ಆತ್ಮೀಯರೆಲ್ಲರಗೂ ನನ್ನ ಪ್ರೀತಿಯ ನಮನಗಳು. ಕಳೆದ 1996 ರಿಂದ ಪತ್ರಿಕಾರಂಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗಜೇಂದ್ರ ಸ್ವಾಮಿ ಎಸ್. ಕೆ. ಆದ ನಾನು 2011 ರ ಆಗಸ್ಟ್ 13 ರಿಂದ ತುಂಗಾತರಂಗ ಕನ್ನಡ ದಿನಪತ್ರಿಕೆಯ ಸಂಪಾದಕನಾಗಿ ಪತ್ರಿಕೆಯ ಸಿಹಿಕಹಿಗಳಲ್ಲಿ ಬೆರೆತ ದಿನ.
ಈ ಮೊದಲು ಜನವಾರ್ತೆ, ಉಷಾಮಹಿ, ಕಂಠೀರವ, ಕನ್ನಡಪ್ರಭ, ಆಕೃತಿ ಪತ್ರಿಕೆಗಳಲ್ಲಿ ವರದಿಗಾರನಾಗಿ ಮಾಡಿದ್ದ ಕಾರ್ಯ ತುಂಗಾತರಂಗ ದಿನಪತ್ರಿಕೆಯನ್ನು ಇಂದು ಈ ಮಟ್ಟಕ್ಕೆ ಬೆಳೆಸುವ ಹಾಗೂ ಅಪಾರ ಓದುಗರ ಪ್ರೀತಿಗೆ ಕಾರಣವಾದ ಅಂಶ ಎಂದರೆ ತಪ್ಪಾಗಲಿಕ್ಕಿಲ್ಲ.
ಭದ್ರಾವತಿ ತಾಲ್ಲೂಕಿನ ಅರಹತೊಳಲಿನಿಂದ ಬಂದ ನನಗೆ ಪ್ರತಿ ಹಂತದಲ್ಲಿ ಪತ್ರಿಕಾರಂಗದ ಹಿರಿಯರು, ಸ್ನೇಹಿತರು ನೀಡಿದ ಪ್ರೀತಿಯ ಕಾರಣದಿಂದ ಸಾಕಷ್ಟು ನಿರೀಕ್ಷಿತ ಪ್ರಯತ್ನಗಳನ್ನು ಪೂರೈಸಲಾಯಿತು. ಅದರೊಂದಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು.
ಇದಕ್ಕೆ ಮತ್ತೊಂದು ಮುಖ್ಯ ಕಾರಣವೆಂದರೆ ಬರಹದ ಶೈಲಿ ಎಂದೇ ಹೇಳಲು ಇಚ್ಚಿಸುತ್ತೇನೆ. ಕಳೆದ 29 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಕಲಿತದ್ದು, ಕಲಿಯುವಂತಹದ್ದು ಸಾಕಷ್ಟಿದೆ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ಅರಿತುಕೊಳ್ಳಲು ತುಂಗಾತರಂಗ ಪತ್ರಿಕೆ ವೇದಿಕೆಯಾಯಿತು ಎಂದರೆ ತಪ್ಪಾಗಲಿಕ್ಕಿಲ್ಲ.
ಪತ್ರಿಕೆಯ ನಿಕಟ ಪೂರ್ವ ಸಂಪಾದಕರಾದ ಜೇವ್ಹೀಯರ್ ಡೇವಿಡ್ ಅವರು ಗಜೇಂದ್ರ ಸ್ವಾಮಿ ಅವರಿಗಾದರೆ ಖಂಡಿತ ಪತ್ರಿಕೆಯನ್ನು ಕೊಡುತ್ತೇನೆ ಎಂದು ತಾವು ಕಟ್ಟಿ ಬೆಳೆಸಿದ 31 ವರ್ಷದ ಪತ್ರಿಕೆಯನ್ನು ನನಗೆ ನೀಡಿದರು. ಆ ಸಮಯದಲ್ಲಿ ನನಗೆ ಕೈ ಹಿಡಿದವರು ಆತ್ಮೀಯರು ಹಿರಿಯರು ಆದ ದೇವಕಾತಿಕೊಪ್ಪದ ಡಿ.ಬಿ. ವಿಜಯ್ ಕುಮಾರ್ ಅಣ್ಣ ಅವರು ಎಂದರೆ ತಪ್ಪಾಗಲಿಕ್ಕಿಲ್ಲ.
ಇದರ ಜೊತೆಗೆ ಪತ್ರಿಕೆಯನ್ನು ನೀನು ತೆಗೆದುಕೊಳ್ಳಲೇಬೇಕು. ನಿನಗೆ ಅದನ್ನು ನಡೆಸುವ ಆ ಶಕ್ತಿ ಇದೆ ಎಂದು ಪಕ್ಕದಲ್ಲಿ ನಿಂತು ಇಡೀ ವ್ಯವಸ್ಥೆಯನ್ನು ನೋಡಿಕೊಂಡವರು ನನ್ನ ಪ್ರೀತಿಯ ಛಲದಂಕ ಮಲ್ಲ ಪತ್ರಿಕೆಯ ಸಂಪಾದಕರಾದ ಪದ್ಮನಾಭ್ (ಪದ್ದಣ್ಣ) ಹಾಗೂ ಶಿವಮೊಗ್ಗ ಸಿಂಹ ಪತ್ರಿಕೆಯ ಸಂಪಾದಕರಾದ ಜಿ. ಚಂದ್ರಶೇಖರ್ ಮತ್ತಿತರರ ಪ್ರೀತಿಯಿಂದ ಇದನ್ನು ಜವಾಬ್ದಾರಿ ಎಂದು ಕೆಲಸ ಮಾಡಿದೆ.
ಇಂದಿನ ದುಬಾರಿ ದಿನಗಳಲ್ಲಿ ಪತ್ರಿಕೆ ಮಾಡುವುದು ಅತ್ಯಂತ ಕಷ್ಟದ ಕೆಲಸ ಎಂಬುದು ಅರ್ಥವಾಗುವಷ್ಟರಲ್ಲಿ ಪತ್ರಿಕೆಯ ಸಂಪಾದಕನಾಗಿದ್ದೆ. ಪತ್ರಿಕೆ ನಮಗೆ ತಲುಪುತ್ತಿಲ್ಲ ಎಂಬ ಕೊರಗನ್ನು ನೀಗಿಸಲು ಶಿವಮೊಗ್ಗದಲ್ಲಿ ಮೊಟ್ಟಮೊದಲ ಬಾರಿಗೆ ಆನ್ಲೈನ್ ಮಾರ್ಗಗಳನ್ನು ಹೊಸ ಹೊಸ ಬಗೆಯಲ್ಲಿ ಹುಡುಕಿದ ಖುಷಿ ನಮಗಿದೆ. ಇದಕೆ ಸ್ಪೂರ್ತಿ ಎಂದರೆ ಅಂದಿನ ಉಪವಿಭಾಗಾಧಿಕಾರಿ ವೈಶಾಲೆ ಮೇಮ್, ಸಿವಿ ರಾಘವೇಂದ್ರರಾವ್.
ಏಕೆಂದರೆ ಮೊದಲು ಬ್ಲಾಗ್ ಆರಂಭಿಸಿ, 2011 ರಿಂದಲೂ ನಿತ್ಯ ತುಂಗಾ ತರಂಗ ಗಜೇಂದ್ರ ಸ್ವಾಮಿ ಹೆಸರಿನ ಫೇಸ್ಬುಕ್ನಲ್ಲಿ ಪತ್ರಿಕೆಯನ್ನು ಹಾಕುತ್ತಿದ್ದೆ. ಅದನ್ನೂ ನೋಡಿ ನಕ್ಕವರು ಈಗ ಅವರೇ ತುಣುಕು ಸುದ್ದಿಗಳನ್ನು ಹಾಕಿಕೊಳ್ಳುತ್ತಿರುವುದನ್ನು ನೋಡಿದರೆ ಕೆಲವೊಮ್ಮೆ ಕಾಲ ಎಂತಹ ತಿರುವುಗಳನ್ನು ತರುತ್ತದೆ ಎಂಬುದನ್ನು ನಾನು ಸ್ವಂತ ನೋಡಿದ್ದೇನೆ ಎಂದರೆ ಇದು ಅತಿಶಯೋಕ್ತಿಯ ಮಾತಲ್ಲ.
2004 ರಿಂದ ಬಂದ ನನ್ನ ಮೊಬೈಲ್ ಹೊಸ ಹೊಸ ಬಗೆಯ ಆನ್ಲೈನ್ ವಿಷಯಗಳನ್ನು ಹುಡುಕುತ್ತಾ ಹೋಯಿತು. ಸುದ್ದಿ ಬರೆಯುವುದಕಷ್ಟೇ ಸೀಮಿತ ಮಾಡಿಕೊಂಡು ನಾನು ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಲೇಖನ ಬರೆದು ಅದಕ್ಕೆ ನೀಡುವ ಗೌರವ ಸಂಭಾವನೆಯಿಂದಲೇ ಖುಷಿ ಪಡುತ್ತಾ ದಿನದೂಕುತ್ತಿದ್ದೆ ಘಟನೆಗಳು ಈಗಲೂ ಮನದಲ್ಲಿ ಮೆಲುಕುಹಾಕುತ್ತಿವೆ.
ಅಂದಿನಿಂದಲೂ ಪತ್ರಿಕೆ ವಿಶೇಷಾಂಕ, ದಿನದರ್ಶಿಕೆ ಪ್ರತಿ ವರುಷವೂ ಬರುತ್ತಿದೆ.
2006ರಿಂದ ವಾಟ್ಸಾಪ್ನಲ್ಲಿ ಒಂದು ಗುಂಪಿನ ಮೂಲಕ ಕಳುಹಿಸಲು ಆರಂಭಿಸಿದ್ದೆವು. ಅದನ್ನು ನೋಡಿ ಅಂದು ಹಲ್ಲುಕಿಸಿದವರು ಈಗ ಅವರೇ ಆ ಗುಂಪಿನಲ್ಲಿ ನಿತ್ಯ ಪತ್ರಿಕೆ ಒಂದನ್ನು ಹಾಕುವ ಮೂಲಕ ನಮ್ಮ ಜೀವಂತಿಕೆಯು ಇದೆ ಎಂಬುದನ್ನು ತೋರಿಸುತ್ತಿದ್ದಾರೆ ಎಂಬುದನ್ನು ನಮ್ಮ ಬಹಳಷ್ಟು ಓದುಗರ ಅತ್ಯಂತ ಮುಕ್ತವಾಗಿ ಹೇಳುತ್ತಾರೆ.
ಯಾರಾದರೂ ಏನಾದರೂ ಸಾಧಿಸುತ್ತಾನೆ ಎಂದರೆ ಸಾಧ್ಯವಾದರೆ ಆತನನ್ನು ಹೊಗಳಿ ಸಾಧ್ಯವಾಗದಿದ್ದರೆ, ಸುಮ್ಮನಿದ್ದು ಬಿಡಿ. ಈಗ ತುಂಗಾ ತರಂಗ ದಿನಪತ್ರಿಕೆ 36 ಗುಂಪುಗಳಲ್ಲಿ ವಾಟ್ಸಪ್ ಮೂಲಕ ಬರುತ್ತಿದೆ. ರಾಜ್ಯದ ನಾನೂರಕ್ಕೂ ಹೆಚ್ಚು ಗುಂಪುಗಳಲ್ಲಿ ಹರಿದಾಡುತ್ತಿದೆ. ಓದುಗ ವರ್ಗ ಹೊಂದಿದೆ. ತುಂಗಾತರಂಗದ ಗುಂಪುಗಳಲ್ಲಿ ಕನಿಷ್ಠ 400ಕ್ಕೂ ಹೆಚ್ಚು ಜನರಿದ್ದಾರೆ. ಕೆಲವು ಗುಂಪುಗಳಲ್ಲಿ ತೆಗೆದುಕೊಳ್ಳಬಹುದಾದ ಜನರನ್ನ ಅಂದರೆ ಓದುಗರನ್ನು ಸೇರಿಸಿಕೊಳ್ಳಲಾಗಿದೆ, ಹಾಗೆಯೇ ಅವರೇ ಸೇರಿಸಿಕೊಂಡಿದ್ದಾರೆ ಎಂಬುದನ್ನು ಅತ್ಯಂತ ಖುಷಿಯಿಂದ ಹೇಳುತ್ತೇನೆ.
ಏಕೆಂದರೆ ಅದರ ಹಿಂದೆ ನಮ್ಮ ನಿರಂತರ ಪ್ರಯತ್ನ, ಜೊತೆಗೆ ಮುಂಜಾನೆ ಒಂದು ಹಾಡು ಈ ಒಂದು ಬೆಳವಣಿಗೆಗೆ ಕಾರಣ ಎಂಬುದನ್ನು ಖುಷಿಯಿಂದ ಹೇಳಲೇಬೇಕಾಗುತ್ತದೆ.
ಈಗ ಕಳೆದ ಐದು ವರ್ಷಗಳಿಂದ ತುಂಗಾತಂಗ ವೆಬ್ ಆರಂಭಗೊಂಡಿದ್ದು, ನಿಜವಾಗಿಯೂ ಅತಿ ಹೆಚ್ಚು ಓದುಗರನ್ನು ಅದು ಆಕರ್ಷಿಸಿದೆ. ಲಕ್ಷಗಳನ್ನು ದಾಟುತ್ತಿದೆ. ಇದಕ್ಕೆ ಕಾರಣ ನನ್ನ ಬಗ್ಗೆ ಅಭಿಮಾನವಿಟ್ಟು ಪ್ರೀತಿಸಿದ ಬೆಳೆಸಿದ ಹಿರಿಯರು ಹಾಗೂ ನನ್ನ ಪೂಜ್ಯ ತಂದೆ-ತಾಯಿ ಸಹೋದರರು ಪತ್ನಿ ಮಕ್ಕಳು ಹಾಗೂ ನನ್ನ ಜೊತೆ ಸದಾ ಕಾಲ ಪತ್ರಿಕೆಯ ಜೊತೆಗೆ ಇರುವ ಕೂಡ್ಲಿ ಸೋಮಶೇಖರ್, ಕೆ ರಾಕೇಶ್, ಕೆ ರವಿ ನಮ್ಮನ್ನಗಲಿದ ಹಿರಿಯರಾದ ನಿರಂಜನ ಮೂರ್ತಿ ಅವರನ್ನು ಅತ್ಯಂತ ಪ್ರೀತಿಯಿಂದ ಆತ್ಮೀಯವಾಗಿ ಗೌರವಿಸುತ್ತೇನೆ.
ತುಂಗಾತರಂಗ ದಿನಪತ್ರಿಕೆ ಓದುಗರ ಮನದಲ್ಲಿ ನಮ್ಮ ಪತ್ರಿಕೆ ಎಂಬ ಭಾವನೆಯನ್ನು ಮೂಡಿಸುವ ನಮ್ಮ ಸಾಮೂಹಿಕ ಬಳಗದ ಪ್ರಯತ್ನ ನಿಜಕ್ಕೂ ಈಗ ಅತ್ಯಂತ ಯಶಸ್ವಿಯಾಗಿದೆ. ಯಾರ ಬಳಿಯೂ ಕೈ ಚಾಚವೇ ಸಿಗುವ ಕೆಲವೇ ಕೆಲವು ಸರ್ಕಾರಿ ಜಾಹೀರಾತುಗಳ ಜೊತೆ ಪತ್ರಿಕೆಯ ಪ್ರೀತಿಗೆ ಜಾಹಿರಾತು ನೀಡುವ ನನ್ನೆಲ್ಲ ಪ್ರೀತಿಯ ಆತ್ಮೀಯರರಿಗೆ, ಬೆಳೆಸಿದ ಓದುಗರಿಗೆ ಹಾಗೂ ಪತ್ರಿಕೆ ಓದುವ ಚಂದಾದಾರರಿಗೆ ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಕಡೆ ಇರುವಂತಹ ನನ್ನೆಲ್ಲ ಪ್ರೀತಿಯ ಪತ್ರಿಕಾ ರಂಗದ ಸ್ನೇಹಿತರಿಗೆ, ಗುರುಹಿರಿಯರಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೆರವಾದ ಎಲ್ಲರಿಗೂ ನನ್ನ ಪ್ರೀತಿಯ ಪ್ರಣಾಮಗಳು.
ಬರೆದರೆ ಸಾಕಾಗದಷ್ಟು ಮಾಹಿತಿ ಇದೆ. ಈಗಿಷ್ಟು ಸಾಕು. ನಿಮ್ಮ ಪ್ರೀತಿಗೆ ನನ್ನ ಹಾಗೂ ತುಂಗಾತರಂಗ ಬಳಗದ ಆತ್ಮೀಯ ನಮನಗಳು.
ಗಜೇಂದ್ರ ಸ್ವಾಮಿ ಎಸ್. ಕೆ.
ಸಂಪಾದಕರು
ತುಂಗಾತರಂಗ ದಿನಪತ್ರಿಕೆ