡುವ ಹಂಬಲದಿಂದ ಮಕ್ಕಳ ಭವಿಷ್ಯದ ಗುರುಗಳಿಂದ ಕೇಳುವುದನ್ನು ನಾವು ನೋಡುತ್ತಿದ್ದೇವೆ. ಹೆತ್ತವರಿಗೆ ಗೊತ್ತಾಗದ ಮಕ್ಕಳ ಭವಿಷ್ಯ ಈ ಟಿವಿಗಳಲ್ಲಿ ಬರುವ ಗುರುಗಳಿಗೆ ಹೇಗೆ ತಾನೆ ಗೊತ್ತಾಗುತ್ತದೆ ಎಂಬುದು ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.

ಈಗಿನ ಕಾಲದ ಆಧುನಿಕತೆಯ ಬದುಕಲ್ಲಿ ನಾವು ಎಲ್ಲಿ ಹೋಗುತ್ತಿದ್ದೇವೆ? ಏನು ಮಾಡುತ್ತಿದ್ದೇವೆ ಎಂಬುದೇ ಅರಿವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಆಸ್ತಿಕ ಅಥವಾ ನಾಸ್ತಿಕ ಎಂಬ ಮನೋಭಾವ ಅಗತ್ಯವಿಲ್ಲ. ಏನೇ ಆಗಲಿ ನಮ್ಮ ನಡುವಿನ ಒಂದು ಶಕ್ತಿಯನ್ನು ನಾವು ದೈವವೆಂದು ನಂಬಿಕೊಂಡು ಪೂಜಿಸುತ್ತೇವೆ, ಗೌರಬಿಸುತ್ತೇವೆ ಹಾಗೆಯೇ ಅದನ್ನು ನಮ್ಮ ಉಸಿರೊಳಗೆ ಮಡಿಗಿಕೊಂಡಿರುತ್ತೇವೆ. ಹಾಗೆಯೇ ಅದೇ ನಮ್ಮ ಎಲ್ಲ ಒಳ್ಳೆಯದು ಮತ್ತು ಕೆಟ್ಟದ್ದರ ಜೊತೆಗಿರುವ ಶಕ್ತಿ ಎಂದುಕೊಳ್ಳುತ್ತೇವೆ. ಈ ಶಕ್ತಿಯನ್ನು ನಂಬುವ ನಾವು ಕೆಲ ಟಿವಿ ಗುರುಗಳನ್ನ ನಂಬುವುದು, ಅವರಿಗೆ ಮಾತ್ರ ಶರಣಾಗುವುದು ನಿಜಕ್ಕೂ ದುರಂತದ ವಿಷಯವಲ್ಲವೇ?

ಮೊನ್ನೆ ಬೆಳಿಗ್ಗೆ ಏಳು ಹತ್ತರ ಹೊತ್ತಿಗೆ ಯಾವುದೋ ನ್ಯೂಸ್ ಚಾನೆಲ್ ನಲ್ಲಿ ವಾರ ಭವಿಷ್ಯ ಬರುತ್ತಿತ್ತಂತೆ, ಅದರಲ್ಲಿ ಅವರ ರಾಶಿಯ ಭವಿಷ್ಯ ಹೇಳಿದ ಗುರೂಜಿ ನಿಮಗೆ ಇಂದು ಬೆಳಗ್ಗೆ ರಸ್ತೆ ಅಪಘಾತದ ಭಯವಿದೆ. ಎಲ್ಲೂ ಹೋಗದಿರಿ, ಹೋದರೂ ಸಹ ಎಚ್ಚರಿಕೆಯಿಂದ ಇರಿ ಎಂದು ಹೇಳಿದರಂತೆ. ನಿತ್ಯ ಆ ಭವಿಷ್ಯದ ಬೆನ್ನಲ್ಲೇ ಇರುತ್ತಿದ್ದ ವ್ಯಕ್ತಿಯೊಬ್ಬರು ಯಾಕೆ ಬೇಕಪ್ಪ ಎಂದು ಎಲ್ಲಿಗೋ ಹೋಗಬೇಕಾದ ಕೆಲಸವನ್ನು ಮುಂದೂಡಿದರಂತೆ. ಏನು ಆಗಲಿಲ್ಲ ಒಳ್ಳೆಯದಾಯಿತು ಎಂದುಕೊಂಡರಂತೆ. ಆದರೆ ದುರಾದೃಷ್ಟವಶಾತ್ ಮನೆಯ ನೆಲವರಿಸಿದ್ದನ್ನು ಗಮನಿಸದೆ ಓಡಾಡುವ ಭರದಲ್ಲಿ ಜಾರಿ ಬಿದ್ದರಂತೆ, ಕನಿಷ್ಠ ಮೂರು ತಿಂಗಳು ಕಾಲ ನಿಮಗೆ ರೆಸ್ಟ್ ಅನಿವಾರ್ಯವಿದೆ ಎಂದು ವೈದ್ಯರು ಹೇಳಿದರಂತೆ. ಇದು ಯಾವ ಅಪಘಾತ, ರಸ್ತೆ ಅಪಘಾತ ಎಂದ ಅವರ ನಂಬಿಕೆಯ ಗುರೂಜಿ ಮನೆಯ ಅಪಘಾತದ ಬಗ್ಗೆ ಏಕೆ ಹೇಳಲಿಲ್ಲ. ರಸ್ತೆ ಅಪಘಾತ ಎಂದದ್ದು ಏಕೆ? ಎನ್ನುವ ಪ್ರಶ್ನೆ ನೂರಾರು ಸರಿ-ತಪ್ಪುಗಳ ಸಂದೇಹದ ಮಾತುಗಳಿಗೆ ಕಾರಣವಾಗುತ್ತದೆ ಅಲ್ಲವೇ?

ಒಂದು ಭವಿಷ್ಯ ಹೇಗಿರಬೇಕು? ನಮ್ಮ ಜಾತಕದ ಫಲ ಹಾಗೂ ನಮ್ಮ ನಮ್ಮ ಮುಂದೆ ಆಗಬಹುದಾದ ಕಾರ್ಯಗಳ ಬಗ್ಗೆ ಅತ್ಯಂತ ಸೂಕ್ಷ್ಮವಾಗಿ ಗೊಂದಲಗಳನ್ನು ಹುಟ್ಟಿಸದಂತೆ ಹೇಳುವಂತ ಅದೆಷ್ಟೊ ಗುರುಗಳನ್ನು ನಾವು ನೋಡಿದ್ದೇವೆ. ಆದರೆ ಅದರ ನಡುವೆ ಈ ಟಿವಿಗಳ ನಿತ್ಯ ಭವಿಷ್ಯದಲ್ಲಿ ಕಾಣಿಸಿಕೊಳ್ಳುವ ಕೆಲ ಗುರುಗಳು ಮಾಡುವ ಅವಾಂತರಗಳು ಅವರು ಹೇಳುವ ವೇದಾಂತದ ಸಾಲುಗಳ ಪ್ರಶ್ನೆಗೆ ಉತ್ತರ ಯಾವುದು?
ಇಲ್ಲಿ ಅವರವರೇ ಮಾಡಿಕೊಂಡ ವ್ಯವಹಾರಗಳು ಎಲ್ಲರನ್ನೂ ಹೇಗೆ ಮಂಕುಬೂದಿ ಎರಚುತ್ತಿವೆ ಎಂಬುದನ್ನು ನಾವು ಅವಲೋಕಿಸುವುದು ಅಗತ್ಯವಲ್ಲವೇ?

ಕೆಲ ಟಿವಿಗಳ ಭವಿಷ್ಯದಲ್ಲಿ ಅವರೇ ಫೋನ್ ಮಾಡುವವರನ್ನು ಸಿದ್ಧಪಡಿಸಿಕೊಂಡಿರುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದು ಎಷ್ಟರಮಟ್ಟಿಗೆ ಸರಿ ಎಂಬುದು ನಮಗೆ ಗೊತ್ತಾಗದಿದ್ದರೂ ಸಹ ಯಾರೋ ಯಾರಿಗೋ ಹೇಳಿದ ವಿಷಯ ಇಲ್ಲಿ ಪ್ರಸ್ತುತವಾಗುವುದು. ನಿಜಕ್ಕೂ ಬೇಸರದ ಸಂಗತಿಯೇ ಹೌದು. ಮತ್ತೊಂದು ವಿಚಾರವೆಂದರೆ ಮೊನ್ನೆ ಟಿವಿ ಒಂದರಲ್ಲಿ ತನ್ನ 25 ವರ್ಷದ ಬದುಕನ್ನು, ಅನುಭವಿಸಿದ ಕಷ್ಟಗಳನ್ನು ಹೇಳಿದ ಮಹಿಳೆ ಒಬ್ಬರು ಮಗನ ಭವಿಷ್ಯದ ಬಗ್ಗೆ ಕೇಳಿದರು. ಮಗನ ಪ್ರಸ್ತುತ ಕಷ್ಟವನ್ನು ತಿಳಿದುಕೊಳ್ಳದೆ ಅವನ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯದೆ ದೇವರಂತೆ ವರ್ತಿಸಿದ ಗುರು ಒಬ್ಬರು ಬರುವ ಮುಂದಿನ ತಿಂಗಳ ಅಮಾವಾಸ್ಯೆಯಿಂದ ನಿಮ್ಮ ಮಗನಿಗೆ ಒಳ್ಳೆಯದಾಗುತ್ತದೆ. ಒಳ್ಳೆಯ ಕೆಲಸಕ್ಕೆ ಹೋಗುತ್ತಾನೆ. ಅವನನ್ನು ಕರೆದುಕೊಂಡು ನಮ್ಮ ಮಠಕ್ಕೆ ಬನ್ನಿ. ಒಂದು ಶಾಂತಿ ಹೋಮ ಮಾಡೋಣ, ಸುಬ್ರಹ್ಮಣ್ಯ ಹೋಮ ಮಾಡೋಣ, ಅಮಾವಾಸ್ಯೆ ದಿವಸವೇ ಮಾಡಬೇಕು. ಮೊದಲೇ ಬಂದು ಹೆಸರು ನೊಂದಾಯಿಸಿ ಎಂದು ಹೇಳಿದರಂತೆ. ಅಷ್ಟರಲ್ಲೇ ಆ ಮಹಿಳೆ ನನ್ನ ಮಗನಿಗೆ ಅಪಘಾತದಲ್ಲಿ ಎರಡು ಕಾಲುಗಳು ಹೋಗಿವೆ, ತಲೆಗೂ ಹೊಡೆತ ಬಿದ್ದಿದೆ. ಓಡಾಡಲು ಆಗುವುದಿಲ್ಲ. ಈಗ ಬದುಕು ಬದುಕುವುದು ತುಂಬಾ ಕಷ್ಟ ಎಂದಿದ್ದಾರೆ. ಈಗ ಆಸ್ಪತ್ರೆಯಲ್ಲಿದ್ದಾನೆ ಎಂದಾಗ ಆ ಫೋನ್ ಕಟ್ ಆಯ್ತಂತೆ.

ಭವಿಷ್ಯ ಹೇಳುವವರು, ತಮ್ಮ ಭವಿಷ್ಯವನ್ನು ಯೋಚಿಸದಿದ್ದರೂ ಪರವಾಗಿಲ್ಲ. ಕನಿಷ್ಠ ನೊಂದವರ ಮಾತನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಲ್ಲವೇ? ಈ ತಂದೆ ತಾಯಿಯರಿಗೆ ಮೊದಲು ಮಕ್ಕಳ ಬಗ್ಗೆ ಅಪಾರ ಪ್ರೇಮ. ದಿನ ಸವೆದಂತೆ ವಿರುದ್ಧವಾಗುತ್ತದೆ. ಏಕೆಂದರೆ ಅವರು ಅಂದುಕೊಂಡಂತೆ ಅವರ ಮಕ್ಕಳ ಭವಿಷ್ಯ ಅಥವಾ ಬದುಕಿನ ನಿರ್ಧಾರ ಸರಿಯಾಗದಿದ್ದಲ್ಲಿ, ತಿರುಗಿ ಮಾತನಾಡುವ ಪ್ರವೃತ್ತಿ ಬೆಳೆದಲ್ಲಿ ಇದೇ ಮಕ್ಕಳಿಗೆ ಶಾಪ ಹಾಕುವುದನ್ನು ನಮ್ಮ ನಡುವಿನ ಎಷ್ಟೋ ಜನ ಹೆತ್ತವರನ್ನು ನಾವು ನೋಡಿದ್ದೇವೆ ಹಾಗೂ ಗಮನಿಸಿದ್ದೇವೆ. ಹಾಗಾಗಿ ಇಲ್ಲಿ ಹೆತ್ತವರ ಶುಭ ಹಾರೈಕೆಯಾಗಲಿ, ಶಾಪವಾಗಲಿ ಯಾವುದೂ ಫಲಪ್ರದವಾಗುವುದಿಲ್ಲ ಎಂಬುದು ಬಹಳಷ್ಟು ಜನರ ನಂಬಿಕೆ ಅಲ್ಲವೇ?