ಶಿವಮೊಗ್ಗ : ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಸೆ.೧೭ರಂದು ಶಿವಮೊಗ್ಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಭಿಯಾನದ ಅಧ್ಯಕ್ಷ ಎಸ್.ರುದ್ರೇಗೌಡ ತಿಳಿಸಿದರು.
ಅವರು ಇಂದು ಶ್ರೀ ಬೆಕ್ಕಿನ ಕಲ್ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾಜವು ನೈತಿಕ ಅಧ:ಪತನಕ್ಕೆ ಇಳಿಯುತ್ತಿರುವ ಸಂದರ್ಭದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಶಿವಶರಣರ ತತ್ವಾದರ್ಶಗಳನ್ನು ಜನಮನದಲ್ಲಿ ಬಿತ್ತಿ, ಅಳಿಯುತ್ತಿರುವ ಆದರ್ಶಗಳ ಪುನರುಜ್ಜೀವನಕ್ಕೆ ಪ್ರಯತ್ನಿಸುವ ಉದ್ಧೇಶದಿಂದ ಬಸವ ಸಂಸ್ಕೃತಿ ಅಭಿಯಾನವನ್ನು ನಡೆಸುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಅಭಿಯಾನದ ರಥ ಸಂಚರಿಸಲಿದ್ದು, ಸೆ.೧೭ರಂದು ಬೆಳಿಗ್ಗೆ ೧೧ಗಂಟೆಗೆ ಪುರಲೆಗೆ ಈ ರಥ ಆಗಮಿಸಲಿದೆ. ಅಲ್ಲಿ ಸಮಾಜದ ಪರವಾಗಿ ಭವ್ಯ ಸ್ವಾಗತ ಕೋರಲಾಗುವುದು ಎಂದರು.

ಅಂದು ಬೆಳಿಗ್ಗೆ ೧೧ಗಂಟೆಗೆ ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ ೪ರಿಂದ ೬ರ ವರೆಗೆ ಅಕ್ಕ ಮಹಾದೇವಿ ವೃತ್ತ(ಉಷಾ ನರ್ಸಿಂಗ್ ಹೋಮ್)ದಿಂದ ಕುವೆಂಪು ರಂಗ ಮಂದಿರದ ವರೆಗೆ ಪಾದಯಾತ್ರೆ ನಡೆಯಲಿದೆ. ಸಂಜೆ ೬ಗಂಟೆಗೆ ಕುವೆಂಪು ರಂಗ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ರಾತ್ರಿ ೮ಗಂಟೆಗೆ ಜಂಗಮದೆಡೆಗೆ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಗದಗದ ಯಡಿಯೂರು ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸುವರು. ಬಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟಾಧ್ಯಕ್ಷರು, ಸಾಣೆಹಳ್ಳಿ ತರಳಬಾಳು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಬೈಲೂರು ನಿಷ್ಕಲ ಮಂಟಪ, ಮುಂಡರಗಿಯ ತೋಂಟದಾರ್ಯ ಮಠದ ಶ್ರೀ ನಿಜಗುಣ ಪ್ರಭುತೋಂಟದಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು ಎಂದ ಅವರು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರು ಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು ನಡೆ-ನುಡಿ-ಸಿದ್ದಾಂತ ವಿಷಯದ ಕುರಿತು, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಶರಣರ ಕಾಯಕ ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತರಿರುವರು. ಸಚಿವ ಎಸ್.ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಕ್ರಮವಾಗಿ ‘ಬಸವ ತತ್ವ’ ಮತ್ತು ‘ದಿವ್ಯತ್ರಯರು’ ಕೃತಿ ಬಿಡುಗಡೆಗೊಳಿಸುವರು. ಅಭಿಯಾನದ ಅಧ್ಯಕ್ಷ ಎಸ್.ರುದ್ರೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸುವರು. ವಿವಿಧ ಮಠಾಧೀಶರು, ಹಾಲಿ ಮಾಜಿ ಶಾಸಕರು, ಸಂಸದರು, ಜನಪ್ರತಿನಿಧಿಗಳು, ಸಮಾಜದ ಪ್ರಮುಖರು ಉಪಸ್ಥಿತರಿರುವರು. ಸಮಾರಂಭದ ಬಳಿಕ ಪ್ರಸಾದದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು.
ಶ್ರೀ ಬೆಕ್ಕಿನ ಕಲ್ಮಠದ ಶ್ರೀಗಳು ಮಾತನಾಡಿ, ಸಾರ್ವಜನಿಕರಲ್ಲಿ ಆಧ್ಯಾತ್ಮದ ಅರಿವು ಮೂಡಿಸುವುದು, ವ್ಯಸನಮುಕ್ತ ಸಮಾಜ ನಿರ್ಮಾಣ, ಸಮ ಸಮಾಜ ನಿರ್ಮಾಣ, ಮಹಿಳೆಯರ ಘನತೆ ಕಾಪಾಡುವುದು, ವ್ಯಕ್ತಿತ್ವ ವಿಕಸನ ಸೇರಿದಂತೆ ಹತ್ತು ಹಲವು ಆಶಯಗಳನ್ನು ಈ ಅಭಿಯಾನ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು, ಜಡೆ ಮಠದ ಶ್ರೀಗಳು, ಹಾರ್ನಳ್ಳಿ ಚೌಕಿ ಮಠದ ಶ್ರೀಗಳು, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪ್ರಮುಖರಾದ ಡಾ.ರೇಣುಕಾರಾಧ್ಯ, ಪಿ.ರುದ್ರೇಶ್, ಬಳ್ಳೆಕೆರೆ ಸಂತೋಷ್ ಮೊದಲಾದವರಿದ್ದರು.