ಸಾಗರ : ತಾಲ್ಲೂಕಿನ ಹೊನ್ನೇಸರ ಉನ್ನತೀಕರಿಸಿದ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಶಾಲೆ ಬಿಟ್ಟು ಪರವೂರಿಗೆ ಹೋಗಿದ್ದನ್ನು ಗಮನಿಸಿದ ಶಿಕ್ಷಕಿ ಮಕ್ಕಳು ಇರುವ ಊರಿಗೆ ಹೋಗಿ ಪೋಷಕರ ಮನವೊಲಿಸಿ ಪುನಃ ಮಕ್ಕಳನ್ನು ಶಾಲೆಗೆ ಕರೆತಂದ ಘಟನೆ ನಡೆದಿದೆ.

ಹೊನ್ನೇಸರ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಶಾಲೆ ಪ್ರಾರಂಭವಾದಾಗಿನಿಂದ ತರಗತಿಗೆ ಹಾಜರಾಗಿರಲಿಲ್ಲ. ಯಾವ ಮಗುವೂ ಶಾಲೆಯಿಂದ ಹೊರಗೆ ಇರಬಾರದು ಎನ್ನುವ ಇಲಾಖೆಯ ನಿಯಮದ ಪ್ರಕಾರ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಹತ್ತಾರು ಬಾರಿ ಹೋಗಿದ್ದಾರೆ. ಆದರೆ ವಿದ್ಯಾರ್ಥಿಗಳ ಜೊತೆ ಪೋಷಕರು ಸಹ ಮನೆ ಬೀಗ ಹಾಕಿಕೊಂಡು ಹೋಗಿದ್ದರು. ಪೋಷಕರು ದೂರವಾಣಿ ಕರೆಗೆ ಸಹ ಸಿಗುತ್ತಿರಲಿಲ್ಲ.

ಮಕ್ಕಳು ಗೈರು ಹಾಜರಾಗಿರುವ ಕುರಿತು ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದರು. ಮಕ್ಕಳ ಪತ್ತೆಗಾಗಿ ಪ್ರಯತ್ನ ನಡೆದಿತ್ತು. ಈ ನಡುವೆ ಶಾಲೆಯ ಹಿರಿಯ ಶಿಕ್ಷಕಿ ಜಯಂತಿ ಎಚ್.ವಿ. ಅವರಿಗೆ ಮಕ್ಕಳು ಪೋಷಕರ ಜೊತೆ ಹೊಸನಗರ ತಾಲ್ಲೂಕಿನ ಸಂಪೆಕಟ್ಟೆಯ ಕುಂಬಾರಗೊಳಿ ಎನ್ನುವ ಗ್ರಾಮದಲ್ಲಿ ಇರುವುದು ತಿಳಿದು ಬಂದಿದೆ.

ಶಿಕ್ಷಕಿ ಜಯಂತಿ ಅವರು ಶನಿವಾರ ವೈಯಕ್ತಿಕ ಜವಾಬ್ದಾರಿ ತೆಗೆದುಕೊಂಡು ಕುಂಬಾರಗೊಳಿಗೆ ಹೋಗಿ, ಸ್ಥಳೀಯರ ಮೂಲಕ ವಿದ್ಯಾರ್ಥಿಗಳು ಇರುವ ಮನೆ ಪತ್ತೆ ಹಚ್ಚಿದ್ದಾರೆ. ಮಕ್ಕಳ ತಾಯಿ ಉಷಾ ಹಾಗೂ ಅವರ ಬಂಧುಗಳಿಗೆ ಶಿಕ್ಷಣದ ಮಹತ್ವ ತಿಳಿಸಿ ಮಕ್ಕಳನ್ನು ಶಾಲೆ ಬಿಡಿಸದಂತೆ ಮನವರಿಕೆ ಮಾಡಿದ್ದಾರೆ. ನಂತರ ಪೋಷಕರು ಐದನೇ ತರಗತಿ ವಿದ್ಯಾರ್ಥಿ ಸುಶಾನ್ ಹಾಗೂ ೩ನೇ ತರಗತಿ ಓದುತ್ತಿದ್ದ ಸಾನ್ವಿ ಅವರನ್ನು ಶಾಲೆಗೆ ಕಳಿಸಲು ಒಪ್ಪಿದ್ದಾರೆ.

ಶಿಕ್ಷಕಿ ಜಯಂತಿ ಪೋಷಕರ ಜೊತೆ ಮಾತುಕತೆ ನಂತರ ಮಕ್ಕಳಿಬ್ಬರನ್ನು ಕೂರಿಸಿಕೊಂಡು ಶಿಕ್ಷಣದ ಮಹತ್ವ ತಿಳಿಸಿ ಶಾಲೆಗೆ ಬರಲು ಮನವೊಲಿಸಿದ್ದಕ್ಕೆ ಮಕ್ಕಳಿಬ್ಬರೂ ಸೋಮವಾರದಿಂದ ಶಾಲೆಗೆ ಬರಲು ಒಪ್ಪಿದ್ದಾರೆ. ಹೊನ್ನೆಸರದಿಂದ ಸಂಪೆಕಟ್ಟೆಗೆ ಸುಮಾರು ೮೦ ಕಿ.ಮೀ. ಆಗುತ್ತದೆ. ಒಟ್ಟು ೧೬೦ ಕಿ.ಮೀ. ಕೊಡಚಾದ್ರಿ ತಪ್ಪಲಿನಲ್ಲಿರುವ ಕುಗ್ರಾಮಕ್ಕೆ ಶಿಕ್ಷಕಿ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಮರಳಿ ಕರೆತರುವಲ್ಲಿ ಶ್ರಮಿಸಿದ ಶಿಕ್ಷಕಿ ಜಯಂತಿ ಎಚ್.ವಿ. ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.