ಶಿವಮೊಗ್ಗ : ಜಿಲ್ಲೆಯ ಅಭಿವೃದ್ಧಿಗೆ ೨೦೦೦ ಕೋಟಿ ರೂ.ಗಳ ವಿಶೇಷ ಅನುದಾನವನ್ನು ಸರ್ಕಾರದಿಂದ ಪಡೆಯಲಾಗುವುದು ಎಂದು ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ಯಾರೆಂಟಿ ಯೋಜನೆಗಳನ್ನು ಹೊರತುಪಡಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ ಸುಮಾರು ೨೦೦೦ ಕೋಟಿ ರೂ,.ಗಳು ಬೇಕಾಗಬಹುದು ಮುಖ್ಯಮಂತ್ರಿಗೆ ಈಗಾಗಲೇ ಮನವಿ ಮಾಡಿದ್ದೇನೆ ಎಂದರು.

ಮೆಗ್ಗಾನ್ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗೆ ಸುಮಾರು ೭೦ ಕೋಟಿ ರೂ.ಗಳು ಬೇಕಾಗಬಹುದು. ಆಸ್ಪತ್ರೆಯನ್ನು ಉನ್ನತೀಕರಿಸಲಾಗುವುದು ಅಲ್ಲದೆ ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ಕೂಡ ಈಗಾಗಲೇ ಪ್ರಗತಿಯಲ್ಲಿದೆ. ಮಹಾತ್ಮಗಾಂಧಿ ನಗರವಿಕಾಸ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ೧೬೨ ಕಿ.ಮೀ. ರಸ್ತೆಯನ್ನು ೧೧೮ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
ಜಿಲ್ಲೆಗೆ ಒಂದು ಜಿಲ್ಲಾಡಳಿತ ಭವನದ ಅವಶ್ಯಕತೆಯಿದ್ದು, ಅದನ್ನು ಕೂಡ ನಿರ್ಮಾಣ ಮಾಡಲು ಈಗಾಗಲೇ ಪ್ರಯತ್ನಿಸಲಾಗಿದೆ. ಸಾರ್ವಜನಿಕರಿಗೆ ಎಲ್ಲಾ ರೀತಿಯ ಸೇವೆಗಳು ಒಂದೇ ಸೂರಿನಡಿ ಸಿಗುವಂತೆ ಮಾಡಲಾಗುವುದು ಮತ್ತು ಈಗಾಗಲೇ ಜೆಇಇ ಉಚಿತ ತರಬೇತಿ ತರಗತಿಗಳನ್ನು ನೀಡಲಾಗುತ್ತಿದೆ. ಈ ಯೋಜನೆಗೆ ಬಳಸಿದ ಹಣದಲ್ಲಿ ಇನ್ನೂ ೬ ಕೋಟಿ ರೂ. ಇದೆ. ಉಳಿದ ೬೦ ಸಾವಿರ ಮಕ್ಕಳಿಗೂ ಕೂಡ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು ಎಂದರು.
ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಲು ಈಗಾಗಲೇ ಪ್ರಯತ್ನ ನಡೆದಿದೆ. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಆದರೆ ಕಾನೂನಿನ ತೊಡಕು ಇರುವ ಕಡೆ ಸ್ವಲ್ಪ ಕಷ್ಟವಾಗುತ್ತದೆ. ಈಗಾಲೇ ಜಿಲ್ಲಾಡಳಿತ ಸಮೀಕ್ಷೆ ಕಾರ್ಯ ನಡೆಸುತ್ತಿದೆ ಎಂದರು.
ಈಗಾಗಲೇ ಒಳಮೀಸಲಾತಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ನಡೆಯಲಿದೆ. ಸಮೀಕ್ಷೆಯಿಂದ ಸಮಾನತೆ ಸಾಧಿಸಲು ಸಾಧ್ಯ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಂಕಿಅಂಶಗಳು ಮುಖ್ಯವಾಗುತ್ತವೆ. ಈ ಬಗ್ಗೆ ಹಲವು ದೂರುಗಳು ಕೂಡ ಇವೆ. ಇವೆಲ್ಲವನ್ನು ಇಟ್ಟುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.


ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂದಿಸಿದಂತೆ ಉತ್ತರ ನೀಡಿದ ಅವರು, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಈ ಯೋಜನೆಯನ್ನು ಮುಂದುವರೆಸಲಾಗುವುದು. ಈ ಬಗ್ಗೆ ಅನೇಕ ವಿರೋಧಗಳು ಕೂಡ ಇವೆ. ಇವುಗಳನ್ನು ಕೂಡ ಗಮನದಲ್ಲಿಟ್ಟುಕೊಂಡು ಮುಂದುವರಿಯಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ಕುಮಾರ್, ಜಿ.ಪಂ. ಸಿಇಓ ಹೇಮಂತ್ ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್, ಭೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಸೇರಿದಂತೆ ಇತರರಿದ್ದರು.

ಧರ್ಮಸ್ಥಳ ಮತ್ತು ವಿರೇಂದ್ರ ಹೆಗಡೆ ಅವರ ಬಗ್ಗೆ ವೈಯುಕ್ತಿಕವಾಗಿ ಗೌರವವಿದೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಷಡ್ಯಂತ್ರ ನಡೆದಿರಬಹುದು ಎಂಬ ಅಭಿಪ್ರಾಯವಿದೆ. ಆದರೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಸತ್ಯ ಏನು ಎಂಬುದನ್ನು ಬೆಳಕಿಗೆ ತರಲು ಸರ್ಕಾರ ತನಿಖೆ ನಡೆಸುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಎರಡೂ ಬಗೆಯ ಚರ್ಚೆಗಳು ನಡೆಯುತ್ತಿವೆ. ಅತಿಸೂಕ್ಷ್ಮ ವಿಷಯ ಇದಾಗಿದ್ದು, ಈ ಬಗ್ಗೆ ಮಾತಾಡದೆ ಇರುವುದೇ ಒಳ್ಳೆಯದು.
-ಮಧುಬಂಗಾರಪ್ಪ