ಶಿವಮೊಗ್ಗ : ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಸೆ.೧೨ರಿಂದ ಶಿವಮೊಗ್ಗ ಜಿಲ್ಲಾ ಧಿಕಾರಿಗಳ ಕಛೇರಿ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ, ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆಯು ತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಇಂದು ೭ನೇ ದಿನಕ್ಕೆ ಕಾಲಿಟ್ಟಿದ್ದು, ಶಿವಮೂರ್ತಿ ವೃತ್ತದಲ್ಲಿ ರಸ್ತೆತಡೆ ನಡೆಸಿ, ಸರ್ಕಾರದ ಶವವನ್ನು ಇಟ್ಟು ಪ್ರತಿಭಟಿಸಿದರು.

ಬಳಿಕ ಶವಯಾತ್ರೆಯನ್ನು ಡಿಸಿ ಕಛೇರಿಯವರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಬಂಜಾರ ಸಮುದಾಯಕ್ಕೆ ೪.೫ ಮೀಸಲಾತಿ ನೀಡಲಾಗಿತ್ತು. ಸುಪ್ರೀಂಕೋರ್ಟಿನ ಮಾನದಂಡಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಸಿದ್ಧಪಡಿಸಲಾಗಿರುವ ನಾಗಮೋಹನ್ದಾಸ್ ವರದಿಯು ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಮುಂದುವರೆದ ಭಾಗದಂತ್ತಿದ್ದು, ಈ ವರದಿಯ ಸಾರಾಂಶಗಳು ವಾಸ್ತವಿಕ ಅಂಕಿಸಂಖ್ಯೆಗಳಿಂದ ದೂರವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಶಿಕ್ಷಣ, ಉದ್ಯೋಗ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಅಂಕಿಅಂಶಗಳು ದಮನಿತ ಸಮುದಾಯಗಳ ಅನುಮಾನಕ್ಕೆ ಕಾರಣವಾಗಿದೆ ಮತ್ತು ಈ ಅಂಕಿಅಂಶಗಳನ್ನು ಯಾವ ಮೂಲದಿಂದ ಪಡೆಯಲಾಗಿದೆ ಎಂಬುದನ್ನು ಆಯೋಗ ಸ್ಪಷ್ಟಪಡಿಸಬೇಕಿದೆ. ಪರಿಶಿಷ್ಟ ಜಾತಿಯ ನಿಖರ ಅಂಕಿ ಸಂಖ್ಯೆಗಳನ್ನು ಸರ್ಕಾರದ ಇಲಾಖೆಗಳು ನೀಡಿಲ್ಲ. ಸರ್ಕಾರ ಈ ಅಪೂರ್ಣ ವರದಿಯನ್ನೇ ಸಣ್ಣ-ಪುಟ್ಟ ಬದಲಾವಣೆಯೊಂದಿಗೆ ಜಾರಿಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನ್ಯಾ. ನಾಗಮೋಹನ್ದಾಸ್ ವರದಿಯಲ್ಲಿ ಅನುಸರಿಸಿರುವ ೨೩ ಮಾನದಂಡಗಳಲ್ಲಿ ಡಿ ವರ್ಗದಲ್ಲಿರುವ ಲಂಬಾಣಿ ಸೇರಿದಂತೆ ಇತರೆ ಜಾತಿಗಳು ಏಳು ವಿಷಯಗಳಲ್ಲಿ ಮಾತ್ರ ಪ್ರಗತಿ ಹೊಂದಿರುವುದನ್ನು ಕಾಣಿಸಲಾಗಿದ್ದು, ಉಳಿದ ೧೬ ಮಾನದಂಡಗಳಲ್ಲಿ ಸಿ ವರ್ಗದವರೇ ಪ್ರಗತಿ ಹೊಂದಿರುವಾಗ, ಸಿ ವರ್ಗದವರಿಗೆ ಶೇ.೬ರಷ್ಟು ಮೀಸಲಾತಿ ನೀಡಿ ಡಿ ವರ್ಗದವರಿಗೆ ಶೇ.೪ರಷ್ಟು ಮೀಸಲಾತಿ ನಿಗಧಿಗೊಳಿಸಿರುವುದು ಸರ್ಕಾರದಿಂದ ಆದ ಅನ್ಯಾಯವಾಗಿದ್ದು, ಕಳೆದ ಏಳು ದಿನಗಳಿಂದ ರಾಜ್ಯಾದ್ಯಂತ ಬಂಜಾರ ಸಮುದಾಯ ಸರ್ಕಾರದ ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಪ್ರತಿಭಟನೆ ನಡೆಸುತ್ತಾ ಬಂದಿದ್ದು, ಇಂದು ಅಣಕು ಶವಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿದೆ. ನಾಳೆ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುವುದು. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಪ್ರತಿಭಟನಾ ಸಂದರ್ಭದಲ್ಲಿ ಬಂಜಾರ ಸಮುದಾಯದ ಗುರುಗಳಾದ ಸೈನಾ ಭಗತ್ ಮಹಾರಾಜ್, ಕೆಜೆ. ನಾಗೇಶ್ ನಾಯ್ಕ್, ಬಸವರಾಜ್ ನಾಯ್ಕ್, ನಾನ್ಯಾನಾಯ್ಕ್, ಜಗದೀಶ್ ನಾಯ್ಕ್, ನಾಗರಾಜ್ ನಾಯ್ಕ್, ಗಂಗಾನಾಯ್ಕ್, ರಮೇಶ್ ನಾಯ್ಕ್, ಶಿವಾ ನಾಯ್ಕ್, ಗಿರೀಶ್ ನಾಯ್ಕ್, ಆನಂದ್ ನಾಯ್ಕ್, ಶಿವಮೊಗ್ಗ ತಾಲೂಕಿನ ಚಿಕ್ಕಮರಡಿ, ಕಾಟಕೆರೆ, ಅಬ್ಬಲೆಗೆರೆ, ಹುಣಸೋಡು, ಬಿಕ್ಕೋನಹಳ್ಳಿ, ಬೀರನಕೆರೆ, ಮೇಲಿನ ಕುಂಚೇನಹಳ್ಳಿ ಹಾಗೂ ಭದ್ರಾವತಿ ತಾಲ್ಲೂಕಿನ ಸಿದ್ಧಾಪುರ, ರಾಮಿನಕೊಪ್ಪ, ವೀರಾಪುರ, ಸಿರಿಯೂರು, ಬಿಳಿಕೆ, ಹೆಬ್ಬಂಡಿ, ಕೋಮಾರನಹಳ್ಳಿ, ಬಾಬಳ್ಳಿ, ನಾಗತಿಬೆಳಗಲು, ಹೊಸಹಳ್ಳಿ ತಾಂಡದ ನಾಯಕ್ ಡಾವ್ ಕಾರಾಬಾರಿ ಹಾಗೂ ತಾಂಡಾದ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.