ತೀರ್ಥಹಳ್ಳಿ: ಕ್ಯಾನ್ಸರ್ ಖಾಯಿಲೆಯನ್ನು ದೊಡ್ಡದು ಮಾಡಬೇಡಿ ಹಾಗೂ ಕ್ಯಾನ್ಸರ್ ಇದೇ ಅಂದರೇ ಅದನ್ನು ಮುಚ್ಚಿಡ ಬೇಡಿ ಎಂದು ತ್ರಿಯಂಬಕಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಅನಿಲ್ ರವರು ತಿಳಿಸಿದರು. ಅವರು ಇಂದು
ವಿರೂಪಾಪುರದ

ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ , ತೀರ್ಥಹಳ್ಳಿ ತಾಲ್ಲೂಕು ತ್ರಿಯಂಬಕಪುರ ಗ್ರಾಮ ಪಂಚಾಯಿತಿ, ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ಶಿವಮೊಗ್ಗ ಹಾಗೂ ಎಂ.ಐ.ಓ. ಕ್ಯಾನ್ಸರ್ ಆಸ್ಪತ್ರೆ, ತೀರ್ಥಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ವಿರುಪಾಪುರದಲ್ಲಿ ಹಮ್ಮಿಕೊಂಡಿದ್ದ

ಕ್ಯಾನ್ಸರ್ ಕುರಿತು ಜನ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತ ತಿಳಿಸಿದರು. ಕ್ಯಾನ್ಸರ್ ಖಾಯಿಲೆ ಇದೆ ಎಂದು ತಿಳಿದ ಕೂಡಲೇ ಸರಿಯಾದ ಚಿಕಿತ್ಸೆಯನ್ನು ಪಡೆದರೆ ಶೀಘ್ರದಲ್ಲೇ ಗುಣಮುಖರಾಗಬಹುದು ಎಂದರು. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಹೊಸ ಹೊಸ ಸಂಶೋಧನೆಗಳು ನಡೆಯುತ್ತಿದ್ದು ಇಂದು ಕ್ಯಾನ್ಸರ್ ಕೂಡ ಗುಣಪಡಿಸುವ ಖಾಯಿಲೆಯಾಗಿದೆ ಎಂದರು.

ನಮ್ಮ ಗ್ರಾಮ ಪಂಚಾಯತಿ ವತಿಯಿಂದ ಪ್ರತೀ ಗ್ರಾಮದಲ್ಲೂ ಕ್ಯಾನ್ಸರ್ ಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು ಇದಕ್ಕೆ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯವರು ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿರುತ್ತಾರೆ.

ಎಮ್.ಐ.ಓ. ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ತೀರ್ಥಹಳ್ಳಿ ಪರವಾಗಿ ಜ್ಯೋತಿ ರವರು ಮಾತನಾಡುತ್ತ ಕ್ಯಾನ್ಸರ್ ಖಾಯಿಲೆ ಸಾಮಾನ್ಯವಾಗಿ ನಾವು ಬಳಸುವ ಆಹಾರ ಪದ್ದತಿಯಿಂದ ಹಾಗೂ ದುರಭ್ಯಾಸಗಳಿಂದ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಹೆಚ್ಚಾಗಿ ಯುವಕರಲ್ಲಿ ಕಾಣಿಸುತ್ತಿದೆ, ಕಾರಣ ಹೆಚ್ಚಿನ ಯುವಕರು ಗುಟ್ಕಾ, ತಂಬಾಕು ಸೇವಿಸುತ್ತಾರೆ. ಗುಟ್ಕಾ ಮತ್ತು ತಂಬಾಕಿನಲ್ಲಿರುವ ವಿಷಕಾರಿ ನಮ್ಮ ದೇಹವನ್ನು ಹಂತ ಹಂತವಾಗಿ ಕೊಲ್ಲುತ್ತದೆ ಎಂದರು.

ಕ್ಯಾನ್ಸರ್ ಎಂಬುದು ಸಾಂಕ್ರಾಮಿಕ ರೋಗ ಅಲ್ಲ, ಕ್ಯಾನ್ಸರ್ ಬಂದವರನ್ನು ದೂರವಿಡಬೇಡಿ, ಮೂಡನಂಬಿಕೆ ಮತ್ತು ತಪ್ಪು ಕಲ್ಪನೆಯಿಂದ ರೋಗಿಗಳನ್ನು ಅಸಡ್ಡೆಯಿಂದ ನೋಡಬೇಡಿ. ವೈಚಾರಿಕತೆ ಮತ್ತು ವೈಜ್ಞಾನಿಕತೆಯಿಂದ ಚಿಕಿತ್ಸೆಯನ್ನು ಕೊಡಿ ಎಂದರು.
ಮಹಿಳೆಯರಲ್ಲಿ ಹೆಚ್ಚಾಗಿ ಸ್ಥನದ ಕ್ಯಾನ್ಸರ್ ಲಕ್ಷಣಗಳು ನೋಡುವುದಾದರೆ ಮೊದಲು ಸ್ಥನದಲ್ಲಿ ಗೆಡ್ಡೆ ಕಾಣಿಸಿಕೊಳ್ಳುವುದು, ಹಾಗೂ ನೋವು ಉಂಟಾಗುವುದು, ಇದರ ಬಗ್ಗೆ ಮಹಿಳೆಯರು ಜಾಗೃತರಾಗಿ ಆಗಾಗ ತಮ್ಮ ಎದೆಯನ್ನು ಪರೀಕ್ಷಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಸ್ಥಾವಿಕವಾಗಿ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್ ಮಾತನಾಡುತ್ತ ಶಿವಮೊಗ್ಗ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಹಾಗೂ ಎಮ್.ಐ.ಓ. ತೀರ್ಥಹಳ್ಳಿ ಕ್ಯಾನ್ಸರ್ ಅಸ್ಪತ್ರೆಯವರ ಸಹಕಾರದೊಂದಿಗೆ ಪ್ರತೀ ಗ್ರಾಮದಲ್ಲೂ ಕ್ಯಾನ್ಸರ್ ಅರಿವು ಮೂಡಿಸುವ ಆಂದೋಲನ ನಮ್ಮ ಅಕಾಡೆಮಿಯಿಂದ ಈಗಾಗಲೇ ಆರಂಭವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಸಂದೇಶ್, ಎಮ್.ಐ.ಓ. ತೀರ್ಥಹಳ್ಳಿ ಕ್ಯಾನ್ಸರ್ ಅಸ್ಪತ್ರೆಯ ಸೌಮ್ಯ, ಗ್ರಾಮ ಪಂಚಾಯತಿಯ ಸದಸ್ಯರಾದ ಪೂರ್ಣಿಮ
ಉಪಸ್ಥಿತರಿದ್ದರು. ಚೇತನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.