ಶಿವಮೊಗ್ಗ : ಗಣಪತಿ ಹಬ್ಬ ರಾಷ್ಟ್ರೀಯ ಹಬ್ಬವಾಗಿದ್ದು, ವಿಘ್ನವಿನಾಯಕನ ಹಬ್ಬಕ್ಕೆ ವಿಘ್ನ ತಂದೊಡ್ಡುವ ಕೆಲಸವನ್ನು ಸಿದ್ಧರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ನಾಡಹಬ್ಬ ದಸರಾ ಮತ್ತು ರಾಷ್ಟ್ರೀಯ ಹಬ್ಬ ಗಣೇಶೋತ್ಸವಕ್ಕೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಡ್ಡಿಪಡಿಸುವ ಕಾರ್ಯ ಮಾಡಲಾಗುತ್ತಿದೆ. ಭದ್ರಾವತಿಯ ಶಾಸಕರು ಶಾಸಕರಾಗಿ ಆಯ್ಕೆಯಾಗಲು ಹಿಂದೂ ಸಮಾಜದ ಪಾತ್ರವಿದ್ದರೂ ಹಿಂದೂ ಧರ್ಮಕ್ಕಿಂತ ಮುಸ್ಲಿಂ ಧರ್ಮವೇ ಶ್ರೇಷ್ಠ ಎಂದು ಮತಾಂತರವಾಗಲು ಹೊರಟಿದ್ದು ಅವರು ಕೂಡಲೇ ಹಿಂದೂ ಧರ್ಮದಿಂದ ತೊಲಗುವುದು ಒಳ್ಳೆಯದು. ಅದಕ್ಕೆ ದಿನ ನಿಗಧಿಪಡಿಸಲಿ ಎಂದರು.

ಮದ್ದೂರಿನಲ್ಲಿ ಗಣಪತಿ ಮೆರವಣಿಗೆಯ ವೇಳೆ ಲೈಟ್ ಆಫ್ ಮಾಡುತ್ತಾರೆ. ಕಟ್ಟಡದ ಮೇಲಿನಿಂದ ಸೈಜುಗಲ್ಲು ಎಸೆಯುತ್ತಾರೆ. ಮಸೀದಿಗಳ ಒಳಗೆ ದೊಣ್ಣೆ, ಕಲ್ಲುಗಳನ್ನು ಸ್ಟಾಕ್ಮಾಡಿಟ್ಟುಕೊಳ್ಳುತ್ತಾರೆ. ಇದು ಪೂರ್ವನಿಯೋಜಿತ ಕೃತ್ಯವಾಗಿದೆ. ಇದಕ್ಕೆ ಕಾರಣರಾದ ಕಿಡಿಗೇಡಿಗಳು ಭಯೋತ್ಪಾದಕರಾಗಿದ್ದಾರೆ. ಅವರ ಮೇಲೆ ಕಠಿಣಕ್ರಮ ಕೈಗೊಳ್ಳಬೇಕು. ಬಜರಂಗದಳ ಮತ್ತು ಬಿಜೆಪಿಯ ಕುಮ್ಮಕ್ಕು ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯಲ್ಲಿ, ಹುಬ್ಬಳ್ಳಿಯ ಪೊಲೀಸ್ ಠಾಣೆಯ ಮೇಲೆ ದಾಳಿಮಾಡಿದಾಗ ಹಸುಗಳ್ಳತನ ಮಾಡಿದವರನ್ನು ಹಸುಗಳ ಹತ್ಯೆ ಮಾಡಿದವರನ್ನು ಹಸುವಿನ ಕೆಚ್ಚಲು ಕುಯ್ದಿದವರನ್ನು ಬಿಡುಗಡೆ ಮಾಡಿದ್ದು ಯಾರು ? ವೀಪರೀತವಾಗಿ ಮುಸ್ಲಿಂ ತುಷ್ಟೀಕರಣ ಮಾಡಿದವರು ಯಾರು ? ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರ ಮೇಲಿನ ಕೇಸು ಏನಾಯಿತು ? ವಸತಿ ಯೋಜನೆಯಲ್ಲಿ ೧೫% ಮುಸ್ಲಿಂರಿಗೆ ರಿಜರ್ವೇಷನ್ ನೀಡಿದವರು ಯಾರು ? ಗುತ್ತಿಗೆಯಲ್ಲಿ ಮುಸ್ಲಿಂರಿಗೆ ೪% ರಿಜರ್ವೇಷನ್ ನೀಡಿದವರು ಯಾರು ಎಂಬುದನ್ನು ರಾಜ್ಯದ ಜನ ಗಮನಿಸಿದ್ದಾರೆ.

ಎರಡನೇ ಟಿಪ್ಪು ಸುಲ್ತಾನ್ ದರ್ಬಾರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ. ಚಿತ್ರದುರ್ಗದಲ್ಲಿ ಡಿಜೆ ಹಾಕಲು ಅನುಮತಿ ನೀಡಿಲ್ಲ. ಮೆರವಣಿಗೆಗೆ ಅನೇಕ ನಿಬಂಧನೆ ವಿಧಿಸಿದ್ದಾರೆ. ಈದ್ ಮೆರವಣಿಗೆಗೆ ಈ ಷರತ್ತುಗಳನ್ನು ಏಕೆ ಹಾಕಲಿಲ್ಲ ? ಕೂಡಲೇ ಸರ್ಕಾರ ಎಲ್ಲಾ ಗಣಪತಿ ಮೆರವಣಿಗೆಗೂ ರಾಜ್ಯದಲ್ಲಿ ಡಿಜೆಗೆ ಅನುಮತಿ ನೀಡಬೇಕು. ಕೂಡಲೇ ಸರ್ಕಾರ ತನ್ನ ಮನಸ್ಥಿತಿಯನ್ನು ಬದಲಾಯಿಸಿ, ಗಣಪತಿಯ ಸಂಭ್ರಮಕ್ಕೆ ಅವಕಾಶ ಕೊಡಬೇಕು. ಬೂಕರ್ ಪ್ರಶಸ್ತಿ ಇಬ್ಬರಿಗೆ ದೊರೆತ್ತಿದ್ದು, ಇಬ್ಬರನ್ನೂ ಏಕೆ ದಸರಾ ಉದ್ಘಾಟನೆಗೆ ಆಹ್ವಾನಿಸಲಿಲ್ಲ ಎಂದು ಪ್ರಶ್ನಿಸಿದರು.
ಕೂಡಲೇ ಸರ್ಕಾರ ತಿದ್ದಿಕೊಳ್ಳದಿದ್ದರೆ ರಾಜ್ಯಾದ್ಯಂತ ಹಿಂದೂ ಸಮಾಜ ಮತ್ತು ಬಿಜೆಪಿ ಉಗ್ರ ಹೋರಾಟ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಟಿ.ಡಿ. ಮೇಘರಾಜ್, ಶಿವರಾಜ್, ಸಿದ್ದಲಿಂಗಪ್ಪ, ಮಾಲ್ತೇಶ್, ಕುಪೇಂದ್ರ, ಸುಧಾಕರ್, ಹರೀಶ್, ಮಂಗಳಾ ನಾಗೇಂದ್ರ, ನಿವೇದಿತಾ ರಾಜ್, ಅಣ್ಣಪ್ಪ, ಹರಿಕೃಷ್ಣ ಮೊದಲಾದವರಿದ್ದರು.