ಶಿರಾಳಕೊಪ್ಪ,ಆ.24:
ಶಿರಾಳಕೊಪ್ಪ ಲಯನ್ಸ್ ವತಿಯಿಂದ ಸೊರಬ ರಸ್ತೆಯ ಸರ್ಕಾರಿ ಪ್ರೌಢ ಶಾಲೆಗೆ 8 ಗ್ರೀನ್ ಬೋರ್ಡ್ ನೀಡಲಾಯಿತು.
ಮುಖ್ಯ ಅತಿಥಿ, ಕ್ಲಬ್ ಅಧ್ಯಕ್ಷ ಯೋಗಿ ರಾಜ್ ಮಾತನಾಡಿ, ಶಿರಾಳಕೊಪ್ಪ ಭಕ್ತ ಸಿರಿಯಾಳನ ಜನ್ಮ ಸ್ಥಳ. ಇಂತಹ ದಾನಶೂರನ ನಾಡಲ್ಲಿ ದಾನಿಗಳಿಗೆ ಕೊರತೆಯಿಲ್ಲ. ಇಂತಹ ಸ್ಥಳ ಮಹಿಮೆ ನಮ್ಮ ಲಯನ್ಸ್ ಸದಸ್ಯರಿಗೆ ಪ್ರೇರಣೆ. ಸದುದ್ದೇಶದ ಕೊಡುಗೆ ನೀಡಲು ಯಾವಾಗಲೂ ಮುಂಚೂಣಿಯಲ್ಲಿ ಇರುತ್ತೇವೆ ಎಂದರು.

ನಮ್ಮ ಕೊಡುಗೆ ಶಾಲಾ ಮಕ್ಕಳಿಗೆ ಸದುಪಯೋಗವಾಗಲಿ. ಮಕ್ಕಳು ಕಲಿತು ಉತ್ತಮ ಪ್ರಜೆಗಳಾಗಿ ಭವಿಷ್ಯದಲ್ಲಿ ಕೊಡುಗೈ ದಾನಿಗಳಾಗಿ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ ಅಕ್ಕಿ ಮಾತನಾಡಿ, ಲಯನ್ಸ್ ಸಂಸ್ಥೆ ನಮ್ಮ ಮನವಿಗೆ ಸ್ಪಂದಿಸಿ ಅಮೂಲ್ಯ ಕೊಡುಗೆ ನೀಡಿದೆ ಎನ್ನುತ್ತಾ ಲಯನ್ಸ್ ನ ಪದಾಧಿಕಾರಿಗಳನ್ನು ಮತ್ತು ಸದಸ್ಯರನ್ನು ಅಭಿನಂದಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗಿರೀಶ್, ಲಯನ್ಸ್ ನ ಕಾರ್ಯವೈಖರಿ, ಕಾರ್ಯ ಕ್ಷೇತ್ರ ಮತ್ತು ಸೇವೆ ಬಗ್ಗೆ ಸಂಕ್ಷಿಪ್ತ ವಿವರ ನೀಡಿದರು. ಕಾರ್ಯಕ್ರಮಕ್ಕೆ ದಿಢೀರ್ ಭೇಟಿ ನೀಡಿದ BEO ಲೋಕೇಶಪ್ಪ ಉತ್ತಮ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸದಾವಕಾಶ ಒದಗಿ ಬಂದಿದೆ. ಸಾಮಾಜಿಕ ಕಳಕಳಿಯ ಈ ಸಮಾರಂಭ ಅತಿ ವಿರಳ. ಕೊಡುಗೆ ನೀಡಿದ ಸಂಸ್ಥೆಗೆ ತಾಲೂಕು ಶಿಕ್ಷಣ ಇಲಾಖೆಯ ಪ್ರತಿನಿಧಿಯಾಗಿ ವಿಶೇಷ ಅಭಿನಂದನೆ ಸಲ್ಲಿಸಿದರು.

ಮುಖ್ಯ ಶಿಕ್ಷಕ ನಾಗರಾಜ ಮಾತನಾಡಿ, ಶಿರಾಳಕೊಪ್ಪ ಲಯನ್ಸ್ ಸಂಸ್ಥೆ ಸುಮಾರು ವರ್ಷಗಳಿಂದ ಅತ್ಯುತ್ತಮ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಜನರ ಕಷ್ಟ ಕಾರ್ಪಣ್ಯ ಗಳಿಗೆ ಸ್ಪಂದಿಸುತ್ತಿದೆ. ದೇವರು ಸೇವೆ ಮಾಡಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸಿದರು. ಶಾಲಾ ವಿದ್ಯಾರ್ಥಿ ಪ್ರಾರ್ಥಿಸಿದರು. ಸಹಶಿಕ್ಷಕರು ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಪದಾಧಿಕಾರಿಗಳು, ಸದಸ್ಯರು, ಶಾಲಾ ಅಭಿವೃದ್ಧಿ ಮಂಡಳಿ ಸದಸ್ಯರು, ಸಹ ಶಿಕ್ಷಕರು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.