ಶಿವಮೊಗ್ಗ : ವಿಶ್ವಕರ್ಮ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕರಕುಶಲ ಭವನ ಕಟ್ಟಡಕ್ಕೆ ೨೦ ಲಕ್ಷ ರೂ.ಗಳ ಅನುದಾನ ನೀಡಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ವಾಜಪೇಯಿ ಬಡಾವಣೆಯ ಮುಖ್ಯ ರಸ್ತೆಯಲ್ಲಿರುವ ಸೂಡಾ ಲೇಔಟ್ನಲ್ಲಿ ವಿಶ್ವಕರ್ಮ ಕರಕುಶಲ ಭವನದ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ, ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದರು.

ವಿಶ್ವಕರ್ಮ ಸಮಾಜದವರು ನಂಬಿಕೆಗೆ ಅರ್ಹವಾಗಿದ್ದಾರೆ. ದೇಶದ ಹಿಂದೂತ್ವಕ್ಕೆ ಶಕ್ತಿಕೊಟ್ಟ ಸಮಾಜವದು. ಕರಕುಶಲತೆಗೆ ಜನಪ್ರಿಯವಾದುದು. ಬಹುಹಿಂದಿನಿಂದಲೂ ಈ ಜನಾಂಗದವರು ಶಿಲ್ಪಿಗೆ ಹೆಸರಾಗಿದ್ದಾರೆ. ಈ ಹಿನ್ನಲೆಯಲ್ಲಿ ಕರಕುಶಲ ಕರ್ಮಿಗಳಿಗೆ ಸಹಾಯ ನೀಡಲೆಂದೇ ಪ್ರಧಾನಿ ಮೋದಿಯವರು ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕರಕುಶಲ ಭವನ ಕಟ್ಟಡಕ್ಕೆ ಸಂಸದರ ನಿಧಿಯಿಂದ ೨೦ ಲಕ್ಷ ರೂ. ನೀಡಲಾಗುತ್ತಿದೆ. ಇದರ ಜೊತೆಗೆ ಶಾಸಕರ ಅನುದಾನಗಳು ಸೇರಿಕೊಂಡು ೩೦ ಲಕ್ಷ ಆಗುತ್ತದೆ. ಯಾವುದೇ ಸಮುದಾಯಕ್ಕೆ ೩೦ ಲಕ್ಷಕ್ಕೆ ಮೀರದಂತೆ ಅನುದಾನ ನೀಡಬೇಕು ಎಂಬುದು ನಿಯಮವಾಗಿದೆ. ಆದ್ದರಿಂದ ಬೇರೆಯ ಬಾಬ್ತಿನಲ್ಲಿ ಏನು ಅನುದಾನ ನೀಡಬೇಕು ಎಂಬುದನ್ನು ಯೋಚಿಸಿ ಇದಕ್ಕೆ ಸಹಾಯ ಮಾಡಲಾಗುವುದು. ಒಳ್ಳೆಯ ಜಾಗ ಸಿಕ್ಕಿದೆ. ಉತ್ತಮವಾದ ಭವನ ಕಟ್ಟಿ ನಿಮ್ಮೊಂದಿಗೆ ನಾವಿದ್ದೇವೆ ಎಂದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರು ವಿಶ್ವಕರ್ಮ ಸಮುದಾಯದವರು ಯಾರಿಗೇನೂ ಕಡಿಮೆ ಇಲ್ಲ. ಜಕಣಾಚಾರ್ಯರಂತಹ ಶಿಲ್ಪಿಗಳು ಈ ಸಮಾಜದವರು. ದೇವಾಲಯಗಳ ನಿರ್ಮಾಣಕ್ಕೆ ಇವರ ಕೊಡುಗೆ ಅಪಾರವಾಗಿದೆ. ದೈವದತ್ತವಾದ ಸಮಾಜವಿದು. ಹಿಂದುಳಿದವರು ಎಂದು ಯಾರು ಅಂಜಬಾರದು. ನಾವು ಯಾರಿಗೂ ಕಡಿಮೆಯಿಲ್ಲ ಎಂಬ ಭಾವನೆ ಬೆಳೆಯಬೇಕು. ಈ ಸಮಾಜದ ಜೊತೆಗೆ ನಾವಿದ್ದೇವೆ ಕಟ್ಟಡ ಬೇಗನೆ ಪೂರ್ಣಗೊಳ್ಳಲಿ ಎಂದರು.
ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ ಮಾತನಾಡಿ, ಶಾಸಕರ ನಿಧಿಯಿಂದ ನಾನು ೫ ಲಕ್ಷ ಮತ್ತು ಡಿ.ಎಸ್. ಅರುಣ್ರವರು ೫ ಲಕ್ಷ ನೀಡುತ್ತಾರೆ. ಈಗಾಗಲೇ ಶಾಸಕ ಚನ್ನಬಸಪ್ಪನವರು ೨೦ ಲಕ್ಷ ನೀಡಿದ್ದಾರೆ. ಈ ಎಲ್ಲಾ ಅನುದಾನಗಳನ್ನು ಬಳಸಿಕೊಂಡು, ಉತ್ತಮವಾದ ಭವನ ಕಟ್ಟಿ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ವಿಶ್ವಕರ್ಮ ಸಮಾಜದವರಿಗೆ ತನ್ನದೇ ಆದ ಸಂಸ್ಕೃತಿ ಇದೆ. ದೇವಾಲಯಗಳ ಶಿಲ್ಪಿಗಳನ್ನು ಕೆತ್ತುವುದರಲ್ಲಿ ಅವರ ಪಾತ್ರ ಹೆಚ್ಚಾಗಿದೆ. ಈಗಾಗಲೇ ಈ ಸರ್ಕಾರಿ ಸಂಘಕ್ಕೆ ೨೦ ಲಕ್ಷ ರೂ.ಗಳ ಅನುದಾನವನ್ನು ನಾನು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಕಾರ ನೀಡಲಾಗುವುದು ಎಂದರು.
ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ವಿಶ್ವಕರ್ಮ ಕರಕುಶಲ ಭವನ ಕಟ್ಟಡ ಬೇಗನೆ ಪೂರ್ಣಗೊಳ್ಳಲಿ ಅಲ್ಲಿ ಕುಶಲತೆಯ ತರಬೇತಿಗಳು ನಡೆಯಲಿ. ಸೌಹಾರ್ಧ ಸಂಘಗಳ ಹೆಮ್ಮೆಯ ಜಿಲ್ಲೆ ಇದು. ಸಹಕಾರ ಕ್ಷೇತ್ರ ಬೆಳೆಯಬೇಕು-ಉಳಿಯಬೇಕು ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್. ಚಂದ್ರಕಾಂತ್ ಮಾತನಾಡಿ, ವಿಶ್ವಕರ್ಮ ಕರಕುಶಲ ಭವನ ಸುಮಾರು ೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಹಾಲಿ ಮತ್ತು ಮಾಜಿ ಸೂಡಾ ಅಧ್ಯಕ್ಷರುಗಳು ಈ ಕಟ್ಟಡಕ್ಕೆ ತನ್ನದೇ ಆದ ಸಹಕಾರ ನೀಡಿದ್ದಾರೆ. ಈ ಕಟ್ಟಡವು ನಮ್ಮ ಸಮಾಜದ ಕರಕುಶಲಕರ್ಮಿಗಳಿಗೆ ತರಬೇತಿ ನೀಡುವುದರ ಜೊತೆಗೆ ಸೌಹಾರ್ಧವನ್ನು ಬೆಸೆಯುವುದರಲ್ಲಿ ಕೆಲಸ ಮಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಗಳ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಸಂಘದ ಉಪಾಧ್ಯಕ್ಷ ಸಿ.ಪಿ. ಶಿವಕುಮಾರಚಾರಿ, ಕಟ್ಟಡ ಸಮಿತಿ ಕಾರ್ಯದರ್ಶಿ ಕೆ. ಈಶ್ವರಾಚಾರ್, ನಿರ್ದೇಶಕರುಗಳಾದ ಪಿ. ಶ್ರೀನಿವಾಸ್, ನಾಗರಾಜ್, ಸುರೇಶ್, ಶಶಿ ಎಸ್. ಮಂಗಳಗಾರ್, ಓಂಗಣೇಶ್ ಶೇಟ್, ಸಿಇಓ ರೂಪಾ ಸೇರಿದಂತೆ ಹಲವರಿದ್ದರು.