ಶಿವಮೊಗ್ಗ : ವ್ಯಾಪಕ ಭ್ರಷ್ಟಾಚಾರ, ಕುಂದುಕೊರತೆಗಳನ್ನು ವಿಲೇ ಮಾಡದೇ ಅರ್ಜಿದಾರರನ್ನು ಪದೇ ಪದೆ ಕಚೇರಿಗೆ ಅಲೆದಾಡಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗದ ಭೂ ದಾಖಲೆಗಳ ಉಪನಿರ್ದೇಶಕರು(ಡಿಡಿಎಲ್ಆರ್) ಹಾಗೂ ಸಹಾಯಕ ನಿರ್ದೇಶಕರ (ಎಡಿಎಲ್ಆರ್) ಕಚೇರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ.
ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಸೂಚನೆ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಶನಿವಾರ ಡಿಡಿಎಲ್ಆರ್ ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು, ಕಡತಗಳ ತಪಾಸಣೆ ನಡೆಸಿದ್ದಾರೆ. ಕಡತಗಳು ವಿಲೇ ಆಗದಿರುವುದು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಒತ್ತುವರಿ ಆಗಿರುವ ಕೆರೆಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಲು ೧೦ ವರ್ಷಗಳ ಹಿಂದೆಯೇ ಆದೇಶವಾಗಿದ್ದರೂ ಸಂಬಂಧಿಸಿದ ಕಡತಗಳು ಇನ್ನೂ ಡಿಡಿಎಲ್ಆರ್ ಕಚೇರಿ ಕಪಾಟಿನಲ್ಲಿ ಕೊಳೆಯುತ್ತಿರುವುದನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿ ಕಚೇರಿ ಅಧಿಕಾರಿಗಳು, ಸಿಬ್ಬಂದಿ ಕಾರ್ಯವೈಖರಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿರುವ ೪,೭೯೨ ಕೆರೆಗಳ ಪೈಕಿ ೧,೮೨೯ ಒತ್ತುವರಿ ೨೦೧೫ರಲ್ಲಿಯೇ ಜಿಲ್ಲಾಡಳಿತದಿಂದ ಆದೇಶವಾಗಿದೆ. ಆಗಿರುವುದನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಲು ಆದೇಶಿಸಲಾಗಿತ್ತು.
ಅದರಲ್ಲಿ ೭೭೫ ಕೆರೆಗಳನ್ನು ಒತ್ತುವರಿ ಮುಕ್ತಗೊಳಿಸಲಾಗಿದೆ ಎಂದು ದಾಖಲೆಯಲ್ಲಿ ನಮೂದಿಸಲಾಗಿದೆ. ಇನ್ನೂ ೧,೦೫೪ ಕೆರೆಗಳ ತೆರವು ಬಾಕಿ ಉಳಿದಿರುವುದು ದಾಖಲೆ ಪರಿಶೀಲನೆ ವೇಳೆ ಬಹಿರಂಗವಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ೪,೫೪೭ ಸರ್ಕಾರಿ ಜಾಗಗಳು ಒತ್ತುವರಿ ಆಗಿರುವುದನ್ನು ಗುರುತಿಸಲಾಗಿದೆ. ಅವುಗಳ ತೆರವು ಪ್ರಕ್ರಿಯೆ ವರ್ಷಗಳಿಂದ ಬಾಕಿ ಉಳಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಡಿಡಿಎಲ್ಆರ್ ಅರೆನ್ಯಾಯಿಕ ವಿಚಾರಣೆ ಅಧಿಕಾರ ಬಳಸಿ ಇತ್ಯರ್ಥಗೊಳಿಸಬೇಕಾದ ೯೫ ಪ್ರಕರಣ ಬಾಕಿ ಇದ್ದು, ಅದರಲ್ಲಿ ೧೨ ಪ್ರಕರಣಗಳಲ್ಲಿ ೯೦ ದಿನ ಮೀರಿರುವುದು ಕಂಡುಬಂದಿತು. ಗೈರು ವಿಲೇ ೩೨ ಪ್ರಕರಣ ಇದ್ದು, ಮೂಲ ಕಡತ ಬಾಕಿ ಇಲ್ಲ ಎಂದು ಹೇಳಲಾಗುತ್ತಿದೆ. ಸರ್ಕಾರಿ ದರಕಾಸ್ತು ಆರು ಪ್ರಕರಣಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ವಿಲೇವಾರಿ ಮಾಡಬೇಕು. ಆದರೆ ಆ ಕೆಲಸವೂ ಆಗಿಲ್ಲ. ಸಾರ್ವಜನಿಕ ಕುಂದುಕೊರತೆ ಅರ್ಜಿ ೩೭ ಬಾಕಿ ಇದೆ. ತಿದ್ದುಪಡಿ ಬಾಕಿ ಇರುವ ಏಳು ಅರ್ಜಿಗಳು ಬಾಕಿ ಉಳಿದಿವೆ. ದಾಖಲೆ ರಹಿತ ಜನವಸತಿಗೆ ಸಂಬಂಧಿಸಿದ ೧೭ ಪ್ರಕರಣ ಬಾಕಿ ಉಳಿದಿವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಕಡತಗಳು ಮುಂದುವರಿದು ಕೆಲಸ ಆಗಬೇಕಾದರೆ ಪ್ರತಿ ಟೇಬಲ್ಗೆ ೩ ಸಾವಿರ ರೂ. ಲಂಚ ಕೊಡಬೇಕು ಎಂದು ಇದೇ ವೇಳೆ ಸಾರ್ವಜನಿಕರೊಬ್ಬರು ಲೋಕಾಯುಕ್ತ ಪೊಲೀಸರ ಎದುರು ಅಳಲು ತೋಡಿಕೊಂಡರು, ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ವೀರಬಸಪ್ಪ ಕುಸುಲಾಪುರ, ಗುರುರಾಜ್ ಮೈಲಾರ್ ಮತ್ತಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.
ನಗರದ ಹೊರವಲಯದ ಮಂಡ್ಲಿಯ ಸರ್ವೇ ನಂ.೪೨ರಲ್ಲಿ ೧೨ ಎಕರೆ ಕೆರೆ ಇದ್ದರೂ ಅದರಲ್ಲಿ ಎಂಟು ಎಕರೆ ಒತ್ತುವರಿಯಾಗಿದೆ. ೨೦೧೫ರಲ್ಲಿಯೇ ಒತ್ತುವರಿ ಗುರುತಿಸಿ ಮಾರ್ಕ್ ಮಾಡಿ ಮ್ಯಾಪಿಂಗ್ ಮಾಡಲಾಗಿತ್ತು. ಆದರೆ ಈವರೆಗೂ ಕೆರೆ ಒತ್ತುವರಿ ತೆರವುಗೊಳಿಸಿಲ್ಲ ಎಂಬುದು ಲೋಕಾಯುಕ್ತ ಪೊಲೀಸರ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಡಿಡಿಎಲ್ ಆರ್ ಕಚೇರಿ ದಾಖಲೆಗಳಲ್ಲಿ ೭೭೫ ಕೆರೆಗಳನ್ನು ಒತ್ತುವರಿ ಮುಕ್ತಗೊಳಿಸಲಾಗಿದೆ ಎಂದು ದಾಖಲಿಸಲಾಗಿದೆ. ಆದರೆ ಆ ಕೆರೆಗಳು ನಿಜವಾಗಿಯೂ ಒತ್ತುವರಿ ಮುಕ್ತವಾಗಿವೆಯೇ ಎಂಬುದನ್ನು ಭೌತಿಕವಾಗಿಯೂ ಪರಿಶೀಲಿಸಲಾಗುವುದು ಎಂದು ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ತಿಳಿಸಿದ್ದಾರೆ
ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಹಾಗೂ ಲೋಕಾಯುಕ್ತ ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ಡಿಡಿಎಲ್ ಆರ್ ಕಚೇರಿ, ಏಳು ಎಡಿಎಲ್ಆರ್ ಕಚೇರಿಗಳ ಮೇಲೂ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದ್ದೇವೆ. ನಮ್ಮ ದಾಳಿ ನಿರಂತರವಾಗಿರಲಿದೆ ಎಂದು ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಮಂಜುನಾಥ ಚೌಧರಿ ತಿಳಿಸಿದಗದಾರೆ.
ಪರಿಶೀಲನೆ ವೇಳೆ ಡಿಡಿಎಲ್ಆರ್ ಕಚೇರಿಗೆ ಶನಿವಾರ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವೇಳೆ ಸ್ವತಃ ಡಿಡಿಎಲ್ಆರ್ ಆಶಾ ಕುಮಾರಿ ಕಚೇರಿಯಲ್ಲೇ ಇರಲಿಲ್ಲ. ಬೆಂಗಳೂರಿಗೆ ಹೋಗಿದ್ದು, ಸೆ.೩೦ರಿಂದ ಕಚೇರಿಗೆ ಬಂದಿಲ್ಲ ಎಂದು ಅಲ್ಲಿನ ಸಿಬ್ಬಂದಿ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದರು. ಕಚೇರಿಯಲ್ಲಿ ಇಡಬೇಕಾದ ಅಧಿಕೃತ ಸರ್ಕಾರಿ ವಾಹನವೂ ಅಧಿಕಾರಿ ಮನೆಯಲ್ಲಿರುವುದು ಪರಿಶೀಲನೆ ವೇಳೆ ಕಂಡುಬಂದಿತು ಎಂದು ಲೋಕಾಯುಕ್ತ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದರು.