ಶಿವಮೊಗ್ಗ : ಈಗಿರುವ ಎಲ್ಲಾ ಕಾರ್ಮಿಕ ಕಾಯಿದೆಗಳನ್ನು ಸೇರಿಸಿ ನಾಲ್ಕು ಕೋಡ್ಗಳಲ್ಲಿ ಮಾತ್ರ ಕಾಯಿದೆ ರೂಪಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿರುವುದಾಗಿ ಕೇಂದ್ರ ಸಚಿಗೆ ಶೋಭಾ ಕರಂದ್ಲಾಜೆ ಹೇಳಿದರು.
ಭಾರತೀಯ ಮಜ್ದೂರ್ ಸಂಘದ ೭೦ ನೇ ವರ್ಷಾಚರಣೆಯ ಸಮಾರೋಪ ಹಾಗೂ ರಾಷ್ಟ್ರೀಯ ಕಾರ್ಮಿಕ ದಿನದ ನಿಮಿತ್ತ ನಗರದ ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕುಟುಂಬ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಿಟೀಷರು ತಂದಿದ್ದ ೨೯ ಕಾಯಿದೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಒಂದಕ್ಕೊಂದು ಗೊಂದಲವಿದೆ. ಬ್ರಿಟೀಷರು ಕಾರ್ಮಿಕರನ್ನು ಗುಲಾಮರನ್ನಾಗಿ ದುಡಿಸಿಕೊಳ್ಳುವ ನಿಟ್ಟಿನಲ್ಲಿ ಇವನ್ನು ತಂದಿದ್ದರು. ಹೀಗಾಗಿ ಇವನ್ನು ಬದಲಾಯಿಸಲಾಗುತ್ತದೆ. ಸಂಘದ ನೂರನೇ ವರ್ಷಾಚರಣೆ ವೇಳೆಗೆ ಈ ನಾಲ್ಕೂ ಕೋಡ್ಗಳನ್ನು ರಾಜ್ಯಸಭೆಯಲ್ಲಿ ಪಾಸ್ ಮಾಡುವ ತಾಕತ್ತು ನಮಗೆ ಬರಬೇಕಿದೆ ಎಂದರು.

ಕಾನೂನು ತಿದ್ದುಪಡಿಗಾಗಿ ರಾಜ್ಯಗಳೊಂದಿಗೆ ಸಂಘರ್ಷ ನಡೆಸುವುದಿಲ್ಲ. ಪಕ್ಷದ ಅಭ್ಯರ್ಥಿಗಳು ಗೆಲ್ಲದಿರುವ ರಾಜ್ಯಗಳಿಗೂ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದ ಅವರು, ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಸಿಗಬೇಕೆಂಬ ಉದ್ದೇಶದಿಂದ ಇ-ಶೆಪೋರ್ಟಲ್ ಮಾಡಲಾಗಿದೆ. ಇದರಲ್ಲಿ ಎಲ್ಲಾ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಳ್ಳುವ ಮೂಲಕ ಸೌಲಭ್ಯಗಳನ್ನು ಪಡೆಯುವಂತೆ ಕರೆ ನೀಡಿದರು.
ಕಾರ್ಮಿಕರ ಇಪಿಎಫ್ ಹಾಗೂ ಇಎಸ್ಐ ಮಿತಿ ಕೂಡ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ನಿವೃತ್ತಿ ವೇತನ ನೀಡಿಕೆ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಇದರಿಂದಾಗಿ ಕಡಿಮೆ ವೇತನ ಪಡೆಯುವ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಭಾರತೀಯ ಮಜ್ದೂರು ಸಂಘಕ್ಕೆ ೭೦ ವರ್ಷವಾಗಿದೆ. ಇದು ದೇಶ ನಿರ್ಮಾಣದಲ್ಲಿ ಕಾರ್ಮಿಕರನ್ನು ಜೋಡಿಸುವ ಕೆಲಸ ಮಾಡುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ೧೦೦ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸಹ ಸಂಘಟನೆಯ ಚಟುವಟಿಕೆಗಳನ್ನು ವಿಸ್ತರಿಸಲು ಮುಂದಾಗಿದೆ ಎಂದರು.
ದೇಶ ಕಮ್ಯೂನಿಷ್ಟ್ ಚಿಂತನೆಯಲ್ಲಿ ಮುಳುಗಿ ಕಾರ್ಖಾನೆಗಳನ್ನು ಮುಚ್ಚಿಸುವ ನಿಟ್ಟಿನಲ್ಲಿ ಹೋರಾಟಗಳು ನಡೆಯುತ್ತಿದ್ದ ಸಂದರ್ಭದಲ್ಲಿ ದೇಶೀಯ ಚಿಂತನೆಯ ಮೂಲಕ ದತ್ತೋಪಂಥ್ ಥೇಂಗಡಿ ರಾಷ್ಟ್ರೀಯ ವಿಚಾರಧಾರೆಯಡಿ ಭಾರತೀಯ ಮಜ್ದೂರು ಸಂಘ ಹುಟ್ಟು ಹಾಕಿದರು. ಕಾರ್ಮಿಕರ ಹಿತ ಮಾತ್ರವಲ್ಲ, ಕಾರ್ಖಾನೆಯ ಮಾಲೀಕರ ಹಿತವನ್ನು ಕಾಪಾಡುವ ಮೂಲಕ ದೇಶದ ಪ್ರಗತಿಗೆ ಮುನ್ನಡು ಬರೆದಿದ್ದರು ಎಂದರು.

ಅಂತಹ ಸಂಘಟನೆ ಇದು ಬೃಹತ್ತಾಗಿ ಬೆಳೆದಿದೆ. ಐಎಲ್ಓ ದಂತಹ ವೇದಿಕೆಯಲ್ಲಿ ಧ್ವನಿ ಎತ್ತುವ ಕೆಲಸ ಮಾಡಿದೆ. ಪ್ರಧಾನಿ ಮೋದಿಯವರ ಆಶಯದಂತೆ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಸಂಘಟನೆಯಡಿಯಲ್ಲಿ ತರುವ ಕೆಲಸ ಬಿಎಂಎಸ್ನಿಂದ ಇನ್ನಷ್ಟು ಆಗಲೆಂದು ಆಶಿಸಿದರು.
ಮುಖ್ಯ ವಕ್ತಾರರಾಗಿ ಆಗಮಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮತ್ತು ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಮಾತನಾಡಿ, ಬಿಎಂಎಸ್ ಬೇರೆ ಕಾರ್ಮಿಕ ಸಂಘಟನೆಗಳಿಗೆ ಪರ್ಯಾಯವಾಗಿ ಕೆಲಸ ಮಾಡುತ್ತಿಲ್ಲ. ಕಾರ್ಮಿಕರು ಹಾಗೂ ಮಾಲೀಕರು ಚನ್ನಾಗಿರಬೇಕೆಂಬ ನಿಟ್ಟಿನಲ್ಲಿ ಸಂಘಟನೆ ಬೆಳೆಸಲಾಗುತ್ತಿದೆ ಎಂದರು.
ಕಾರ್ಮಿಕ ವಲಯದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕೆಂಬ ಉದ್ದೇಶದಲ್ಲಿ ಈ ಸಂಘಟನೆ ಸ್ಥಾಪಿಸಲಾಗಿತ್ತು. ಇದರ ಸ್ಥಾಪಕ ಥೇಂಗಡಿ ಕಾರ್ಮಿಕರಾಗಿರಲಿಲ್ಲ. ಬದಲಾಗಿ ಸಂಘದ ಪ್ರಚಾರಕರಾಗಿದ್ದರು. ಕಾರ್ಮಿಕರು ಹಾಗೂ ಮಾಲೀಕರ ನಡುವನ ಸಂಘರ್ಷ ಅಧ್ಯಯನ ಮಾಡಿ, ಸಮಾಜ, ರಾಷ್ಟ್ರವನ್ನ ಗಮನದಲ್ಲಿಟ್ಟುಕೊಂಡು ಸಂಘಟನೆ ಸ್ಥಾಪಿಸಿದರೆಂದು ಹೇಳಿದರು.

ತಂತ್ರಜ್ಞಾನದಿಂದಾಗಿ ಇಂದು ಪರಿಶ್ರಮ ಕಡಿಮೆಯಾಗುತ್ತಿದೆ. ಸಂಘಟನೆ ಬೆಳೆಯಬೇಕಾದರೆ ಪರಿಶ್ರಮ ಹಾಗೂ ನಿರಂತರತೆ ಅತೀ ಮುಖ್ಯವಾಗಿವೆ. ಸಮಾಜದಲ್ಲಿ ಒಡಕುಂಟು ಮಾಡುತ್ತಿರುವವರ ಬಗ್ಗೆಯೂ ಚಿಂತನೆ ಮಾಡಬೇಕಿದೆ. ನಾವಿಂದು ಮುಂದುವರಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರೂ ಕೂಡ ಸ್ಪಶ್ಯ ಹಾಗೂ ಅಸ್ಪಶ್ಯ ಎಂಬ ಪದಗಳು ಪಾಲನೆಯಾಗುತ್ತಿರುವುದು ವಿಷಾದನೀಯ ಎಂದರು.
ಬಿಎಂಎಸ್ ರಾಜ್ಯಾಧ್ಯಕ್ಷ ಎನ್.ಕೆ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯತಿಥಿಯಾಗಿ ಸಂಸದ ಬಿ.ವೈ. ರಾಘವೇಂದ್ರ, ಬಿಎಂಎಸ್ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ರವೀಂದ್ರ ಹ್ಮಿಂಟೆ ಇದ್ದರು.
ಈ ಸಂದರ್ಭದಲ್ಲಿ ಮಹಿಳಾ ಕಾರ್ಮಿಕರಿಗೆ ಸಚಿವರಿಂದ ಬಾಗಿನ ಸಮರ್ಪಣೆ ಮಾಡಲಾಯಿತು.