
ಶಿವಮೊಗ್ಗ,ಆ.28:: ಗಣಪನ ಹಬ್ಬದ ಮೊದಲ ದಿನ ಮುಗಿದಿದೆ. ವರುಣನ ಸಿಂಚನದೊಂದಿಗೆ ಎಲ್ಲೆಡೆ ಗಣಪನ ಆಚರಣೆ ನಡೆದಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಂತೂ ವಿಘ್ನ ವಿನಾಶಕನದೇ ಕಾರುಬಾರು.

ಗಣಪನನ್ನು ಕೂರಿಸಿ ಪೂಜೆ ಮಾಡಿ, ರಾಜಬೀದಿ ಮೆರವಣಿಗೆ ಮೂಲಕ ತಾಯಿ ಗಂಗಾ ಬಳಿ ಹೋಗಿ ಸೇರುವ ವಿಸರ್ಜನೆ ಅತ್ಯಂತ ವಿಶೇಷವಾಗಿರುತ್ತದೆ.


ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಅತ್ಯಂತ ವಿಶೇಷವಾಗಿ ಗಣಪ ಆಚರಣೆ ಹಾಗೂ ಗಣಪ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಹಾಗೂ ದುರ್ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಶಿವಮೊಗ್ಗದ ಕೋಟೆ ರಸ್ತೆಯ ತುಂಗಾ ಮಡಿಲು ಸೇರಿದಂತೆ ನಗರದೆಲ್ಲೆಡೆ ಗಣಪನನ್ನು ವಿಸರ್ಜನೆ ಮಾಡುವ ಸ್ಥಳದಲ್ಲಿ ಪಾಲಿಕೆಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ

.
ಮೊದಲ ದಿನ ಸಂಜೆಯ ಹೊತ್ತು ಸುಮಾರು ೧೦೦೦ಕ್ಕೂ ಹೆಚ್ಚು ಗಣಪನನ್ನು ವಿಸರ್ಜಿಸಲಾಯಿತು ಎಂದು ತಿಳಿದು ಬಂದಿದ್ದು, ಸುರಿವ ಮಳೆಯಲ್ಲೇ ಪಾಲಿಕೆಯ ಸಿಬ್ಬಂದಿಗಳು ತಾವೇ ಮುಂದೆ ನಿಂತು ಜವಾಬ್ದಾರಿ ಹೊತ್ತು ರಕ್ಷಣಾತ್ಮಕ ಕವಚದೊಂದಿಗೆ ನೀರೊಳಗೆ ಗಣಪನನ್ನು ವಿಸರ್ಜಿಸಿದ್ದು, ವಿಶೇಷವೇ ಹೌದು.
ತುಂಗಾನದಿಯಲ್ಲಂತೂ ಪಾಲಿಕೆ ಸಿಬ್ಬಂದಿಗಂತೂ ರಕ್ಷಣಾ ವ್ಯವಸ್ಥೆಯವರಂತೆ ನಿಂತಿದ್ದಾರೆ. ಅಗತ್ಯವಿರುವಡೆ ಬ್ಯಾರಿಕೇಡ್ ಕಟ್ಟಿದ್ದಾರೆ.
ಇಂತಹದೊಂದು ವ್ಯವಸ್ಥೆ ಜಾರಿಯಾಗಲು ಪಾಲಿಕೆಯ ಆಯುಕ್ತರಾದ ಮಾಯಣ್ಣಗೌಡ ಹಾಗೂ ಇತರೆ ಅಧಿಕಾರಿಗಳು ಶಾಸಕರ ಹಾಗೂ ಸಚಿವರ ಜೊತೆ ಚರ್ಚಿಸಿ ವ್ಯವಸ್ಥಿತವಾದ ಕ್ರಮ ಕೈಗೊಂಡಿರುವುದನ್ನು ಶಿವಮೊಗ್ಗ ನಗರದ ಜನತೆ ಶ್ಲಾಘಿಸಿದ್ದಾರೆ.

ಮತ್ತೊಂದು ವಿಶೇಷವೆಂದರೆ ಪಾಲಿಕೆಯೇ ಗಣಪ ಮೂರ್ತಿಯನ್ನು ತಾಯಿಯ ಮಡಿಲಿಗೆ ಕಳಿಸಲು ಪ್ರತಿ ವಾರ್ಡ್ಗಳಲ್ಲಿ ಉಚಿತವಾದ ಸಂಚಾರ ಮೊಬೈಲ್ ವಾಹನದಲ್ಲಿ ಗಣಪತಿ ಮೂರ್ತಿ ವಿಸರ್ಜನಾ ಟ್ಯಾಂಕರ್ ಹೊತ್ತು ತರುವ ವ್ಯವಸ್ಥೆಯನ್ನು ಮಾಡಿರುವುದು ಶ್ಲಾಘನೀಯ.
ಪ್ರತಿ ವಾರ್ಡ್ಗಳಲ್ಲಿ ಹಾಗೂ ಗೋಂದಿ ಚಾನಲ್, ತುಂಗಾನದಿ, ತುಂಗಾ ಚಾನಲ್, ನಗರದ ಹಲವೆಡೆ ಇರುವ ಕೆರೆಗಳಲ್ಲಿ ಗಣಪ ಮೂರ್ತಿ ವಿಸರ್ಜಿಸುವ ಬಗ್ಗೆ ಯಾವುದೇ ಸಮಸ್ಯೆ ಇದ್ದರೆ ಫೋನ್ ಮಾಡಲು ಪಾಲಿಕೆ ತಿಳಿಸಿದೆ. ನಿಜಕ್ಕೂ ಇದೊಂದು ಉತ್ತಮ ಹಾಗೂ ಸ್ತುತ್ಯಾರ್ಹ ಕಾರ್ಯಕ್ರಮ.